ICC Champions Trophy: ಇಂದಿನಿಂದ ಮಿನಿ ವಿಶ್ವಕಪ್​ ಸಮರ; ಎಂಟು ತಂಡಗಳ ಬಲಾಬಲ ಹೀಗಿದೆ...

web icc champs pre
Published on

ಕರಾಚಿ: ವಿಶ್ವದ ಅಗ್ರ 8 ತಂಡಗಳ ನಡುವಿನ ಹಣಾಹಣಿ ಐಸಿಸಿ ಚಾಂಪಿಯನ್ಸ್​ ಟ್ರೋಫಿಗೆ 8 ವರ್ಷಗಳ ಬಳಿಕ ಬುಧವಾರ ಮರುಚಾಲನೆ ದೊರೆಯಲಿದೆ. ಕರಾಚಿಯ ನ್ಯಾಷನಲ್​ ಸ್ಟೇಡಿಯಂನಲ್ಲಿ ಆತಿಥೇಯ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್​ ತಂಡಗಳ ನಡುವೆ ಟೂರ್ನಿಯ ಉದ್ಘಾಟನಾ ಪಂದ್ಯ ನಡೆಯಲಿದೆ. ಭಾರತ ತಂಡ ಗುರುವಾರ ದುಬೈನಲ್ಲಿ ಬಾಂಗ್ಲಾದೇಶ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. "ಮಿನಿ ವಿಶ್ವಕಪ್​' ಖ್ಯಾತಿಯ ಈ ಏಕದಿನ ಕ್ರಿಕೆಟ್​ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವುದು ವಿಶ್ವಕಪ್​ಗಿಂತಲೂ ಕಠಿಣ ಸವಾಲು. ಇದು ಬಲಿಷ್ಠ ತಂಡಗಳಷ್ಟೇ ಆಡುವ ಟೂರ್ನಿ ಆಗಿರುವುದು ಇದಕ್ಕೆ ಪ್ರಮುಖ ಕಾರಣ. ಟಿ20 ಕ್ರಿಕೆಟ್​ ಅಬ್ಬರದ ನಡುವೆ ಏಕದಿನ ಕ್ರಿಕೆಟ್​ ತನ್ನ ಮಹತ್ವ, ಅಸ್ತಿತ್ವವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲೂ ಈ ಟೂರ್ನಿ ನಿರ್ಣಾಯಕ ಪಾತ್ರ ವಹಿಸಲಿದೆ. ವಿಶ್ವದ ಕೆಲ ಪ್ರಮುಖ ಬೌಲರ್​ಗಳ ಗೈರು ಟೂರ್ನಿಯ ಒಟ್ಟಾರೆ ಸ್ಪರ್ಧಾತ್ಮಕತೆಯನ್ನು ಸ್ವಲ್ಪಮಟ್ಟಿಗೆ ತಗ್ಗಿಸಿದ್ದರೂ, ಸ್ಟಾರ್​ ಬ್ಯಾಟರ್​ಗಳ ಅಬ್ಬರ ಟೂರ್ನಿಯ ಆಕರ್ಷಣೆ ಹೆಚ್ಚಿಸುವ ನಿರೀಕ್ಷೆ ಇದೆ.

ಆವೃತ್ತಿ: 9

ತಂಡ: 8

ಪಂದ್ಯ: 15

ದಿನ: 19

ತಾಣ: 4

ಹೈಬ್ರಿಡ್​ ಮಾದರಿ

ಇದು ಹೈಬ್ರಿಡ್​ ಮಾದರಿಯಲ್ಲಿ ನಡೆಯುತ್ತಿರುವ ಮೊದಲ ಐಸಿಸಿ ಟೂರ್ನಿ ಎನಿಸಿದೆ. ಟೂರ್ನಿಯ 7 ತಂಡಗಳು ಪಾಕ್​ ನೆಲದಲ್ಲಿ ಆಡಿದರೆ, ಭದ್ರತಾ ಕಳವಳದಿಂದಾಗಿ ಭಾರತ ತಂಡ ಮಾತ್ರ ತನ್ನ ಪಂದ್ಯಗಳನ್ನು ಯುಎಇಯ ದುಬೈನಲ್ಲಿ ಆಡಲಿದೆ.

