2025ರ ಐಸಿಸಿ ಚಾಂಪಿಯನ್ಸ್​ ಟ್ರೋಫಿ ಏಕದಿನವಲ್ಲ, ಟಿ20 ಕ್ರಿಕೆಟ್​ ಟೂರ್ನಿ? ಡಿಸ್ನಿ-ಸ್ಟಾರ್​ ಬೇಡಿಕೆ ಅಂಗೀಕರಿಸುವುದೇ ಐಸಿಸಿ?

champs web
Published on

ನವದೆಹಲಿ: ಪಾಕಿಸ್ತಾನದ ಆತಿಥ್ಯದಲ್ಲಿ ನಿಗದಿಯಾಗಿರುವ 2025ರ ಐಸಿಸಿ ಚಾಂಪಿಯನ್ಸ್​ ಟ್ರೋಫಿಯನ್ನು ಏಕದಿನಕ್ಕೆ ಬದಲಾಗಿ ಟಿ20 ಕ್ರಿಕೆಟ್​ ಪ್ರಕಾರದಲ್ಲಿ ಆಯೋಜಿಸುವ ಸಾಧ್ಯತೆ ಕಾಣಿಸಿದೆ. ಟೂರ್ನಿಯ ನೇರಪ್ರಸಾರ ಹಕ್ಕು ಹೊಂದಿರುವ ಡಿಸ್ನಿ-ಸ್ಟಾರ್​ ಸಂಸ್ಥೆ, ಏಕದಿನಕ್ಕೆ ಬದಲಾಗಿ ಟಿ20 ಪ್ರಕಾರದಲ್ಲಿ ಟೂರ್ನಿ ಆಯೋಜಿಸುವಂತೆ ಐಸಿಸಿ ಮುಂದೆ ಬೇಡಿಕೆ ಇಟ್ಟಿದೆ. ಏಕದಿನ ಕ್ರಿಕೆಟ್​ ಮಾದರಿಯ ಕುಸಿಯುತ್ತಿರುವ ಜನಪ್ರಿಯತೆ ಮತ್ತು ಟಿ20ಗಿಂತ ಕಡಿಮೆ ಆರ್ಥಿಕ ಲಾಭದಾಯಕವಾಗಿರುವುದನ್ನು ಇದು ಸೂಚಿಸುತ್ತಿದೆ.

ಹಾಲಿ ವೇಳಾಪಟ್ಟಿಯ ಪ್ರಕಾರ ಐಸಿಸಿ, 2025 ಮತ್ತು 2029ರಲ್ಲಿ ಚಾಂಪಿಯನ್ಸ್​ ಟ್ರೋಫಿ ಮತ್ತು 2024, 2026, 2028, 2030ರಲ್ಲಿ ಟಿ20 ವಿಶ್ವಕಪ್​ ನಿಗದಿಪಡಿಸಿದೆ. ಜತೆಗೆ 2027ರಲ್ಲಿ ದಕ್ಷಿಣ ಆಫ್ರಿಕಾ-ಜಿಂಬಾಬ್ವೆ ಹಾಗೂ 2031ರಲ್ಲಿ ಭಾರತ-ಬಾಂಗ್ಲಾದಲ್ಲಿ ಏಕದಿನ ವಿಶ್ವಕಪ್​ ನಿಗದಿಪಡಿಸಿದೆ. ಚಾಂಪಿಯನ್ಸ್​ ಟ್ರೋಫಿಯೂ ಟಿ20 ಟೂರ್ನಿಯಾಗಿ ಬದಲಾದರೆ, ಮುಂದಿನ 4 ವರ್ಷ ಅಂದರೆ 2027ರವರೆಗೆ ಐಸಿಸಿಯ ಯಾವುದೇ ಏಕದಿನ ಟೂರ್ನಿ ಇಲ್ಲದಂತಾಗುತ್ತದೆ. 2024ರಿಂದ 2027ರವರೆಗಿನ 4 ವರ್ಷಗಳ ಅವಧಿಗೆ ಭಾರತೀಯ ಮಾರುಕಟ್ಟೆಯಲ್ಲಿ ಐಸಿಸಿ ಟೂರ್ನಿಗಳನ್ನು ನೇರಪ್ರಸಾರ ಮಾಡುವ ಹಕ್ಕನ್ನು 25 ಸಾವಿರ ಕೋಟಿ ರೂ.ಗಳಿಗೆ ಪಡೆದುಕೊಂಡಿರುವ ಡಿಸ್ನಿ-ಸ್ಟಾರ್​, ಏಕದಿನಕ್ಕಿಂತ ಟಿ20 ಟೂರ್ನಿ ಲಾಭದಾಯಕವೆಂದು ಪರಿಗಣಿಸಿದೆ.

ಹಾಲಿ ವಿಶ್ವಕಪ್​ನಲ್ಲಿ ಅಗ್ರ 8 ಸ್ಥಾನ ಪಡೆದ ತಂಡಗಳಿಗೆ ಚಾಂಪಿಯನ್ಸ್​ ಟ್ರೋಫಿ ಅರ್ಹತೆ ನೀಡಲಾಗುತ್ತಿದೆ. ಆದರೆ, ಇದು ಟಿ20 ಟೂರ್ನಿಯಾದರೆ, ಏಕದಿನದ ನಿರ್ವಹಣೆ ಆಧಾರದಲ್ಲಿ ಟಿ20 ಟೂರ್ನಿಗೆ ಅರ್ಹತೆ ನೀಡುವ ಮಾನದಂಡ ಟೀಕೆಗೆ ಗುರಿಯಾಗಲಿದೆ.

ಲಂಕಾ ಮಂಡಳಿ ಅಮಾನತುಗೊಳಿಸಿದ ಐಸಿಸಿ
ಶ್ರೀಲಂಕಾ ಕ್ರಿಕೆಟ್​ ಮಂಡಳಿಯನ್ನು (ಎಸ್​ಎಲ್​ಸಿ) ಐಸಿಸಿ ತಕ್ಷಣದಿಂದಲೇ ಅನ್ವಯಿಸುವಂತೆ ಅಮಾನತುಗೊಳಿಸಿದೆ. ವಿಶ್ವಕಪ್​ನಲ್ಲಿ ಶ್ರೀಲಂಕಾ ತೋರಿದ ಕಳಪೆ ನಿರ್ವಹಣೆಯ ಬಳಿಕ ಲಂಕಾ ಮಂಡಳಿಯಲ್ಲಿ ಸರ್ಕಾರದ ಹಸ್ತಕ್ಷೇಪ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ಇದರಿಂದಾಗಿ ಇನ್ನು ಈ ರ್ನಿಬಂಧ ತೆರವಾಗುವವರೆಗೆ ಲಂಕಾ ತಂಡ ಐಸಿಸಿಯ ಯಾವುದೇ ಟೂರ್ನಿಯಲ್ಲಿ ಆಡುವಂತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net