ನನ್ನ ಬಯೋಪಿಕ್‌ನಲ್ಲಿ ನಾನೇ ನಟಿಸುವೆ ಎಂದ ಕೊಹ್ಲಿ!

kohli anushka
Published on

ನವದೆಹಲಿ: ಬಾಲಿವುಡ್‌ನಲ್ಲಿ ಈಗಾಗಲೆ ಹಲವು ಕ್ರೀಡಾಪಟುಗಳ ಬಯೋಪಿಕ್‌ಗಳು ಬಂದಿವೆ. ಬಾಕ್ಸರ್ ಮೇರಿ ಕೋಮ್ ಪಾತ್ರಕ್ಕೆ ಪ್ರಿಯಾಂಕಾ ಚೋಪ್ರಾ, ಅಥ್ಲೆಟಿಕ್ಸ್ ದಿಗ್ಗಜ ಮಿಲ್ಖಾ ಸಿಂಗ್ ಪಾತ್ರಕ್ಕೆ ರ್ಹಾನ್ ಅಖ್ತರ್, ಎಂಎಸ್ ಧೋನಿ ಪಾತ್ರಕ್ಕೆ ಸುಶಾಂತ್ ಸಿಂಗ್ ರಜಪೂತ್ ಸಮರ್ಥವಾಗಿ ಜೀವ ತುಂಬಿದ್ದರು. ಆದರೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಜೀವನಾಧಾರಿತ ಸಿನಿಮಾ ಮಾಡುವುದಾದರೆ ಅದರಲ್ಲಿ ಅವರೇ ಸ್ವತಃ ನಟಿಸಬೇಕಂತೆ! ಅಲ್ಲದೆ ಅವರ ಪತ್ನಿಯ ಪಾತ್ರವನ್ನೂ ಅನುಷ್ಕಾ ಶರ್ಮ ಅವರೇ ನಿಭಾಯಿಸಬೇಕಂತೆ!

ಭಾರತ ುಟ್‌ಬಾಲ್ ತಂಡದ ಆಟಗಾರ ಸುನೀಲ್ ಛೇಟ್ರಿ ಜತೆಗೆ ಭಾನುವಾರ ಇನ್‌ಸ್ಟಾಗ್ರಾಂ ಲೈವ್‌ನಲ್ಲಿ ನಡೆದ ಮಾತುಕತೆಯ ವೇಳೆ ವಿರಾಟ್ ಕೊಹ್ಲಿ ಈ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ನಿಮ್ಮ ಬಯೋಪಿಕ್‌ನಲ್ಲಿ ನಿಮ್ಮ ಪಾತ್ರವನ್ನು ಯಾರು ನಿಭಾಯಿಸಬೇಕೆಂದು ಬಯಸುತ್ತೀರಿ ಎಂದು ಕೊಹ್ಲಿ, ಛೇಟ್ರಿ ಪ್ರಶ್ನೆ ಹಾಕಿದರು. ಇದಕ್ಕೆ ಪ್ರತಿಯಾಗಿ ಕೊಹ್ಲಿ, ‘ನನ್ನ ಪಾತ್ರವನ್ನು ನಾನೇ ನಿರ್ವಹಿಸಬೇಕು. ನನ್ನಷ್ಟು ಉತ್ತಮವಾಗಿ ನನ್ನ ಪಾತ್ರವನ್ನು ಬೇರೆ ಯಾರೂ ನಿಭಾಯಿಸಲು ಸಾಧ್ಯವಿಲ್ಲ. ಅದರಲ್ಲಿ ಅನುಷ್ಕಾ ಕೂಡ ಅವಳ ಪಾತ್ರವನ್ನು ಅವಳೇ ನಿಭಾಯಿಸಬೇಕೆಂದು ಬಯಸುತ್ತೇನೆ’ ಎಂದುತ್ತರಿಸಿದ್ದಾರೆ. ಇದಕ್ಕೆ ಧ್ವನಿಗೂಡಿಸಿದ ಛೇಟ್ರಿ, ‘ಹೌದು, ನೀವು ನಟಿಸಬಲ್ಲಿರಿ. ನೀವು ಹಾಸ್ಯವನ್ನೂ ಮಾಡುತ್ತೀರೆಂದು ಸಾಕಷ್ಟು ಜನರಿಗೆ ಗೊತ್ತಿಲ್ಲ’ ಎಂದು ಹೇಳಿದ್ದಾರೆ.

