

ದುಬೈ: ಎಂಟು ವರ್ಷಗಳ ಬಳಿಕ ಪುನರಾರಂಭ ಕಂಡಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಅಭಿಯಾನ ಆರಂಭಿಸಲು ಟೀಮ್ ಇಂಡಿಯಾ ಸಿದ್ಧವಾಗಿದೆ. ಎರಡು ಬಾರಿಯ ಚಾಂಪಿಯನ್ ಭಾರತ ತಂಡ ದುಬೈ ಸ್ಟೇಡಿಯಂನಲ್ಲಿ ಗುರುವಾರ ನಡೆಯಲಿರುವ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸಲಿದ್ದು, ಶುಭಾರಂಭ ಕಾಣುವ ತವಕದಲ್ಲಿದೆ.
2023ರಲ್ಲಿ ತವರಿನಲ್ಲಿ ನಡೆದ ಏಕದಿನ ವಿಶ್ವಕಪ್ನಲ್ಲಿ ಸತತ 10 ಪಂದ್ಯ ಜಯದೊಂದಿಗೆ ಪ್ರಾಬಲ್ಯ ಸಾಧಿಸಿ ನಂತರ ಫೈನಲ್ನಲ್ಲಿ ಎಡವಿದ್ದ ಭಾರತ ತಂಡ ಕಳೆದ ವರ್ಷ ಟಿ20 ವಿಶ್ವಕಪ್ ಜಯಿಸುವ ಮೂಲಕ ದಶಕದ ಐಸಿಸಿ ಟ್ರೋಫಿ ಬರ ನೀಗಿಸಿಕೊಂಡಿತ್ತು. ಇದೀಗ 12 ವರ್ಷಗಳ ನಂತರ ಚಾಂಪಿಯನ್ಸ್ ಟ್ರೋಫಿ ಜಯಿಸುವ ಕನಸಿನೊಂದಿಗೆ ಭಾರತ ತಂಡ ಕಣಕ್ಕಿಳಿಯಲಿದೆ.
ಭಾರತ ತಂಡ ಟೂರ್ನಿಯ ಫೇವರಿಟ್ ತಂಡಗಳಲ್ಲಿ ಒಂದಾಗಿದ್ದರೂ ತನ್ನದೇ ಕೆಲ ಆಂತರಿಕ ಸಮಸ್ಯೆಗಳಿಂದಾಗಿ ಸವಾಲಿನ ಹಾದಿ ಎದುರಿಸುತ್ತಿದೆ. ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಗೈರು ಭಾರತಕ್ಕೆ ಬಲುದೊಡ್ಡ ಹಿನ್ನಡೆ ಎನಿಸಿದೆ. ಸ್ಟಾರ್ ಬ್ಯಾಟರ್ಗಳಾದ ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಕಳೆದ ಕೆಲ ಸಮಯದಿಂದ ರನ್ಬರ ಎದುರಿಸಿದ್ದಾರೆ. ಶುಭಮಾನ್ ಗಿಲ್ ದ್ವಿಪಯ ಸರಣಿಗಳ ಯಶಸ್ಸನ್ನು ಐಸಿಸಿ ಟೂರ್ನಿಯಲ್ಲೂ ಪುನರಾವರ್ತಿಸುವ ಒತ್ತಡದಲ್ಲಿದ್ದಾರೆ. ಅನುಭವಿ ವೇಗಿ ಮೊಹಮದ್ ಶಮಿ ಇತ್ತೀಚೆಗಷ್ಟೇ ಪೂರ್ಣ ಫಿಟ್ನೆಸ್ ಕಂಡುಕೊಂಡಿದ್ದು, 2023ರ ವಿಶ್ವಕಪ್ ಲಯಕ್ಕೆ ಮರಳಲು ಶಕ್ತರಾಗುವರೇ ಎಂಬ ಕುತೂಹಲವಿದೆ. ಇನ್ನು ಭಾರತ ತಂಡದಲ್ಲಿ ಐವರು ಸ್ಪಿನ್ನರ್ಗಳಿಗೆ ಸ್ಥಾನ ನೀಡಲಾಗಿದ್ದು, ಈ ಸ್ಪಿನ್ ಕಾರ್ಯತಂತ್ರ ಎಷ್ಟರ ಮಟ್ಟಿಗೆ ಯಶಸ್ಸು ಕಾಣಲಿದೆ ಎಂಬುದು ನಿರ್ಣಾಯಕ ಪಾತ್ರ ವಹಿಸಲಿದೆ. ಮುಂದಿನ ಪಾಕಿಸ್ತಾನ ವಿರುದ್ಧದ ಹೈವೋಲ್ಟೇಜ್ ಪಂದ್ಯಕ್ಕೆ ಮುನ್ನ ಭಾರತ ಆತ್ಮವಿಶ್ವಾಸ ವೃದ್ಧಿಸುವಂಥ ನಿರಾಯಾಸ ಗೆಲುವಿನ ನಿರೀೆಯನ್ನೂ ಹೊಂದಿದೆ.
