

ನವದೆಹಲಿ: ಇದೇ ನವೆಂಬರ್ 24-25ರಂದು ನಡೆಯಲಿರುವ ಐಪಿಎಲ್ ಹರಾಜಿಗೆ ವೇದಿಕೆ ಸಜ್ಜಾಗುತ್ತಿದ್ದು, ಸ್ಟಾರ್ ಆಟಗಾರರನ್ನು ಖರೀದಿಸಲು ಸದ್ಯ ಫ್ರಾಂಚೈಸಿಗಳು ಎದುರುನೋಡುತ್ತಿವೆ. ಈ ಮಧ್ಯೆ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿರುವ ಕನ್ನಡಿಗ, ಕೆ.ಎಲ್.ರಾಹುಲ್ (KL Rahul), ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸೇರುವುದು ಬಹುತೇಕ ಖಚಿತ ಎಂದು ಹಲವಾರು ವರದಿಗಳು ಭವಿಷ್ಯ ನುಡಿದಿವೆ. ಇದು ಆರ್ಸಿಬಿ ಅಭಿಮಾನಿಗಳ ಕುತೂಹಲವನ್ನು ಹೆಚ್ಚಿಸಿದ್ದು, ಕನ್ನಡಿಗ ಬೆಂಗಳೂರು ತಂಡ ಸೇರುವುದು ಸೂಕ್ತ. ನಮ್ಮ ನೆಚ್ಚಿನ ಆಟಗಾರ ಇಲ್ಲಿಗೆ ಬಂದ್ರೆ, ಆಟದ ಖದರ್ ಮತ್ತಷ್ಟು ಹೆಚ್ಚುತ್ತದೆ ಎಂದು ಫ್ಯಾನ್ಸ್ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.
ಕಳೆದ ಆವೃತ್ತಿಯಲ್ಲಿ ಲಖನೌ ಸೂಪರ್ ಜೈಂಟ್ಸ್ ಮಾಲೀಕರೊಂದಿಗೆ ರಾಹುಲ್ಗೆ ಉಂಟಾದ ಮನಸ್ತಾಪವೇ, ಈ ಬಾರಿ ಅವರನ್ನು ರಿಟೇನ್ ಮಾಡಿಕೊಳ್ಳದಿರಲು ಮುಖ್ಯ ಕಾರಣ. ಇದಕ್ಕೆ ರಾಹುಲ್ ಕೂಡ ಸಿದ್ಧವಾಗಿದ್ದರು. ಸದ್ಯ ಹರಾಜಿನತ್ತ ಮುಖ ಮಾಡಿರುವ ಕೆ.ಎಲ್. ರಾಹುಲ್ ಮೇಲೆ ಒಂದಷ್ಟು ಫ್ರಾಂಚೈಸಿಗಳ ಕಣ್ಣು ಬಿದ್ದಿದ್ದು, ಈ ಪೈಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಂಚೂಣಿಯಲ್ಲಿದೆ. ಕನ್ನಡಿಗನಿಗೆ ಆರ್ಸಿಬಿಯಲ್ಲಿ ಸ್ಥಾನ ಸಿಗುವುದು ಬಹುತೇಕ ಖಚಿತ ಎಂಬ ಸುದ್ದಿಗಳು ಹೊರಬಿದ್ದ ಬೆನ್ನಲ್ಲೇ, ಬೆಂಗಳೂರು ಪಡೆಗೆ ಅವರೇ ನೂತನ ಕ್ಯಾಪ್ಟನ್ ಆಗಿ ಬರುವ ಸಾಧ್ಯತೆಗಳು ಸಹ ಹೆಚ್ಚಿವೆ ಎಂದು ನಿರೀಕ್ಷಿಸಲಾಗಿದೆ. ಈ ಮಧ್ಯೆ ತಮ್ಮ ಸ್ಥಾನ ನಾಯಕನಾಗಿಯೋ ಅಥವಾ ಒಬ್ಬ ಆಟಗಾರನಾಗಿಯೋ ಎಂಬುದರ ಬಗ್ಗೆ ಸ್ವತಃ ರಾಹುಲ್ ಮುಕ್ತವಾಗಿ ಮಾತನಾಡಿದ್ದಾರೆ.
"ನನಗೆ ಒಂದು ತಂಡದಲ್ಲಿ ಆಡುವುದು ಮುಖ್ಯವೇ ವಿನಃ ಕ್ಯಾಪ್ಟನ್ ಆಗುವುದಲ್ಲ. ಯಾರ ಬಳಿಯೂ ಹೋಗಿ ನಾಯಕನ ಸ್ಥಾನ ಕೊಡಿ, ನನಗೆ ಬೇಕಿದೆ ಎಂದು ಕೇಳುವ ಮಾತಿಲ್ಲ. ಅದನ್ನು ಗಿಟ್ಟಿಸಿಕೊಳ್ಳುವುದು ನನ್ನ ಆದ್ಯತೆ ಪಟ್ಟಿಯಲ್ಲಿ ಇಲ್ಲವೇ ಇಲ್ಲ. ಟೀಮ್ಗೆ ಆಡುವ ಮನಸ್ಥಿತಿ ಇರುವ ನನಗೆ, ಓಪನಿಂಗ್, ಮಧ್ಯಮ ಕ್ರಮಾಂಕ, ವಿಕೆಟ್ ಕೀಪಿಂಗ್, ಫೀಲ್ಡಿಂಗ್ ಅಥವಾ ಯಾವುದೇ ಪಾತ್ರ ಕೊಟ್ಟರೂ ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಎದುರುನೋಡುವೆ. ಯಾವ ತಂಡದಲ್ಲಿ ಪ್ರೀತಿ, ಗೌರವ, ಕಾಳಜಿ ಇದೆಯೋ, ಅಂತಹ ಜಾಗದಲ್ಲಿ ಇದ್ದು, ಆಟವಾಡಲು ಇಚ್ಛಿಸುತ್ತೇನೆ. ಕಳೆದ ಕೆಲವು ವರ್ಷಗಳಲ್ಲಿ ನಾಯಕನಾಗಿ ಒಂದಷ್ಟು ತಂಡಗಳನ್ನು ಮುನ್ನಡೆಸಿದ್ದೇನೆ. ನನ್ನಲ್ಲಿ ಕೌಶಲ್ಯ ಇದೆ ಎಂದು ನಿಮಗೆ ಅನಿಸಿದ್ರೆ, ಜವಾಬ್ದಾರಿ ಕೊಡಿ ನಾನು ಖುಷಿಯಿಂದ ನಿಭಾಯಿಸುತ್ತೇನೆ" ಎಂದಿದ್ದಾರೆ.
"ಗೌರವ, ಪ್ರೀತಿ, ಕಾಳಜಿ ತೋರುವುದರ ಜತೆಗೆ ತಂಡದಲ್ಲಿ ಒಳ್ಳೆಯ ವಾತಾವರಣ ಹೊಂದಿರುವ ಯಾವ ಫ್ರಾಂಚೈಸಿಯಾದರೂ ನಾನು ಆಡಲು ತಯಾರಿದ್ದೇನೆ. ಪ್ರತಿಯೊಬ್ಬರಿಗೂ ಇರುವ ಒಂದೇ ಒಂದು ಉದ್ದೇಶ, ಧ್ಯೇಯ ಎಂದರೆ ಅದು ಐಪಿಎಲ್ ಟ್ರೋಫಿ ಗೆಲ್ಲುವುದು. ಇದೇ ನನ್ನ ಗುರಿ ಕೂಡ" ಎಂದು ರಾಹುಲ್ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ,(ಏಜೆನ್ಸೀಸ್).