ಟೂರ್ನಿ ಸ್ವರೂಪ

ಟೂರ್ನಿಯಲ್ಲಿ ಆಡುವ 8 ತಂಡಗಳನ್ನು ತಲಾ 4ರಂತೆ 2 ಗುಂಪುಗಳಲ್ಲಿ ವಿಂಗಡಿಸಲಾಗಿದ್ದು, ರೌಂಡ್​ ರಾಬಿನ್​ ಲೀಗ್​ನಲ್ಲಿ ತಲಾ 3 ಪಂದ್ಯ ಆಡಿದ ಬಳಿಕ ಪ್ರತಿ ಗುಂಪಿನ ಅಗ್ರ 2 ತಂಡಗಳು ಸೆಮಿೈನಲ್​ಗೇರಲಿವೆ.

ಸ್ಟಾರ್​ಗಳ ಕೊನೇ ಆಟ?

ರೋಹಿತ್​ ಶರ್ಮ, ವಿರಾಟ್​ ಕೊಹ್ಲಿ, ಸ್ಟೀವನ್​ ಸ್ಮಿತ್​, ಗ್ಲೆನ್​ ಮ್ಯಾಕ್ಸ್​ವೆಲ್​, ಬಾಬರ್​ ಅಜಮ್​, ಜೋ ರೂಟ್​, ಕೇನ್​ ವಿಲಿಯಮ್ಸನ್​, ಮುಶ್ಫಿಕರ್​ ರಹೀಂ, ಮೊಹಮದ್​ ನಬಿ, ಡೇವಿಡ್​ ಮಿಲ್ಲರ್​ರಂಥ ಸ್ಟಾರ್​ ಆಟಗಾರರು ಜತೆಯಾಗಿ ಆಡುವ ಕೊನೇ ಐಸಿಸಿ ಟೂರ್ನಿ ಇದಾಗುವ ಸಾಧ್ಯತೆ ಇದೆ. ಟಿ20 ಕ್ರಿಕೆಟ್​ ಪ್ರಕಾರದಿಂದ ಹೆಚ್ಚಿನ ಹಿರಿಯ ಆಟಗಾರರು ಈಗಾಗಲೆ ಹೊರಗುಳಿದಿದ್ದರೆ, ಮುಂದಿನ ಏಕದಿನ ವಿಶ್ವಕಪ್​ ನಡೆಯಲಿರುವುದು 2027ರಲ್ಲಿ. ಹೀಗಾಗಿ ಅಲ್ಲಿಯವರೆಗೆ ಇವರೆಲ್ಲರೂ ಕಣದಲ್ಲಿ ಅನುಮಾನ ಉಳಿಯುವುದು ಅನುಮಾನ. ಈ ಪೈಕಿ ಕೆಲವರಿಗೆ ಇದೇ ಕೊನೇ ಐಸಿಸಿ ಟೂರ್ನಿ ಆದರೂ ಅಚ್ಚರಿ ಇಲ್ಲ.

ಎ ಗುಂಪು

ಏಷ್ಯಾದ 3 ತಂಡಗಳಿಂದ ಕೂಡಿರುವ ಎ ಗುಂಪಿನಲ್ಲಿ ರೋಚಕ ಕಾದಾಟದ ನಿರೀಕ್ಷೆ ಇದೆ. ಭಾರತ-ಪಾಕಿಸ್ತಾನ ತಂಡಗಳ ಜತೆಗೆ ನ್ಯೂಜಿಲೆಂಡ್​ ಸೆಮಿಫೈನಲ್​ ಹಂತಕ್ಕೇರಲು ನಿಕಟ ಪೈಪೋಟಿ ನೀಡಬಹುದು. ಬಾಂಗ್ಲಾದೇಶ ತಂಡವನ್ನೂ ಕಡೆಗಣಿಸಿದರೆ ಅಪಾಯ ಖಚಿತವೆನ್ನಬಹುದು. ಭಾರತ-ಪಾಕ್​ ಮುಖಾಮುಖಿಯಲ್ಲಿ ಗೆದ್ದ ತಂಡಕ್ಕೆ ಸೆಮೀಸ್​ ಅವಕಾಶ ಹೆಚ್ಚಲಿದೆ. ಇತ್ತೀಚೆಗೆ ಪಾಕಿಸ್ತಾನದಲ್ಲಿ ತ್ರಿಕೋನ ಸರಣಿ ಗೆದ್ದು ಬೀಗಿರುವ ಕಿವೀಸ್​ ತಂಡ ಹೆಚ್ಚಿನ ಆತ್ಮವಿಶ್ವಾಸ ಹೊಂದಿದೆ.