ಟೀಮ್ ನ್ಯೂಸ್:
ಭಾರತ: ಭಾರತೀಯ ಬ್ಯಾಟಿಂಗ್ ವಿಭಾಗದಲ್ಲಿ ಆಯ್ಕೆ ಗೊಂದಲಗಳಿಲ್ಲ. ಆದರೆ 5ನೇ ಕ್ರಮಾಂಕದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಅಥವಾ ಅಕ್ಷರ್ ಪಟೇಲ್ ಆಡುವರೇ ಎಂಬ ಕೌತುಕವಿದೆ. ಶಮಿ ಜತೆಗೆ ಎಡಗೈ ವೇಗಿ ಅರ್ಷದೀಪ್ ಹೊಸ ಚೆಂಡು ಹಂಚಿಕೊಳ್ಳುವ ನಿರೀೆ ಇದ್ದು, ಹಾರ್ದಿಕ್ 3ನೇ ವೇಗಿಯಾಗಿ ಬಳಕೆಯಾಗಲಿದ್ದಾರೆ. ಇದರಿಂದ ಭಾರತ ಮೂವರು ಸ್ಪಿನ್ನರ್ಗಳೊಂದಿಗೆ ಕಣಕ್ಕಿಳಿಯಲಿದೆ. ತಜ್ಞ ಸ್ಪಿನ್ನರ್ ಸ್ಥಾನಕ್ಕೆ ಕುಲದೀಪ್&ವರುಣ್ ಚಕ್ರವರ್ತಿ ನಡುವೆ ಪೈಪೋಟಿ ಇದೆ.
ಸಂಭಾವ್ಯ ತಂಡ: ರೋಹಿತ್ ಶರ್ಮ (ನಾಯಕ), ಶುಭಮಾನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿ.ಕೀ), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್/ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್, ಮೊಹಮದ್ ಶಮಿ.
ಬಾಂಗ್ಲಾದೇಶ: ಪ್ರಮುಖ ಬ್ಯಾಟರ್ಗಳ ಫಾರ್ಮ್ ಕೊರತೆಯಿಂದಾಗಿ ಬಾಂಗ್ಲಾದೇಶ ತಂಡ ಹಿನ್ನಡೆ ಎದುರಿಸುತ್ತಿದ್ದರೂ, ವೇಗಿಗಳಾದ ಮುಸ್ತಾಫಿಜುರ್, ಟಸ್ಕಿನ್, ನಹಿದ್ ರಾಣಾ ಭಾರತೀಯ ಬ್ಯಾಟರ್ಗಳಿಗೆ ಸವಾಲೊಡ್ಡಬಹುದು. ಬಾಂಗ್ಲಾದ ಸ್ಪಿನ್ ವಿಭಾಗವೂ ಈಗ ಹಿಂದಿನಷ್ಟು ಬಲಶಾಲಿಯಾಗಿಲ್ಲ. ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಿರುವ ಒಟ್ಟು 12 ಪಂದ್ಯಗಳಲ್ಲಿ ಎರಡರಲ್ಲಷ್ಟೇ ಗೆದ್ದಿರುವ ಕಳಪೆ ದಾಖಲೆಯೂ ಬಾಂಗ್ಲಾ ತಂಡದ್ದಾಗಿದೆ.
ಸಂಭಾವ್ಯ ತಂಡ: ತಂಜಿದ್ ಹಸನ್, ಸೌಮ್ಯ ಸರ್ಕಾರ್, ನಜ್ಮುಲ್ ಹೊಸೈನ್ ಶಾಂಟೊ (ನಾಯಕ), ತೌಹಿದ್ ಹೃದಯ್, ಮುಶ್ಫಿಕರ್ ರಹೀಂ (ವಿ.ಕೀ), ಮೊಹಮದುಲ್ಲಾ, ಮೆಹಿದಿ ಹಸನ್ ಮಿರಾಜ್, ರಿಷದ್ ಹೊಸೈನ್, ಟಸ್ಕಿನ್ ಅಹ್ಮದ್, ನಹಿದ್ ರಾಣಾ, ಮುಸ್ತಾಫಿಜುರ್.
*ಆರಂಭ: ಮಧ್ಯಾಹ್ನ 2.30
*ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್2, ಜಿಯೋ ಹಾಟ್ಸ್ಟಾರ್.
