ನೀನು ಭಾರತಕ್ಕೆ ಬರಕೂಡದು...! ಕಡೆಗೂ ಕಹಿ ಅನುಭವ ಕುರಿತು ಮೌನಮುರಿದ ಸ್ಪಿನ್​ 'ಚಕ್ರವರ್ತಿ' | Varun Chakravarthy

ವಿಜಯವಾಣಿ - 2025-03-15T070708.342
Published on

Varun Chakravarthy: ಇತ್ತೀಚೆಗಷ್ಟೇ ಮುಕ್ತಾಯಗೊಂಡ ಐಸಿಸಿ ಚಾಂಪಿಯನ್ಸ್​ ಟ್ರೋಫಿ ಟೂರ್ನಿಯಲ್ಲಿ ನ್ಯೂಜಿಲೆಂಡ್​ ವಿರುದ್ಧ 4 ವಿಕೆಟ್​ಗಳ ಭರ್ಜರಿ ಜಯ ಗಳಿಸಿದ ಭಾರತ, ರೋಹಿತ್ ಶರ್ಮ ನಾಯಕತ್ವದಲ್ಲಿ ಸತತ ಎರಡನೇ ಬಾರಿಗೆ ಐಸಿಸಿ ಟ್ರೋಫಿಯನ್ನು ಎತ್ತಿಹಿಡಿಯಿತು. ಟೀಮ್ ಇಂಡಿಯಾ ಆಲ್​ರೌಂಡ್​ ಪ್ರದರ್ಶನಕ್ಕೆ ಮನಸೋತ ಭಾರತೀಯರು, ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವನ್ನೇ ಹರಿಸಿದರು.

ಬ್ಯಾಟಿಂಗ್​ನಲ್ಲಿ ರೋಹಿತ್ ಶರ್ಮ, ವಿರಾಟ್​ ಕೊಹ್ಲಿ, ಶುಭಮನ್​ ಗಿಲ್​, ಕೆ.ಎಲ್​. ರಾಹುಲ್​ ಅದ್ಭುತ ಕೊಡುಗೆ ನೀಡಿದರೆ, ಬೌಲಿಂಗ್ ಯೂನಿಟ್​ನಲ್ಲಿ ತಂಡಕ್ಕೆ ಆಸೆರೆಯಾಗಿದ್ದು ಸ್ಪಿನ್​ ಬೌಲರ್​ಗಳು. ಈ ಪೈಕಿ ಭಾರತ ಪರ ಟೂರ್ನಿ ಪೂರ ಮಿಂಚಿ, ಅಭಿಮಾನಿಗಳ ಮನೆಗೆದ್ದಿದ್ದು ವರುಣ್​ ಚಕ್ರವರ್ತಿ. ತಮ್ಮ ಅದ್ಭುತ ಸ್ಪಿನ್ ದಾಳಿಯಿಂದ ಎದುರಾಳಿಗಳ ವಿಕೆಟ್​ಗಳನ್ನು ಕಿತ್ತುಬಿಸಾಡಿದ ವರುಣ್​, ಕೋಟ್ಯಂತರ ಕ್ರೀಡಾಭಿಮಾನಿಗಳ ಪ್ರೀತಿಗೆ ಪಾತ್ರರಾದರು. ತಂಡದಲ್ಲಿ ಸ್ಥಾನ ಪಡೆದದ್ದು, ತಮಗಾದ ಕಹಿ ಅನುಭವ, ಅದರಿಂದ ಆದ ಹಿಂಸೆ ಕುರಿತು ಇದೀಗ ಸಂದರ್ಶನವೊಂದರಲ್ಲಿ ವರುಣ್ ಮನಬಿಚ್ಚಿ ಮಾತನಾಡಿದ್ದಾರೆ.

"2021ರ ಐಸಿಸಿ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ತಂಡದ ಪರ ಕಳಪೆ ಪ್ರದರ್ಶನ ನೀಡಿದ ನನಗೆ ವಿಪರೀತ ಬೆದರಿಕೆ ಕರೆಗಳು, ಛೀಮಾರಿ ವ್ಯಕ್ತವಾಗಿತ್ತು. ತೀರ ಕಷ್ಟಕರ ಸಂದರ್ಭಗಳನ್ನು ಎದುರಿಸಿದ್ದೀನಿ. ಆದರೆ, ಇಂದಿನ ಸ್ಥಾನಮಾನವನ್ನು ನೆನಪಿಸಿಕೊಂಡರೆ ಬಹಳ ಖುಷಿಯಾಗುತ್ತೆ. 2021ರ ಟಿ20 ವಿಶ್ವಕಪ್ ಮುಗಿದ ಬಳಿಕ ನನಗೆ ಬೆದರಿಕೆ ಕರೆಗಳು ಹೆಚ್ಚಾದವು. 'ನೀನು ಭಾರತಕ್ಕೆ ಬರಬೇಡ. ಪ್ರಯತ್ನಿಸಿದರೆ ಅದು ಸಾಧ್ಯವಾಗುವುದಿಲ್ಲ' ಎಂದರು. ನನ್ನ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸಲು ಕೆಲವರು ನನ್ನ ಮನೆ ಬಳಿ ಸುಳಿದಾಡಲು ಪ್ರಾರಂಭಿಸಿದರು. ಕೆಲವೊಮ್ಮೆ ಅದನ್ನು ತಪ್ಪಿಸಲು ನಾನು ಅವಿತುಕೊಂಡಿದ್ದು ಉಂಟು. ಏರ್​ಪೋರ್ಟ್​ನಿಂದ ವಾಪಾಸ್​ ಹೋಗುವಾಗ ಒಂದಷ್ಟು ಜನ ನನ್ನನ್ನೇ ಹಿಂಬಾಲಿಸುತ್ತಿದ್ದರು. ಆಗ ಒಂದು ನನಗೆ ಅನಿಸಿದ್ದು, ಇಲ್ಲಿ ಅಭಿಮಾನಿಗಳು ಭಾವುಕರಾಗಿದ್ದಾರೆ ಅಂತ" ಎಂದು ಚಕ್ರವರ್ತಿ ಹೇಳಿದರು.

"ಆದರೆ, ಇಂದು ನಾನು ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದೇನೆ ಎಂಬ ವಿಚಾರ ಬಹಳ ಖುಷಿ ನೀಡಿದೆ. ಎಲ್ಲಾ ಒಳ್ಳೆಯ ವಿಷಯಗಳು ವೇಗವಾಗಿ ಚಲಿಸುತ್ತಿವೆ ಎಂಬ ಸಂಗತಿಯನ್ನು ನನ್ನಿಂದಲೇ ನಂಬಲು ಸಾಧ್ಯವಾಗುತ್ತಿಲ್ಲ. ಇದನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಬಯಸುತ್ತೇನೆ ಹಾಗೂ ಶ್ರಮಿಸುತ್ತೇನೆ. ನಾನು ಕಠಿಣ, ಕಷ್ಟಕರ ಸಮಯವನ್ನು ಎದುರಿಸಿದ್ದೇನೆ. ಟೀಕೆ, ವ್ಯಂಗ್ಯಗಳು ಎಷ್ಟು ಕೆಟ್ಟದಾಗಿರುತ್ತವೆ ಎಂಬುದು ನನಗೆ ಈಗ ಚೆನ್ನಾಗಿ ತಿಳಿದಿದೆ" ಎಂದು ವರುಣ್ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net