ಭಾರತ

ಐಸಿಸಿ ರ್ಯಾಂಕ್​: 1

ನಾಯಕ: ರೋಹಿತ್​ ಶರ್ಮ

ಗೇಮ್​ ಚೇಂಜರ್ಸ್​: ವಿರಾಟ್​ ಕೊಹ್ಲಿ, ಹಾರ್ದಿಕ್​ ಪಾಂಡ್ಯ, ಮೊಹಮದ್​ ಶಮಿ, ಶುಭಮಾನ್​ ಗಿಲ್​, ವರುಣ್​ ಚಕ್ರವರ್ತಿ.

ಟೂರ್ನಿ ಇತಿಹಾಸದ ಬಲಿಷ್ಠ ದಾಖಲೆಯನ್ನು ಕಾಯ್ದುಕೊಳ್ಳುವ ಉತ್ಸಾಹದೊಂದಿಗೆ ಭಾರತ ತಂಡ ಕಣಕ್ಕಿಳಿಯಲಿದೆ. 2023ರಲ್ಲಿ ತವರಿನಲ್ಲಿ ನಡೆದ ಏಕದಿನ ವಿಶ್ವಕಪ್​ನಲ್ಲಿ ಸತತ 10 ಪಂದ್ಯ ಗೆದ್ದು ಬೀಗಿದ್ದ ತಂಡದ ಬಹುತೇಕ ಆಟಗಾರರು ಈಗಿನ ತಂಡದಲ್ಲೂ ಇದ್ದಾರೆ. ಸ್ಟಾರ್​ ಬ್ಯಾಟರ್​ಗಳಾದ ನಾಯಕ ರೋಹಿತ್​ ಶರ್ಮ ಮತ್ತು ವಿರಾಟ್​ ಕೊಹ್ಲಿ ಇತ್ತೀಚೆಗೆ ಲಯಕ್ಕೆ ಮರಳಿರುವುದು ವಿಶ್ವಾಸ ಹೆಚ್ಚಿಸಿದೆ. ಶುಭಮಾನ್​ ಗಿಲ್​, ಶ್ರೇಯಸ್​ ಅಯ್ಯರ್​ ಸ್ಥಾನ ತುಂಬಬೇಕಿದೆ. ಸ್ಟಾರ್​ ವೇಗಿ ಜಸ್​ಪ್ರೀತ್​ ಬುಮ್ರಾ ಗೈರು ತಂಡದ ಪ್ರಮುಖ ಹಿನ್ನಡೆ ಎನಿಸಿದೆ. ಮೊಹಮದ್​ ಶಮಿ ಮತ್ತೆ ಫಿಟ್​ ಆಗಿರುವುದು ಬೌಲಿಂಗ್​ ವಿಭಾಗಕ್ಕೆ ಅನುಭವದ ಬಲ ತುಂಬಿದೆ. ಕಳೆದ ವರ್ಷದ ಟಿ20 ವಿಶ್ವಕಪ್​ನಂತೆ ಸ್ಪಿನ್ನರ್​ ಸ್ಟ್ರಾಟಜಿ ಮುಂದುವರಿಸಿರುವ ಭಾರತ, ಐವರು ಸ್ಪಿನ್ನರ್​ಗಳನ್ನು ದುಬೈಗೆ ಕರೆದೊಯ್ದಿದ್ದು, ಇದು ಪ್ಲಸ್​ ಅಥವಾ ಮೈನಸ್​ ಎರಡೂ ಆಗಬಹುದು. ಮಧ್ಯಮ ಸರದಿಯಲ್ಲಿ ಹೆಚ್ಚಿನ ಆಲ್ರೌಂಡರ್​ಗಳು ತುಂಬಿದ್ದು, ಫಿನಿಷರ್​ ಪಾತ್ರವನ್ನು ಯಾರು ನಿರ್ವಹಿಸುವರು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಕೀಪರ್​ ಸ್ಥಾನಕ್ಕೆ ಕೆಎಲ್​ ರಾಹುಲ್​-ರಿಷಭ್​ ಪಂತ್​ ನಡುವಿನ ಆರೋಗ್ಯಕರ ಪೈಪೋಟಿ ತಂಡಕ್ಕೆ ಲಾಭ ನೀಡಬೇಕಿದೆ.

