ಆತ ಜೀವನದಲ್ಲಿ ಕ್ರಿಕೆಟ್ ಆಡೋದೇ ಇಲ್ಲ ಅಂದುಕೊಂಡಿದ್ದೆ: ಯುವ ಆಟಗಾರನ ಬಗ್ಗೆ ರವಿಶಾಸ್ತ್ರಿ ಓಪನ್ ಟಾಕ್​

ವಿಜಯವಾಣಿ - 2024-11-17T163010.690
Published on

ನವದೆಹಲಿ: ಇತ್ತೀಚೆಗಷ್ಟೇ ಐಪಿಎಲ್​ ರಿಟೆನ್ಶನ್​ ಪ್ರಕ್ರಿಯೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ನಿಂದ ಹೊರಬಿದ್ದ ಟೀಮ್ ಇಂಡಿಯಾದ ಸ್ಟಾರ್​ ಬ್ಯಾಟರ್​, ವಿಕೆಟ್ ಕೀಪರ್​ ರಿಷಬ್ ಪಂತ್​, ಸದ್ಯ ಹಲವು ದಿನಗಳಿಂದ ಸುದ್ದಿಯಲ್ಲಿದ್ದಾರೆ. ಹರಾಜು ಪ್ರಕ್ರಿಯೆಯಲ್ಲಿ ಹೆಸರಾಂತ ಫ್ರಾಂಚೈಸಿಗೆ ದುಬಾರಿ ಮೊತ್ತಕ್ಕೆ ಖರೀದಿ ಆಗುವ ಆಟಗಾರ ಎಂಬ ಪಟ್ಟಿಗೆ ಸೇರಿರುವ ಪಂತ್ ಕುರಿತು ಭಾರತದ ಮಾಜಿ ಹಿರಿಯ ಕ್ರಿಕೆಟಿಗ ರವಿಶಾಸ್ತ್ರಿ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.

ಕಾರು ಅಪಘಾತದಿಂದ ಗಂಭೀರವಾಗಿ ಗಾಯಗೊಂಡಿದ್ದ ರಿಷಬ್ ಪಂತ್ ಒಂದೂವರೆ ವರ್ಷ ಕ್ರಿಕೆಟ್​ನಿಂದ ದೂರ ಉಳಿದಿದ್ದರು. ಹಲವಾರು ಸರ್ಜರಿಗೆ ಒಳಗಾದ ಪಂತ್, ಬದುಕಿದ್ದೇ ಪವಾಡ ಎಂದಿದ್ದರು ವೈದ್ಯರು. ದೀರ್ಘ ವಿಶ್ರಾಂತಿ ಮತ್ತು ಸೂಕ್ತ ಚಿಕಿತ್ಸೆಯ ಮೇರೆಗೆ ಪೂರ್ಣವಾಗಿ ಗುಣಮುಖರಾದ ರಿಷಬ್​, ಮತ್ತೆ ಕ್ರಿಕೆಟ್​ಗೆ ಎಂಟ್ರಿ ಕೊಟ್ಟಿದ್ದೆ ಕಳೆದ ಐಪಿಎಲ್​ ಆವೃತ್ತಿಯಲ್ಲಿ. ಡೆಲ್ಲಿ ಕ್ಯಾಪಿಟಲ್ಸ್ ಪರ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ ರಿಷಬ್ ಪಂತ್, ಅಭಿಮಾನಿಗಳ ಅಪಾರ ಪ್ರೀತಿ, ಅಭಿಮಾನವನ್ನು ಐಪಿಎಲ್ ಮುಖಾಂತರ ಮತ್ತೊಮ್ಮೆ ಮೈದಾನದಲ್ಲಿ ಕಂಡರು. ಈ ವಿಷಯವನ್ನು ನೆನಪಿಸಿದ ರವಿಶಾಸ್ತ್ರಿ, ನಿಜಕ್ಕೂ ಅವರು ಮತ್ತೆ ಕ್ರಿಕೆಟ್​ ಆಡುತ್ತಾರೆ ಎಂದು ನಾನು ಊಹಿಸಿರಲಿಲ್ಲ ಎಂದಿದ್ದಾರೆ.

"ರಿಷಬ್ ಪಂತ್ ಇನ್ನು ಮುಂದೆ ಕ್ರಿಕೆಟ್ ಆಡುವುದಿಲ್ಲ ಎಂದು ನಾನು ಅಂದುಕೊಂಡಿದ್ದೆ. ಭೀಕರ ರಸ್ತೆ ಅಪಘಾತ ಸಂಭವಿಸಿದ ಒಂದು ತಿಂಗಳ ಬಳಿಕ ನಾನು ಅವರನ್ನು ನೋಡಲು ಆಸ್ಪತ್ರೆಗೆ ಹೋಗಿದ್ದೆ. ಆಗ ಅವರ ಸ್ಥಿತಿ ಚಿಂತಾಜನಕವಾಗಿತ್ತು. ರಿಷಬ್ ಮುಖ ಬಹಳ ಭಯಾನಕವಾಗಿತ್ತು. ಅಲ್ಲಲ್ಲಿ ಮೂಗೇಟು, ಹಲವು ಕಡೆ ಹೊಲಿಗೆ ಇದ್ದವು. ಇದೆಲ್ಲವನ್ನೂ ನೋಡಿದ ಬಳಿಕ ನಿಜಕ್ಕೂ ಅವರು ಕ್ರಿಕೆಟ್​ಗೆ ಮರಳುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ. ಆದ್ರೆ, ವಿಶ್ವಕಪ್​ ಗೆದ್ದ ತಂಡದಲ್ಲಿ ಆಡಿ, ನಂತರ ಟೆಸ್ಟ್​ ಪಂದ್ಯಗಳನ್ನು ಆಡುವುದು ಇದೆಯಲ್ಲ, ಅದೊಂದು ದೊಡ್ಡ ಸಾಧನೆ ಎಂದೇ ನಾನು ಹೇಳ್ತೀನಿ. ಕಳೆದ ವರ್ಷಗಳಲ್ಲಿ ಪಂತ್​ ಭಾರೀ ಶ್ರಮಿಸುತ್ತಿದ್ದಾರೆ. ಅವರ ಗೆಲುವು ಹೀಗೆ ಇರಲಿ" ಎಂದು ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net