

ದುಬೈ: ಸ್ಟಂಪಿಂಗ್ ಪರಿಶೀಲನೆ ಮತ್ತು ಕನ್ಕಷನ್ ಬದಲಿ ಆಟಗಾರನ ನಿಯಮಾವಳಿಯಲ್ಲಿ ಐಸಿಸಿ ಕೆಲ ತಿದ್ದುಪಡಿಗಳನ್ನು ಮಾಡಿದೆ. ಇದರನ್ವಯ ಇನ್ನು ಮುಂದೆ ತೃತೀಯ ಅಂಪೈರ್ಗಳು ಸ್ಟಂಪಿಂಗ್ ಪರಿಶೀಲಿಸುವಾಗ ಕಾಟ್-ಬಿಹೈಂಡ್ಅನ್ನು (ಕೀಪರ್ ಕ್ಯಾಚ್) ಗಮನಕ್ಕೆ ತೆಗೆದುಕೊಳ್ಳುವುದಿಲ್ಲ. ಸೈಡ್ ಕ್ಯಾಮರಾದ ಮರುಪ್ರಸಾರವನ್ನು ಮಾತ್ರ ಆಧರಿಸಿ ಸ್ಟಂಪಿಂಗ್ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ. ಕಾಟ್-ಬಿಹೈಂಡ್ ಬಗ್ಗೆ ಪರಿಶೀಲನೆ ನಡೆಸಬೇಕಿದ್ದರೆ ಪ್ರತ್ಯೇಕವಾಗಿ ಡಿಆರ್ಎಸ್ ಮೊರೆ ಹೋಗಬೇಕಾಗುತ್ತದೆ.
ಕಳೆದ ವರ್ಷ ಭಾರತ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಆಸೀಸ್ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ, ತಮ್ಮ ತಂಡದ ಡಿಆರ್ಎಸ್ ಆಯ್ಕೆಗಳು ಮುಗಿದ ಬಳಿಕ ಸ್ಟಂಪಿಂಗ್ ಮಾಡುವ ಮೂಲಕ ಕಾಟ್&ಬಿಹೈಂಡ್ ಪರಿಶೀಲನೆಯನ್ನೂ ಬಳಸಿಕೊಂಡಿದ್ದರು. ಮುಂದಿನ ದಿನಗಳಲ್ಲಿ ಫೀಲ್ಡಿಂಗ್ ತಂಡ ಡಿಆರ್ಎಸ್ ಆಯ್ಕೆ ಮುಗಿದ ಬಳಿಕ ಅಥವಾ ಡಿಆರ್ಎಸ್ ಆಯ್ಕೆ ಉಳಿಸಿಕೊಳ್ಳುವ ಸಲುವಾಗಿ ಕಾಟ್&ಬಿಹೈಂಡ್ ತೀರ್ಪಿಗೆ ಸ್ಟಂಪಿಂಗ್ ಮೂಲಕ ಮತ್ತೊಂದು ಮಾರ್ಗದಲ್ಲಿ ಮೊರೆ ಹೋಗುವುದನ್ನು ತಪ್ಪಿಸಬಹುದಾಗಿದೆ. ಇನ್ನು ಮುಂದೆ ಚೆಂಡು ಬ್ಯಾಟ್ಗೆ ಸ್ಪರ್ಶಿಸಿದೆಯೇ ಎಂಬ "ಸ್ನಿಕ್' ಪರಿಶೀಲಿಸದೆ ಸೈಡ್ ಕ್ಯಾಮರಾ ಚಿತ್ರಣದ ಮೂಲಕ ಸ್ಟಂಪಿಂಗ್ ಬಗ್ಗೆ ಮಾತ್ರ ತೀರ್ಪು ನೀಡಲಾಗುವುದು. ಇದಲ್ಲದೆ ಆಟಗಾರರ ತಲೆಗೆ ಏಟು ಬಿದ್ದು ಕನ್ಕಷನ್ ರೂಲ್ಸ್ ಮೂಲಕ ಬೇರೆ ಆಟಗಾರರನ್ನು ಸೇರಿಸಿಕೊಳ್ಳುವ ನಿಯಮವನ್ನೂ ತಿದ್ದುಪಡಿ ಮಾಡಲಾಗಿದೆ.
ಕನ್ಕಷನ್ಗೆ ಒಳಗಾದ ಬೌಲರ್ ಬೌಲಿಂಗ್ನಿಂದ ನಿಷೇಧಕ್ಕೊಳಗಾಗಿದ್ದರೆ, ಆತನ ಬದಲಿಗೆ ತಂಡ ಸೇರಿದ ಆಟಗಾರನಿಗೂ ಇನ್ನೂ ಬೌಲಿಂಗ್ಗೆ ಅವಕಾಶವಿರುವುದಿಲ್ಲ. ಜತೆಗೆ ಆಟಗಾರನೊಬ್ಬ ಮೈದಾನದಲ್ಲಿ ಗಾಯಗೊಂಡಾಗ ಆತನ ಗಾಯದ ಚಿಕಿತ್ಸೆ ಅಥವಾ ಪರಿಶೀಲನೆಗೆ ಗರಿಷ್ಠ 4 ನಿಮಿಷಗಳ ವಿರಾಮವನ್ನು ಐಸಿಸಿ ನಿಗದಿಪಡಿಸಿದೆ.