ಪಾಕಿಸ್ತಾನ

ಐಸಿಸಿ ರ್ಯಾಂಕ್​: 3

ನಾಯಕ: ಮೊಹಮದ್​ ರಿಜ್ವಾನ್​

ಗೇಮ್​ ಚೇಂಜರ್ಸ್​: ಬಾಬರ್​ ಅಜಮ್​, ಶಹೀನ್​ ಷಾ ಅಫ್ರಿದಿ, ಖರ್​ ಜಮಾನ್​, ಹೀಮ್​ ಅಶ್ರ್​, ಹ್ಯಾರಿಸ್​ ರೌಫ್​.

ಆತಿಥೇಯ ಮತ್ತು ಹಾಲಿ ಚಾಂಪಿಯನ್​ ತಂಡವಾಗಿ ಕಣಕ್ಕಿಳಿಯುತ್ತಿರುವ ಪಾಕಿಸ್ತಾನ ತಂಡದ ಮೇಲೆ ಅವಳಿ ಭಾರವಿದೆ. ಜತೆಗೆ ಮೊಹಮದ್​ ರಿಜ್ವಾನ್​ ಸಾರಥ್ಯದಲ್ಲಿ ಮೊದಲ ಬಾರಿ ಪ್ರಮುಖ ಟೂರ್ನಿಯಲ್ಲಿ ಆಡುವ ಸವಾಲು ಇದೆ. 8 ವರ್ಷಗಳ ಹಿಂದೆ ಟ್ರೋಫಿ ಗೆದ್ದ ತಂಡದಲ್ಲಿದ್ದ ಇಬ್ಬರು ಆಟಗಾರರಷ್ಟೇ (ಬಾಬರ್​, ಫಖರ್​) ಈಗಿನ ತಂಡದಲ್ಲೂ ಇದ್ದು, ಈ ಬಾರಿ ತವರಿನ ಲಾಭವನ್ನು ಎಷ್ಟರ ಮಟ್ಟಿಗೆ ಬಳಸಿಕೊಳ್ಳಲಿದೆ ಎಂಬುದು ಅದರ ಯಶಸ್ಸನ್ನು ನಿರ್ಧರಿಸಲಿದೆ.

ನ್ಯೂಜಿಲೆಂಡ್​

ಐಸಿಸಿ ರ್ಯಾಂಕ್​: 4

ನಾಯಕ: ಮಿಚೆಲ್​ ಸ್ಯಾಂಟ್ನರ್​

ಗೇಮ್​ ಚೇಂಜರ್ಸ್​: ಡೆವೊನ್​ ಕಾನ್​ವೇ, ಕೇನ್​ ವಿಲಿಯಮ್ಸನ್​, ರಚಿನ್​ ರವೀಂದ್ರ, ಡೆರಿಲ್​ ಮಿಚೆಲ್​, ವಿಲ್​ ಓರೌರ್ಕಿ.

ಇತ್ತೀಚೆಗೆ ಏಷ್ಯಾದಲ್ಲೇ (ಶ್ರೀಲಂಕಾ, ಪಾಕ್​) ಸತತ 3 ಸೀಮಿತ ಓವರ್​ ಕ್ರಿಕೆಟ್​ ಸರಣಿಗಳನ್ನು ಗೆದ್ದಿರುವ ನ್ಯೂಜಿಲೆಂಡ್​ ಭರ್ಜರಿ ಾಮ್​ರ್ನೊಂದಿಗೆ ಟೂರ್ನಿಯನ್ನು ಪ್ರವೇಶಿಸುತ್ತಿದೆ. 2023ರ ಏಕದಿನ ವಿಶ್ವಕಪ್​ನಲ್ಲಿ ಮಿಂಚಿದ್ದ ರಚಿನ್​ ರವೀಂದ್ರ, ಡೆವೊನ್​ ಕಾನ್​ವೇ, ಡೆರಿಲ್​ ಮಿಚೆಲ್​ ಅವರನ್ನೇ ತಂಡ ಮತ್ತೆ ನೆಚ್ಚಿಕೊಂಡಿದೆ. ನಾಯಕ ಸ್ಯಾಂಟ್ನರ್​ ಸಾರಥ್ಯದಲ್ಲಿ ಸ್ಪಿನ್​ ವಿಭಾಗ ವೈವಿಧ್ಯತೆಯಿಂದ ಕೂಡಿದ್ದರೂ, ವೇಗದ ಬೌಲಿಂಗ್​ ವಿಭಾಗ ಅನನುಭವಿಗಳಿಂದ ಕೂಡಿದೆ. 2000ರಲ್ಲಿ ಟ್ರೋಫಿ ಗೆದ್ದಿರುವುದು ತಂಡಕ್ಕೆ ಸ್ಫೂರ್ತಿ ತುಂಬಲಿದೆ.