ಮುಖಾಮುಖಿ: 41
ಭಾರತ: 32
ಬಾಂಗ್ಲಾದೇಶ: 8
ರದ್ದು: 1
2017ರಲ್ಲಿ ಏಕೈಕ ಮುಖಾಮುಖಿ
ಭಾರತ ತಂಡ ಚಾಂಪಿಯನ್ಸ್ ಟ್ರೋಫಿಯಲ್ಲಿ ಇದುವರೆಗೆ ಬಾಂಗ್ಲಾ ಎದುರು ಒಮ್ಮೆ ಮಾತ್ರ ಆಡಿದೆ. 2017ರ ಆವೃತ್ತಿಯ ಸೆಮಿೈನಲ್ನಲ್ಲಿ ನಡೆದ ಆ ಕಾದಾಟದಲ್ಲಿ ಭಾರತ 9 ವಿಕೆಟ್ಗಳಿಂದ ಗೆದ್ದಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾ 7 ವಿಕೆಟ್ಗೆ 264 ರನ್ ಗಳಿಸಿದ್ದರೆ, ರೋಹಿತ್ ಶರ್ಮ (123*) ಶತಕ ಮತ್ತು ಆಗಿನ ನಾಯಕ ವಿರಾಟ್ ಕೊಹ್ಲಿ ಗಳಿಸಿದ ಅಜೇಯ 96 ರನ್ ಬಲದಿಂದ ಭಾರತ 40.1 ಓವರ್ಗಳಲ್ಲೇ 1 ವಿಕೆಟ್ ನಷ್ಟದಲ್ಲಿ ಗೆಲುವಿನ ದಡ ಸೇರಿತ್ತು.
*ನಮ್ಮ ತಂಡದಲ್ಲಿ ಇಬ್ಬರಷ್ಟೇ ಸ್ಪಿನ್ನರ್ಗಳಿದ್ದಾರೆ. ಉಳಿದ ಮೂವರು ಆಲ್ರೌಂಡರ್ಗಳಾಗಿದ್ದಾರೆ. ಅವರು ತಂಡಕ್ಕೆ ಹೆಚ್ಚಿನ ಬಲ ತುಂಬುತ್ತಾರೆ. ನಾವು ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಬೇಕಾಗಿದೆ. ಪ್ರತಿ ಐಸಿಸಿ ಟೂರ್ನಿಯಂತೆ ಇದೂ ಪ್ರಮುಖ ಸವಾಲು ಆಗಿದೆ.
| ರೋಹಿತ್ ಶರ್ಮ, ಭಾರತ ತಂಡದ ನಾಯಕ
*ನಾವು ಉತ್ತಮ ವೇಗಿಗಳು ಮತ್ತು ಆಲ್ರೌಂಡರ್ಗಳನ್ನು ಹೊಂದಿದ್ದೇವೆ. ಹೀಗಾಗಿ ನಮ್ಮ ಯೋಜನೆಗಳನ್ನು ಸಮರ್ಥವಾಗಿ ಕಾರ್ಯಗತಗೊಳಿಸಿದರೆ ಭಾರತವನ್ನು ಸೋಲಿಸಬಲ್ಲೆವು.
| ನಜ್ಮುಲ್ ಹೊಸೈನ್ ಶಾಂಟೊ, ಬಾಂಗ್ಲಾ ನಾಯಕ
*ಪಿಚ್ ರಿಪೋರ್ಟ್
ದುಬೈ ಪಿಚ್ ಸ್ಪರ್ಧಾತ್ಮಕವೆನಿಸಿದೆ. ಇಲ್ಲಿ ನಡೆದಿರುವ 58 ಏಕದಿನ ಪಂದ್ಯಗಳಲ್ಲಿ ಮೊದಲ ಇನಿಂಗ್ಸ್ನ ಸರಾಸರಿ ಸ್ಕೋರ್ 218 ರನ್ ಆಗಿದೆ. 22 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಗೆದ್ದಿದ್ದರೆ, 34 ಪಂದ್ಯಗಳಲ್ಲಿ ಚೇಸಿಂಗ್ ಮಾಡಿದ ತಂಡ ಜಯಿಸಿದೆ.
*12: ರೋಹಿತ್ ಶರ್ಮ ಇನ್ನು 12 ರನ್ ಗಳಿಸಿದರೆ ಏಕದಿನ ಕ್ರಿಕೆಟ್ನಲ್ಲಿ 11 ಸಾವಿರ ರನ್ ಪೂರೈಸಿದ 4ನೇ ಭಾರತೀಯ ಮತ್ತು ವಿಶ್ವದ 10ನೇ ಬ್ಯಾಟರ್ ಎನಿಸಲಿದ್ದಾರೆ.