ಆದರೆ ತನಗೆ ನಟನೆ ಬರುತ್ತದೆ ಎಂಬ ಛೇಟ್ರಿ ಮಾತನ್ನು ಒಪ್ಪಿಕೊಳ್ಳದ ಕೊಹ್ಲಿ, ‘ನಾನೂ ನಟಿಸಬಲ್ಲೆ ಎಂಬುದು ತಪ್ಪುಗ್ರಹಿಕೆಯಾಗಿದೆ. ನಾನು ುಟ್‌ಬಾಲ್ ಕೂಡ ಆಡಬಲ್ಲೆ. ಹಾಗೆಂದು ನನಗೆ ಐಎಸ್‌ಎಲ್ ುಟ್‌ಬಾಲ್ ಟೂರ್ನಿಯಲ್ಲಿ ಆಡಲು ನೀವು ಅವಕಾಶ ಕೊಡುವಿರಾ? ಇಲ್ಲವಲ್ಲ. ಅದೇ ರೀತಿ, ನಾನು ಕ್ಯಾಮರಾವನ್ನು ಎದುರಿಸಬಲ್ಲೆ. ಆದರೆ ಅದನ್ನು ನೀವು ನಟನೆ ಎಂದು ಕರೆಯಲಾಗದು’ ಎಂದು ಹೇಳಿ ನಕ್ಕಿದ್ದಾರೆ. ‘ಆದರೆ ನನ್ನ ಬಯೋಪಿಕ್‌ನಲ್ಲಿ ನಾನೇ ನಟಿಸಬೇಕಾಗುತ್ತದೆ. ನನಗಿಂತ ಚೆನ್ನಾಗಿ ನನ್ನಂತೆ ಬೇರೆ ಯಾರು ನಟಿಸಬಲ್ಲರು?’ ಎಂದು ಕೊಹ್ಲಿ ಸೇರಿಸಿದ್ದಾರೆ.

ಅನುಷ್ಕಾಗೆ ಎಂದೂ ಪ್ರೇಮ ನಿವೇದನೆ ಮಾಡಲಿಲ್ಲ

ಬಾಲಿವುಡ್ ನಟಿ ಅನುಷ್ಕಾ ಶರ್ಮ ಅವರನ್ನು ಇಟಲಿಯಲ್ಲಿ ವರಿಸುವ ಮುನ್ನ ಕೊಹ್ಲಿ ಅವರೊಂದಿಗೆ ಸಾಕಷ್ಟು ಸಮಯ ಡೇಟಿಂಗ್ ನಡೆಸಿದ್ದರು. ಆದರೆ ಅನುಷ್ಕಾ ಬಳಿ ಎಂದೂ ಪ್ರೇಮ ನಿವೇದನೆ ಮಾಡಿಕೊಂಡಿರಲಿಲ್ಲ. ನಾವಿಬ್ಬರೂ ಸಹಜ ರೀತಿಯಲ್ಲೇ ಪರಸ್ಪರ ಅರ್ಥಮಾಡಿಕೊಂಡೆವು ಮತ್ತು ಒಂದಾದೆವು ಎಂದು ಕೊಹ್ಲಿ ಹೇಳಿದ್ದಾರೆ. ನಾವು ಜೀವನವನ್ನು ಖುಷಿಯಿಂದ, ಪ್ರೀತಿಸುತ್ತ ಕಳೆದಾಗ ವ್ಯಾಲೆಂಟೈನ್‌ನಂಥ ವಿಶೇಷ ದಿನಗಳ ಅಗತ್ಯ ಇರುವುದಿಲ್ಲ. ಹೀಗಾಗಿ ನಮಗಿಬ್ಬರಿಗೆ ಪ್ರೇಮ ನಿವೇದನೆ ಮಾಡಿಕೊಳ್ಳುವ ಅಗತ್ಯ ಬರಲಿಲ್ಲ. ನಾವಿಬ್ಬರು ಪರಸ್ಪರ ಮದುವೆಯಾಗಲು ಬಯಸಿದ್ದೇವೆ ಎಂಬುದನ್ನು ತಿಳಿದುಕೊಂಡಿದ್ದೆವು ಎಂದು ಕೊಹ್ಲಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net