ಟೀಮ್​ ಇಂಡಿಯಾ ಪರ ಆಡಲು ಐಪಿಎಲ್​ ಶಾರ್ಟ್​ಕಟ್​ ಆಗಬಾರದು; ಗೌತಮ್​ ಗಂಭೀರ್​ ಹೀಗಂದಿದ್ಯಾಕೆ?

web gam
Published on

ಚೆನ್ನೈ: ಟೀಮ್​ ಇಂಡಿಯಾ ಪರ ಎರಡು ವಿಶ್ವಕಪ್​ (ಟಿ20, ಏಕದಿನ) ಗೆದ್ದಿರುವ ಮಾಜಿ ಎಡಗೈ ಆರಂಭಿಕ ಗೌತಮ್​ ಗಂಭೀರ್​ಗೆ ಐಪಿಎಲ್​ ಎಂದರೆ ಇಷ್ಟ. ಕೆಕೆಆರ್​ ನಾಯಕರಾಗಿ 2 ಬಾರಿ ಕಪ್​ ಗೆದ್ದುಕೊಂಡಿದ್ದಾರೆ. ಲಖನೌ ಸೂಪರ್​ಜೈಂಟ್ಸ್​ ಮೆಂಟರ್​ ಆಗಿ 2 ಬಾರಿ ಪ್ಲೇಆಫ್​ ಹಂತಕ್ಕೇರಿಸಿದ್ದಾರೆ. ಈ ಬಾರಿ ಕೆಕೆಆರ್​ ತಂಡದ ಮೆಂಟರ್​ ಆಗಿಯೂ ಪ್ಲೇಆಫ್​ ಹಂತಕ್ಕೇರಿಸಿದ್ದಾರೆ. ಐಪಿಎಲ್​ ಟೂರ್ನಿಯ ಗುಣಮಟ್ಟವನ್ನೂ ಅವರು ಮುಕ್ತಕಂಠದಿಂದ ಪ್ರಶಂಸಿಸುತ್ತಾರೆ. ಆದರೆ ಭಾರತ ತಂಡಕ್ಕೆ ಪ್ರವೇಶ ಪಡೆಯಲು ಯುವ ಆಟಗಾರರಿಗೆ ಐಪಿಎಲ್​ ಒಳದಾರಿ ಆಗುವುದನ್ನು ಮಾತ್ರ ಗಂಭೀರ್​ ಬಲವಾಗಿ ವಿರೋಧಿಸಿದ್ದಾರೆ.

ಹಿರಿಯ ಸ್ಪಿನ್ನರ್​ ಆರ್​. ಅಶ್ವಿನ್​ ಅವರ ಯೂಟ್ಯೂಬ್​ ಚಾನಲ್​ "ಕುಟ್ಟಿ ಸ್ಟೋರಿಸ್​ ವಿದ್​ ಆಶ್​' ಜತೆ ಮಾತನಾಡಿರುವ ಗಂಭೀರ್​, "ಎಷ್ಟು ಯುವ ಆಟಗಾರರು ಭಾರತ ಪರ ಟೆಸ್ಟ್​ ಕ್ರಿಕೆಟ್​ ಆಡಲು ಬಯಸುತ್ತಾರೆ ಎಂಬುದು ನನಗೆ ಐಪಿಎಲ್​ ಬಗ್ಗೆ ಇರುವ ಕಳವಳವಾಗಿದೆ. ಟೀಮ್​ ಇಂಡಿಯಾ ಪರ ಆಡಲು ಐಪಿಎಲ್​ ಶಾರ್ಟ್​ಕಟ್​ ಆಗಬಾರದು' ಎಂದಿದ್ದಾರೆ.