ಬಾಂಗ್ಲಾದೇಶ

ಐಸಿಸಿ ರ್ಯಾಂಕ್​: 9

ನಾಯಕ: ನಜ್ಮುಲ್​ ಹೊಸೈನ್​ ಶಾಂಟೊ

ಗೇಮ್​ ಚೇಂಜರ್ಸ್​: ಮುಶ್ಫಿಕರ್​ ರಹೀಂ, ಮೆಹಿದಿ ಹಸನ್​ ಮಿರಾಜ್​, ಮುಸ್ತಾಫಿಜುರ್​ ರೆಹಮಾನ್​, ನಹಿದ್​ ರಾಣಾ, ಟಸ್ಕಿನ್​ ಅಹ್ಮದ್​.

ಸ್ಥಿತ್ಯಂತರ ಸ್ಥಿತಿಯಲ್ಲಿರುವ ಬಾಂಗ್ಲಾ ತಂಡದಿಂದ ಈ ಬಾರಿ ಹೆಚ್ಚಿನ ನಿರೀಕ್ಷೆಗಳಿಲ್ಲ. ಶಕೀಬ್​, ತಮೀಮ್​ ನಿರ್ಗಮನದ ಬಳಿಕ ಈ ಟೂರ್ನಿಯ ಮೂಲಕ ಮುಶ್ಫಿಕರ್​, ಮಹಮದುಲ್ಲಾಗೂ ಬೀಳ್ಕೊಡುಗೆ ನೀಡುವ ಹಾದಿಯಲ್ಲಿದೆ. ಇತ್ತೀಚೆಗೆ ವಿಂಡೀಸ್​, ಆಫ್ಘನ್​ ಎದುರು ಸರಣಿ ಸೋತಿದೆ. ಮುಸ್ತಾಫಿಜುರ್​, ಟಸ್ಕಿನ್​ ಮತ್ತು ಮಿಂಚಿನ ಯುವವೇಗಿ ನಹಿದ್​ ರಾಣಾ ಎದುರಾಳಿಗಳಿಗೆ ಕಂಟಕವಾದರೆ ಬಾಂಗ್ಲಾ ಯಶಸ್ಸು ಕಾಣಬಹುದು. ಬ್ಯಾಟಿಂಗ್​ ವಿಭಾಗದಲ್ಲಿ ಸ್ಥಿರ ನಿರ್ವಹಣೆಯ ಅಗತ್ಯವಿದೆ.

ಬಿ ಗುಂಪು

ಅತ್ಯಂತ ಕುತೂಹಲಕಾರಿ ಎನಿಸಿರುವ ಬಿ ಗುಂಪಿನಲ್ಲಿ ಸೆಮೀಸ್​ ರೇಸ್​ ಇನ್ನಷ್ಟು ಸ್ಪರ್ಧಾತ್ಮಕತೆಯಿಂದ ಕೂಡಿರುವ ನಿರೀಕ್ಷೆ ಇದೆ. ಪ್ರಮುಖ ವೇಗಿಗಳ ಗೈರಿನ ನಡುವೆ ಆಸೀಸ್​ ತಂಡ ಯುವ&ಅನುಭವಿಗಳಿಂದ ತುಂಬಿರುವ ದಣ ಆಫ್ರಿಕಾ ಮತ್ತು ಇಂಗ್ಲೆಂಡ್​ ತಂಡಗಳಿಗೆ ಜಿದ್ದಾಜಿದ್ದಿನ ಸವಾಲು ನೀಡಬಹುದು. 2023ರ ಏಕದಿನ ವಿಶ್ವಕಪ್​ ಯಶಸ್ಸಿನ ವಿಶ್ವಾಸದಲ್ಲಿರುವ ಅ್ಘಾನಿಸ್ತಾನವೂ ಗುಂಪಿನ ಕರಿಗುದುರೆಯಾಗಿದ್ದು, ಗುಂಪಿನಲ್ಲಿ ಚತುಷ್ಕೋನ ಪೈಪೋಟಿ ಏರ್ಪಡಬಹುದು.