*37: ವಿರಾಟ್ ಕೊಹ್ಲಿ ಇನ್ನು 37 ರನ್ ಗಳಿಸಿದರೆ ಏಕದಿನ ಕ್ರಿಕೆಟ್ನಲ್ಲಿ 14 ಸಾವಿರ ರನ್ ಪೂರೈಸಿದ 3ನೇ ಬ್ಯಾಟರ್ ಎನಿಸಲಿದ್ದಾರೆ. ಸಚಿನ್ ತೆಂಡುಲ್ಕರ್, ಕುಮಾರ ಸಂಗಕ್ಕರ ಮೊದಲಿಬ್ಬರು.
ರೋಹಿತ್, ಕೊಹ್ಲಿ, ಗಂಭೀರ್ ಪಾಲಿಗೆ ಮಹತ್ವದ ಟೂರ್ನಿ!
ವೃತ್ತೀಜಿವನದ ಸಂಧ್ಯಾಕಾಲದತ್ತ ಹೆಜ್ಜೆ ಹಾಕುತ್ತಿರುವ ಟೀಮ್ ಇಂಡಿಯಾ ಬ್ಯಾಟರ್ಗಳಾದ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿಗೆ ಇದು ಮಹತ್ವದ ಟೂರ್ನಿ ಎನಿಸಿದೆ. ಅಲ್ಲದೆ ಮುಖ್ಯ ಕೋಚ್ ಹುದ್ದೆಗೇರಿದ ಕಳೆದ 7 ತಿಂಗಳ ಅವಧಿಯಲ್ಲಿ ಹೇಳಿಕೊಳ್ಳುವಂಥ ಸಾಧನೆಯನ್ನೇನೂ ತೋರದಿರುವ ಗೌತಮ್ ಗಂಭೀರ್ ಪಾಲಿಗೂ ಇದು ನಿರ್ಣಾಯಕ ಟೂರ್ನಿಯಾಗಿದೆ. ಕಳೆದ ಆಸ್ಟ್ರೆಲಿಯಾ ಪ್ರವಾಸದಲ್ಲಿ ತೀವ್ರ ವೈಲ್ಯ ಅನುಭವಿಸಿದ್ದ ಕೊಹ್ಲಿ, ರೋಹಿತ್ ಇತ್ತೀಚೆಗೆ ತವರಿನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಲಯಕ್ಕೆ ಮರಳಿರುವ ಲಕ್ಷಣ ತೋರಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲೂ ಈ ಲಯ ಕಾಯ್ದುಕೊಂಡರೆ ಅವರಿಬ್ಬರ ಭವಿಷ್ಯ ಸ್ವಲ್ಪಮಟ್ಟಿಗೆ ಭದ್ರವೆನಿಸಲಿದೆ. ಇನ್ನು ಭಾರತ ತಂಡ ಕನಿಷ್ಠ ಟೂರ್ನಿಯ ೈನಲ್ಗೇರದಿದ್ದರೆ, ಇದು ರೋಹಿತ್ ಶರ್ಮ ಸಾರಥ್ಯದಲ್ಲಿ ಭಾರತಕ್ಕೆ ಕೊನೇ ಟೂರ್ನಿಯಾಗುವ ಸಾಧ್ಯತೆ ಇದೆ. ಜತೆಗೆ ಕೋಚ್ ಆಗಿ ಗಂಭೀರ್ ಭವಿಷ್ಯವೂ ಡೋಲಾಯಮಾನವಾಗಲಿದೆ. ಗಂಭೀರ್ಗೆ ಕೋಚ್ ಆಗಿ ಇದು ಮೊದಲ ಐಸಿಸಿ ಟೂರ್ನಿಯೂ ಆಗಿದೆ.
*ನನಗೆ ಚಾಂಪಿಯನ್ಸ್ ಟ್ರೋಫಿ ಎಂದರೆ ಇಷ್ಟದ ಟೂರ್ನಿ. ಸುದೀರ್ ಸಮಯದ ಬಳಿಕ ಮತ್ತೆ ನಡೆಯುತ್ತಿದೆ. ವಿಶ್ವದ ಅಗ್ರ 8 ತಂಡಗಳ ನಡುವಿನ ಈ ಟೂರ್ನಿ ಸ್ಪರ್ಧಾತ್ಮಕವಾಗಿರುತ್ತದೆ. ಲೀಗ್ ಹಂತದಲ್ಲಿ ಮೂರೇ ಪಂದ್ಯ ಆಡಬೇಕಾಗಿರುವುದರಿಂದ ಉತ್ತಮ ಆರಂಭ ಕಾಣಬೇಕಾಗಿರುವುದು ಅಗತ್ಯವಾಗಿರುತ್ತದೆ.
| ವಿರಾಟ್ ಕೊಹ್ಲಿ