ಭಾರತದ ನಂ. 1 ಟೆನಿಸ್​ ಆಟಗಾರ ಸುಮಿತ್​ ನಗಾಲ್​ಗೆ ಆರ್ಥಿಕ ಸಂಕಷ್ಟ!

sumit nagal web
Published on

ನವದೆಹಲಿ: ಭಾರತದಲ್ಲಿ ಕ್ರೀಡಾಪಟುಗಳಿಗೆ ಆರ್ಥಿಕ ಸಮಸ್ಯೆಗಳು ಹೊಸದಲ್ಲ. ಸೂಕ್ತ ಪ್ರೋತ್ಸಾಹದ ಕೊರತೆ ಇದಕ್ಕೆ ಮುಖ್ಯ ಕಾರಣ. ಕ್ರೀಡಾಪಟುಗಳ ವೃತ್ತೀಜಿವನದ ಆರಂಭದಲ್ಲಿ ಇಂಥ ಸಂಕಷ್ಟಗಳು ಸಾಮಾನ್ಯ. ಆದರೆ, ಹರಿಯಾಣ ಮೂಲದ ಯುವ ಟೆನಿಸ್​ ತಾರೆ ಸುಮಿತ್​ ನಗಾಲ್​ ಈಗ ಭಾರತದ ನಂ. 1 ಸಿಂಗಲ್ಸ್​ ಆಟಗಾರರಾಗಿ ಬೆಳೆದಿದ್ದರೂ, ಆರ್ಥಿಕ ಸಂಕಷ್ಟದಿಂದ ಪರದಾಡುತ್ತಿರುವುದು ಆಘಾತಕಾರಿ ಎನಿಸಿದೆ.

ನನ್ನ ಬ್ಯಾಂಕ್​ ಖಾತೆಯಲ್ಲಿ ಈಗ 900 ಯುರೋ (80 ಸಾವಿರ ರೂ.) ಮಾತ್ರ ಇದೆ. ಹೀಗಾಗಿ ಸಂತೃಪ್ತಿಯ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಸುಮಿತ್​ ನಗಾಲ್​ ಸಂದರ್ಶನವೊಂದರಲ್ಲಿ ಅಲವತ್ತುಕೊಂಡಿದ್ದಾರೆ. ಇತ್ತೀಚೆಗೆ ಡೇವಿಸ್​ ಕಪ್​ನಲ್ಲಿ ಆಡಿದ ಎರಡೂ ಸಿಂಗಲ್ಸ್​ ಪಂದ್ಯದಲ್ಲಿ ಗೆಲುವು ದಾಖಲಿಸಿದ 26 ವರ್ಷದ ಸುಮಿತ್​ ನಗಾಲ್​ ಎಟಿಪಿ ರ್ಯಾಂಕಿಂಗ್​ನಲ್ಲಿ 159ನೇ ಸ್ಥಾನದಲ್ಲಿದ್ದಾರೆ. ಇದರಿಂದ ಸಿಂಗಲ್ಸ್​ನಲ್ಲಿ ಸದ್ಯ ಅವರೇ ಭಾರತದ ಅಗ್ರ ಶ್ರೇಯಾಂಕಿತರೆನಿಸಿದ್ದಾರೆ.

