ಟೆಸ್ಟ್​ ವಿಶ್ವಕಪ್​ನಲ್ಲಿ ಬೋನಸ್​ ಅಂಕ ಪದ್ಧತಿ ಜಾರಿಗೊಳಿಸಲು ಐಸಿಸಿ ಚಿಂತನೆ!

web wtc
Published on

ನವದೆಹಲಿ: ಮುಂದಿನ 2025&27ರ 4ನೇ ಆವೃತ್ತಿಯ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ನಲ್ಲಿ (ಡಬ್ಲ್ಯುಟಿಸಿ) ಬೋನಸ್​ ಅಂಕಗಳನ್ನು ನೀಡುವ ಪದ್ಧತಿಯನ್ನು ಜಾರಿಗೆ ತರುವ ಬಗ್ಗೆ ಐಸಿಸಿ ಚಿಂತನೆ ನಡೆಸಿದೆ. ಏಪ್ರಿಲ್​ನಲ್ಲಿ ನಡೆಯಲಿರುವ ಐಸಿಸಿ ಮಂಡಳಿ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ.

ಡಬ್ಲ್ಯುಟಿಸಿಯ ಹಾಲಿ ಅಂಕ ಪದ್ಧತಿಯ ಅನ್ವಯ ಗೆಲುವಿಗೆ 12, ಟೈಗೆ 6 ಮತ್ತು ಡ್ರಾಕ್ಕೆ 4 ಅಂಕಗಳನ್ನು ನೀಡಲಾಗುತ್ತಿದೆ. ಆದರೆ 2025&27ರಿಂದ ದೊಡ್ಡ ಅಂತರದ ಗೆಲುವುಗಳಿಗೆ ಮತ್ತು ಉನ್ನತ ಶ್ರೇಯಾಂಕಿತ ತಂಡಗಳ ಎದುರಿನ ಗೆಲುವಿಗೆ ಬೋನಸ್​ ಅಂಕವನ್ನು ನೀಡುವ ಬಗ್ಗೆ ಐಸಿಸಿ ಚಿಂತನೆ ನಡೆಸಿದೆ.

ಇನಿಂಗ್ಸ್​ ಅಂತರದ ಮತ್ತು 100 ರನ್​ಗಳಿಗಿಂತ ಹೆಚ್ಚಿನ ಅಂತರದ ಗೆಲುವುಗಳಿಗೆ ಬೋನಸ್​ ಅಂಕ ನೀಡುವ ಕುರಿತು ಯೋಚಿಸಲಾಗುತ್ತಿದೆ. ಅಲ್ಲದೆ ಉನ್ನತ ಶ್ರೇಯಾಂಕಿತ ತಂಡಗಳ ಎದುರು ಗಳಿಸುವ ಗೆಲುವುಗಳಿಗೆ ಡಬ್ಲ್ಯುಟಿಸಿಯಲ್ಲಿ ಹೆಚ್ಚಿನ ಮಹತ್ವ ನೀಡಲಾಗುತ್ತಿಲ್ಲ. ಹೀಗಾಗಿ ಭಾರತ, ಆಸ್ಟ್ರೆಲಿಯಾ, ಇಂಗ್ಲೆಂಡ್​ನಂಥ ಉನ್ನತ ಶ್ರೇಯಾಂಕಿತ ತಂಡಗಳ ಎದುರು ಗಳಿಸುವ ಗೆಲುವುಗಳಿಗೆ ಬೋನಸ್​ ಅಂಕ ನೀಡುವ ಬಗ್ಗೆ ಚಿಂತನೆ ನಡೆದಿದೆ.

ವಿದೇಶಿ ನೆಲದಲ್ಲಿ ಗಳಿಸುವ ಗೆಲುವುಗಳಿಗೂ ಹೆಚ್ಚುವರಿ ಅಂಕ ನೀಡುವ ಬಗ್ಗೆಯೂ ಐಸಿಸಿ ಚಿಂತನೆ ನಡೆಸಿದೆ. ಕಳೆದ ವರ್ಷ ನ್ಯೂಜಿಲೆಂಡ್​ ತಂಡ ಭಾರತಕ್ಕೆ ಹೋಗಿ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿತು. ಭಾರತದಲ್ಲಿ ಪ್ರವಾಸಿ ತಂಡಗಳು ಗೆಲ್ಲಲು ಪರದಾಡುತ್ತಿದ್ದಾಗ ಕಿವೀಸ್​ ಕ್ಲೀನ್​ಸ್ವೀಪ್​ ಸಾಧಿಸಿತು. ಆದರೆ ಅದರ ಈ ಅಮೋಘ ಸಾಧನೆಗೆ ಯಾವುದೇ ಹೆಚ್ಚುವರಿ ಅಂಕ ದೊರೆತಿರಲಿಲ್ಲ. ತವರಿನಲ್ಲಿ ಮಾತ್ರ ಪ್ರಾಬಲ್ಯ ಸಾಧಿಸದೆ, ವಿದೇಶದಲ್ಲೂ ಗೆಲ್ಲುವುದಕ್ಕೆ ಸ್ಫೂರ್ತಿ ತುಂಬಬೇಕಿದೆ ಎಂದು ಐಸಿಸಿ ಮೂಲಗಳು ತಿಳಿಸಿವೆ. ಐಸಿಸಿ ಸಭೆಯಲ್ಲಿ ಎರಡು ಸ್ತರಗಳ ಟೆಸ್ಟ್​ ಕ್ರಿಕೆಟ್​ ವ್ಯವಸ್ಥೆಯ ಬಗ್ಗೆಯೂ ಚರ್ಚೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net