ಆಸ್ಟ್ರೆಲಿಯಾ

ಐಸಿಸಿ ರ್ಯಾಂಕ್​: 2

ನಾಯಕ: ಸ್ಟೀವನ್​ ಸ್ಮಿತ್​

ಗೇಮ್​ ಚೇಂಜರ್ಸ್​: ಟ್ರಾವಿಸ್​ ಹೆಡ್​, ಗ್ಲೆನ್​ ಮ್ಯಾಕ್ಸ್​ವೆಲ್​, ಆಡಂ ಜಂಪಾ, ಸೀನ್​ ಅಬೋಟ್​, ಮಾರ್ನಸ್​ ಲಬುಶೇನ್​.

ಏಕದಿನ ವಿಶ್ವ ಚಾಂಪಿಯನ್​ ಆಸ್ಟ್ರೆಲಿಯಾ, ಚಾಂಪಿಯನ್ಸ್​ ಟ್ರೋಫಿಯಲ್ಲೂ ಪ್ರಾಬಲ್ಯ ಮರುಸ್ಥಾಪಿಸುವುದು ಸುಲಭವಲ್ಲ. ಕಾಯಂ ನಾಯಕ ಪ್ಯಾಟ್​ ಕಮ್ಮಿನ್ಸ್​, ಮಿಚೆಲ್​ ಸ್ಟಾರ್ಕ್​ ಸಹಿತ ಐವರು ಪ್ರಮುಖ ಆಟಗಾರರ ಗೈರು ಆಸೀಸ್​ಗೆ ಹೊಡೆತ ನೀಡಿದೆ. ಬೌಲಿಂಗ್​ ವಿಭಾಗ ಹೊಸಬರಿಂದ ಕೂಡಿದ್ದರೂ, ಬ್ಯಾಟಿಂಗ್​ ವಿಭಾಗದಲ್ಲಿ ಟ್ರಾವಿಸ್​ ಹೆಡ್​, ನಾಯಕ ಸ್ಟೀವನ್​ ಸ್ಮಿತ್​, ಗ್ಲೆನ್​ ಮ್ಯಾಕ್ಸ್​ವೆಲ್​ರಂಥ ಪ್ರಮುಖ ಲಭ್ಯತೆಯ ಬಲವಿದೆ. ಇತ್ತೀಚೆಗೆ ಲಂಕಾದಲ್ಲಿ ಸರಣಿ ಸೋತಿರುವುದು ಕೂಡ ಹಿನ್ನಡೆ ತಂದಿದೆ. ಬದಲಿ ಆಟಗಾರರ ನಿರ್ವಹಣೆ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದೆ.

*ದಕ್ಷಿಣ ಆಫ್ರಿಕಾ

ಐಸಿಸಿ ರ್ಯಾಂಕ್​: 6

ನಾಯಕ: ಟೆಂಬಾ ಬವುಮಾ

ಗೇಮ್​ ಚೇಂಜರ್ಸ್​: ಹೆನ್ರಿಕ್​ ಕ್ಲಾಸೆನ್​, ಕಗಿಸೊ ರಬಾಡ, ಕೇಶವ್​ ಮಹಾರಾಜ್​, ಏಡನ್​ ಮಾರ್ಕ್ರಮ್​, ಡೇವಿಡ್​ ಮಿಲ್ಲರ್​.