ಮಹಾ ಟೆನಿಸ್​ ಫೌಂಡೇಷನ್​ನ ಪ್ರಶಾಂತ್​ ಸುತರ್​ ಅವರಿಂದ ಈಗ ನನಗೆ ಆರ್ಥಿಕ ನೆರವು ಲಭಿಸುತ್ತಿದೆ. ಜತೆಗೆ ಐಒಸಿಎಲ್​ನಿಂದ ಮಾಸಿಕ ವೇತನ ಬರುತ್ತದೆ. ಇದೆಲ್ಲವನ್ನೂ ಈಗ ನಾನು ನನ್ನ ಟೆನಿಸ್​ ವೃತ್ತೀಜಿವನದ ಮೇಲೆ ಸುರಿಯುತ್ತಿದ್ದೇನೆ. ಆದರೆ ವಿಶ್ವ ರ್ಯಾಂಕಿಂಗ್​ನಲ್ಲಿ ಅಗ್ರ 100ರೊಳಗೆ ಪ್ರವೇಶಿಸಬೇಕಾದರೆ ನಾನು ವಾರ್ಷಿಕವಾಗಿ 1 ಕೋಟಿ ರೂ. ಖರ್ಚು ಮಾಡಬೇಕಾಗುತ್ತದೆ. ಆದರೆ ಸದ್ಯ ಕೇಂದ್ರ ಸರ್ಕಾರದ ಟಾರ್ಗೆಟ್​ ಒಲಿಂಪಿಕ್ಸ್​ ಯೋಜನೆಯಲ್ಲಿ (ಟಾಪ್ಸ್​) ನನ್ನ ಹೆಸರಿಲ್ಲ. ಹೀಗಾಗಿ ಸರ್ಕಾರದ ಸಹಾಯ ಲಭಿಸುತ್ತಿಲ್ಲ ಎಂದು ನಗಾಲ್​ ವಿವರಿಸಿದ್ದಾರೆ.

ನಗಾಲ್​ ಈ ವರ್ಷ ಇದುವರೆಗೆ 24 ಟೂರ್ನಿಗಳಲ್ಲಿ ಆಡಿದ್ದು, ಒಟ್ಟಾರೆ 65 ಲಕ್ಷ ರೂ. ಬಹುಮಾನ ಸಂಪಾದಿಸಿದ್ದಾರೆ. ಈ ಪೈಕಿ ಯುಎಸ್​ ಓಪನ್​ನ ಅರ್ಹತಾ ಸುತ್ತಿನಲ್ಲಿ ಒಂದು ಪಂದ್ಯ ಆಡಿದ್ದರಿಂದ ಗರಿಷ್ಠ 18 ಲಕ್ಷ ರೂ. ಗಳಿಸಿದ್ದರು. "ನಾನೀಗ ಟೆನಿಸ್​ನಿಂದ ಗಳಿಸುತ್ತಿರುವ ಎಲ್ಲವನ್ನೂ ಅದಕ್ಕೇ ಸುರಿಯುತ್ತಿದ್ದೇನೆ. ಕಳೆದ ಕೆಲ ವರ್ಷಗಳಿಂದ ಭಾರತದ ನಂ. 1 ಸಿಂಗಲ್ಸ್​ ಆಟಗಾರನಾಗಿದ್ದರೂ, ದೊಡ್ಡ ಮೊತ್ತದ ಬೆಂಬಲ ಲಭಿಸುತ್ತಿಲ್ಲ. ದೇಶದಲ್ಲಿ ಈಗ ನಾನೊಬ್ಬನೇ ಗ್ರಾಂಡ್​ ಸ್ಲಾಂ ಟೂರ್ನಿಗಳಿಗೆ ಅರ್ಹತೆ ಗಳಿಸುತ್ತಿದ್ದೇನೆ. ಕಳೆದ ಟೋಕಿಯೊ ಒಲಿಂಪಿಕ್ಸ್​ನಲ್ಲಿ ನಾನು ಮಾತ್ರ ಟೆನಿಸ್​ನಲ್ಲಿ ಪಂದ್ಯ ಗೆದ್ದಿದ್ದೆ. ಆದರೂ ಸರ್ಕಾರದಿಂದ ಬೆಂಬಲ ದೊರೆತಿಲ್ಲ' ಎಂದು ಪ್ರಾಥಮಿಕ ಶಾಲಾ ಪ್ರಾಧ್ಯಾಪಕನ ಪುತ್ರನಾಗಿರುವ ಸುಮಿತ್​ ನಗಾಲ್​ ಬೇಸರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net