

ನವದೆಹಲಿ: ಪ್ರಸಕ್ತ ನಡೆಯುತ್ತಿರುವ 2025ರ ಮಹಿಳಾ ಏಕದಿನ ವಿಶ್ವಕಪ್ನಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ (Team India). ಆಡಿರುವ ಎರಡು ಪಂದ್ಯಗಳಲ್ಲಿಯೂ ಸೋಲುಂಡಿದೆ. ಈ ಮಧ್ಯೆ, ಆಸ್ಟ್ರೇಲಿಯಾ ಎದುರು ಪಂದ್ಯ ಸೋತ ಹರ್ಮನ್ಪ್ರೀತ್ ಕೌರ್ ಪಡೆಯು ಸದ್ಯ ಸೆಮಿಫೈನಲ್ಗೆ ಎಂಟ್ರಿಕೊಡುವ ಅವಕಾಶಗಳಿಂದ ಕೊಂಚ ದೂರ ಸರಿದಿದೆ.
ಆಸೀಸ್ ವಿರುದ್ಧ ಸೋಲು ಅನುಭವಿಸಿದ ಭಾರತಕ್ಕೆ ಇದೀಗ ಮತ್ತೊಂದು ಆಘಾತ ಎದುರಾಗಿದೆ. ಐಸಿಸಿ ಭಾರತೀಯ ಮಹಿಳಾ ತಂಡಕ್ಕೆ ದಂಡ ವಿಧಿಸಿದೆ. ವಿಶಾಖಪಟ್ಟಣದಲ್ಲಿ ನಡೆದ ಆಸೀಸ್ ವಿರುದ್ಧದ ಪಂದ್ಯದಲ್ಲಿ ಮಂದಗತಿಯ ಓವರ್ ರೇಟ್ ದಾಖಲಿಸಿದ್ದಕ್ಕಾಗಿ ಟೀಮ್ ಇಂಡಿಯಾ ತಂಡಕ್ಕೆ ದಂಡ ವಿಧಿಸಲಾಗಿದೆ.
ಐಸಿಸಿ ನೀತಿ ಸಂಹಿತೆ 2.22ರ ಪ್ರಕಾರ, ಟೀಮ್ ಇಂಡಿಯಾ ನಿಗದಿತ ಸಮಯದಲ್ಲಿ ಓವರ್‌ಗಳನ್ನು ಪೂರ್ಣಗೊಳಿಸಲಿಲ್ಲ. ಕೊಟ್ಟಿದ್ದ ಸಮಯಕ್ಕಿಂತ ಒಂದು ಓವರ್ ಕಡಿಮೆ ಬೌಲಿಂಗ್ ಮಾಡಿದ್ದಕ್ಕಾಗಿ ಭಾರತೀಯ ಆಟಗಾರ್ತಿಯರ ಪಂದ್ಯ ಶುಲ್ಕದ ಶೇ.5ರಷ್ಟು ದಂಡ ವಿಧಿಸಲಾಗಿದೆ. ಈ ಬಗ್ಗೆ ತಂಡದ ನಾಯಕಿ ಕೌರ್ಗೆ ಐಸಿಸಿ ಮಾಹಿತಿ ನೀಡಿದೆ.
ಪ್ರಸ್ತುತ ಅಂಕಪಟ್ಟಿಯಲ್ಲಿ ಟೀಮ್ ಇಂಡಿಯಾ ನಾಲ್ಕನೇ ಸ್ಥಾನದಲ್ಲಿದೆ. ತನ್ನ ಮುಂದಿನ ಪಂದ್ಯವನ್ನು ಇಂಗ್ಲೆಂಡ್ ವಿರುದ್ಧ ಆಡಲಿರುವ ಭಾರತ, ಗೆಲುವಿನ ಭರವಸೆಯಲ್ಲಿದೆ. ಈ ಪಂದ್ಯವು ಅಕ್ಟೋಬರ್ 19ರಂದು ಇಂದೋರ್‌ನಲ್ಲಿ ನಡೆಯಲಿದೆ. ಅಗ್ರ ಮೂರು ಸ್ಥಾನಗಳಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳಿವೆ. ಸೆಮಿಫೈನಲ್ ತಲುಪಲು ಟೀಮ್ ಇಂಡಿಯಾ ಇನ್ನುಳಿದ ಮೂರು ಪಂದ್ಯಗಳಲ್ಲಿ ಜಯ ಸಾಧಿಸಲೇಬೇಕು,(ಏಜೆನ್ಸೀಸ್).