ಐಪಿಎಲ್​ನಿಂದ ಭಾರತದ ದೇಶೀಯ ಕ್ರಿಕೆಟಿಗರಿಗೆ ಹೆಚ್ಚಿನ ಲಾಭವಿದೆ ಎಂಬುದನ್ನು ಗಂಭೀರ್​ ಒಪ್ಪಿಕೊಂಡಿದ್ದಾರೆ. "ಇಂದು ಅಂತಾರಾಷ್ಟ್ರೀಯ ಟಿ20 ತಂಡಗಳನ್ನು ನೋಡಿದಾಗ 2-3 ತಂಡಗಳ ಹೊರತುಪಡಿಸಿ, ಭಾರತ ಪರ ಆಡಲು ಇರುವಷ್ಟು ಸ್ಪರ್ಧೆ ಬೇರೆಲ್ಲೂ ಕಾಣಿಸುತ್ತಿಲ್ಲ. ಭಾರತದ ಗುಣಮಟ್ಟಕ್ಕೆ ಬೇರೆ ದೇಶಗಳು ಸಾಟಿಯಾಗಲು ಸಾಧ್ಯವಿಲ್ಲ. ಹೀಗಾಗಿ ಈಗಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ಗಿಂತ ಐಪಿಎಲ್​ ಹೆಚ್ಚು ಸ್ಪರ್ಧಾತ್ಮಕವಾಗಿದೆ ಎನ್ನಬಹುದು. ಐಪಿಎಲ್​ನಿಂದ ಭಾರತದ ದೇಶೀಯ ಕ್ರಿಕೆಟಿಗರ ಗುಣಮಟ್ಟವೂ ಬದಲಾಗಿದೆ. ಹೆಚ್ಚಿನ ದೇಶೀಯ ಕ್ರಿಕೆಟಿಗರು ಐಪಿಎಲ್​ನಲ್ಲಿ ಆಡಲು ಬಯಸುತ್ತಾರೆ ಮತ್ತು ಟಿ20 ಕೌಶಲ ಹೆಚ್ಚಿಸಲು ಪರಿಶ್ರಮಪಡುತ್ತಾರೆ' ಎಂದು ಗಂಭೀರ್​ ವಿವರಿಸಿದ್ದಾರೆ.

ತಂಡದ ಜಯ ನೋಡಲು ಅಭಿಮಾನಿಗಳು ಬರುತ್ತಾರೆ

"ಆಕ್ರಮಣಕಾರಿ ವರ್ತನೆ ನನ್ನ ಸ್ವಭಾವ ಆಗಿದೆ. ಎಲ್ಲಿಯವರೆಗೆ ನಾನು ನಿಯಮಗಳ ಉಲ್ಲಂನೆ ಮಾಡುವುದಿಲ್ಲವೋ ಅಲ್ಲಿಯವರೆಗೆ ಅದರಲ್ಲಿ ಯಾವುದೇ ತಪ್ಪಿಲ್ಲ. ನನಗೆ ಗೆಲ್ಲುವುದೇ ಪ್ರಮುಖವಾದುದು. ಅದೇ ನನ್ನ ಗೀಳು. ಅದೇ ನನ್ನ ಸಮಸ್ಯೆ ಕೂಡ. ಜನರು ಸ್ಟೇಡಿಯಂಗೆ ನನ್ನ ನಗು ನೋಡಲು ಬರುವುದಿಲ್ಲ. ನಮ್ಮ ತಂಡದ ಗೆಲುವು ನೋಡಲು ಬರುತ್ತಾರೆ. ನಮ್ಮ ವೃತ್ತಿ ಇರುವುದೇ ಹೀಗೆ. ನಾನು ಮನೋರಂಜಕ ಅಲ್ಲ. ನಾನೊಬ್ಬ ಕ್ರಿಕೆಟಿಗ, ನನ್ನ ಕೌಶಲ ತೋರಿಸಬೇಕಾಗುತ್ತದೆ. ಗೆಲುವಿನೊಂದಿಗೆ ಡ್ರೆಸ್ಸಿಂಗ್​ ರೂಂಗೆ ಮರಳುವುದು ನನ್ನ ಕೆಲಸ' ಎಂದು ಗಂಭೀರ್​ ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net