ಪ್ರತಿ ಐಸಿಸಿ ಟೂರ್ನಿಯ ಆರಂಭದಲ್ಲಿ ದಣ ಆಫ್ರಿಕಾ ತಂಡ ಬಲಿಷ್ಠವಾಗಿಯೇ ಕಾಣಿಸುತ್ತದೆ. ಆದರೆ ಮೈದಾನದಲ್ಲಿ ತನ್ನ ಕಾರ್ಯತಂತ್ರಗಳನ್ನು ಕಾರ್ಯಗತಗೊಳಿಸುವಲ್ಲಿ ಎಡವುದೇ ಹೆಚ್ಚು. ಇತ್ತೀಚೆಗೆ ಪಾಕ್​ನಲ್ಲಿ ಆಡಿದ ತ್ರಿಕೋನ ಸರಣಿಯಲ್ಲಿ ಬ್ಯಾಟರ್​ಗಳು ರನ್​ಮಳೆಯನ್ನೇ ಹರಿಸಿದ್ದರು. ಆದರೆ ಬೌಲರ್​ಗಳು ಕೈಕೊಟ್ಟಿದ್ದರು. ಆದರೂ, ಆಸೀಸ್​, ಇಂಗ್ಲೆಂಡ್​ ಸದ್ಯ ಫಾರ್ಮ್​ನಲ್ಲಿಲ್ಲದೆ ಇರುವುದರಿಂದ ಬಿ ಗುಂಪಿನಲ್ಲೇ ದ. ಆಫ್ರಿಕಾವೇ ಫೇವರಿಟ್​ ಎನಿಸಿದೆ. 1998ರ ಚೊಚ್ಚಲ ಆವೃತ್ತಿಯ ನಂತರ ಮತ್ತೊಂದು ಐಸಿಸಿ ಟ್ರೋಫಿ ಒಲಿಸಿಕೊಳ್ಳುವ ಹಂಬಲ ತಂಡದಲ್ಲಿದೆ.

ಇಂಗ್ಲೆಂಡ್​

ಐಸಿಸಿ ರ್ಯಾಂಕ್​: 7

ನಾಯಕ: ಜೋಸ್​ ಬಟ್ಲರ್​

ಗೇಮ್​ ಚೇಂಜರ್ಸ್​: ಜೋ ರೂಟ್​, ಜೋಫ್ರಾ ಆರ್ಚರ್​, ಹ್ಯಾರಿ ಬ್ರೂಕ್​, ಆದಿಲ್​ ರಶೀದ್​, ಲಿಯಾಮ್​ ಲಿವಿಂಗ್​ಸ್ಟೋನ್​.

ಇಂಗ್ಲೆಂಡ್​ 2019ರಲ್ಲಿ ಚೊಚ್ಚಲ ಏಕದಿನ ವಿಶ್ವಕಪ್​ ಒಲಿಸಿಕೊಂಡ ಬಳಿಕ ಈ ಪ್ರಕಾರದಲ್ಲಿ ಅದರ ನಿರ್ವಹಣೆ ತೃಪ್ತಿಕರ ಎನಿಸಿಲ್ಲ. 2023ರ ಏಕದಿನ ವಿಶ್ವಕಪ್​ನಲ್ಲಿ ನೀರಸ ನಿರ್ವಹಣೆ ತೋರಿತ್ತು. ಇತ್ತೀಚೆಗೆ ಭಾರತದಲ್ಲಿ ಆಡಿದ ಏಕದಿನ ಸರಣಿಯಲ್ಲೂ ವೈಟ್​ವಾಷ್​ ಎದುರಿಸಿತ್ತು. ತಂಡದ ಪ್ರಮುಖ ಆಟಗಾರರ ಅಸ್ಥಿರ ನಿರ್ವಹಣೆ ಇದಕ್ಕೆ ಪ್ರಮುಖ ಕಾರಣ. ಆದರೆ ಬ್ರೆಂಡನ್​ ಮೆಕ್ಕಲಂ ಮಾರ್ಗದರ್ಶನದಲ್ಲಿ ಬಾಜ್​ಬಾಲ್​ ಮೂಲಕ ಯಶ ಕಂಡಿರುವ ಇಂಗ್ಲೆಂಡ್​, ಈ ಬಾರಿ ಏಕದಿನದಲ್ಲೂ ಹೊಸ ಕಾರ್ಯತಂತ್ರ ಅನುಸರಿಸುವ ನಿರೀೆ ಇದೆ.

*ಅಫ್ಘಾನಿಸ್ತಾನ

ಐಸಿಸಿ ರ್ಯಾಂಕ್​: 8

ನಾಯಕ: ಹಶ್ಮತ್​ಉಲ್ಲಾ ಶಾಹಿದಿ.

ಗೇಮ್​ ಚೇಂಜರ್ಸ್​: ರಶೀದ್​ ಖಾನ್​, ಅಜ್ಮತ್​ಉಲ್ಲಾ ಒಮರ್ಜಾಯಿ, ರಹಮಾನುಲ್ಲಾ ಗುರ್ಬಜ್​, ಮೊಹಮದ್​ ನಬಿ, ಜಲ್ಲಾಕ್​ ಫಾರೂಖಿ.

ಕಳೆದ 2023ರ ಏಕದಿನ ವಿಶ್ವಕಪ್​ನಲ್ಲಿ ಇಂಗ್ಲೆಂಡ್​, ಪಾಕಿಸ್ತಾನ, ಶ್ರೀಲಂಕಾದಂಥ ಬಲಿಷ್ಠ ತಂಡಗಳಿಗೆ ಆಘಾತ ನೀಡಿದ್ದಲ್ಲದೆ, ಆಸೀಸ್​ಗೆ ಸೋಲಿನ ಭೀತಿ ಹುಟ್ಟಿಸಿದ್ದ ಅಫ್ಘಾನಿಸ್ತಾನ ಈ ಬಾರಿ ಚಾಂಪಿಯನ್ಸ್​ ಟ್ರೋಫಿಗೆ ಪದಾರ್ಪಣೆ ಮಾಡುವ ಅವಕಾಶ ಪಡೆದಿದೆ. ಈ ಟೂರ್ನಿಯೂ ಏಷ್ಯಾದಲ್ಲೇ ನಡೆಯುತ್ತಿರುವುದರಿಂದ ಆ್ಘನ್​ ಇನ್ನಷ್ಟು ಗಮನಾರ್ಹ ನಿರ್ವಹಣೆ ತೋರಿದರೆ ಅಚ್ಚರಿ ಇಲ್ಲ. ಮಧ್ಯಮ ಸರದಿಯಲ್ಲಿ (4&7) ಭರವಸೆಯ ಬ್ಯಾಟರ್​ಗಳಿಲ್ಲದಿರುವುದೊಂದೇ ಆಫ್ಘನ್​ಗೆ ಹಿನ್ನಡೆ ಎನಿಸಿದೆ.

ಲಾಹೋರ್​/ದುಬೈನಲ್ಲಿ ಫೈನಲ್​

ಚಾಂಪಿಯನ್ಸ್​ ಟ್ರೋಫಿ ಫೈನಲ್​ ಪಂದ್ಯ ಮಾರ್ಚ್​ 9ರಂದು ಲಾಹೋರ್​ನಲ್ಲಿ ನಿಗದಿಯಾಗಿದೆ. ಆದರೆ ಭಾರತ ತಂಡ ಫೈನಲ್​ಗೆ ಅರ್ಹತೆ ಪಡೆದರೆ ಈ ಪಂದ್ಯ ದುಬೈನಲ್ಲಿ ನಡೆಯಲಿದೆ. ಮಾರ್ಚ್​ 10 ಫೈನಲ್​ಗೆ ಮೀಸಲು ದಿನವಾಗಿದೆ. 2 ಸೆಮಿಫೈನಲ್​ ಪಂದ್ಯಗಳಿಗೂ ಮೀಸಲು ದಿನವಿದೆ. ಆದರೆ ಲೀಗ್​ ಪಂದ್ಯಗಳಿಗೆ ಮೀಸಲು ದಿನ ಇರುವುದಿಲ್ಲ. ಭಾರತ ತಂಡ ಸೆಮಿಫೈನಲ್​ಗೇರಿದರೆ ದುಬೈನಲ್ಲಿ ಮತ್ತು ಪಾಕಿಸ್ತಾನ ಸೆಮಿಫೈನಲ್​ಗೇರಿದರೆ ಲಾಹೋರ್​ನಲ್ಲಿ ಆಡಲಿದೆ.

ಒಟ್ಟು ಬಹುಮಾನ: 60 ಕೋಟಿ ರೂ.

ಚಾಂಪಿಯನ್​: 19.45 ಕೋಟಿ ರೂ.

ರನ್ನರ್​ಅಪ್​: 9.72 ಕೋಟಿ ರೂ.

ಸೆಮಿೈನಲಿಸ್ಟ್​: 4.86 ಕೋಟಿ ರೂ.

5&6ನೇ ಸ್ಥಾನ: 3 ಕೋಟಿ ರೂ.

7&8ನೇ ಸ್ಥಾನ: 1.2 ಕೋಟಿ ರೂ.

ಗುಂಪಿನ ಪ್ರತಿ ಜಯ: 30 ಲಕ್ಷ ರೂ.

ಗ್ಯಾರಂಟಿ ಮೊತ್ತ: 1.08 ಕೋಟಿ ರೂ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net