ಹಾಕಿ ವಿಶ್ವ ವಿಜಯಕ್ಕೆ 50ರ ಹರ್ಷ; 1975ರ ವಿಶ್ವಕಪ್​ ವಿಜೇತರಿಗೆ ಇಂದು ಹಾಕಿ ಇಂಡಿಯಾ ಸನ್ಮಾನ

web hockey
Published on

ನವದೆಹಲಿ: ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡಕ್ಕೆ 2-1 ಗೋಲುಗಳಿಂದ ಸೋಲುಣಿಸುವ ಮೂಲಕ ಭಾರತ ತಂಡ ಹಾಕಿ ವಿಶ್ವಕಪ್​ ಟ್ರೋಫಿಗೆ ಮುತ್ತಿಟ್ಟ ಕ್ಷಣಕ್ಕೆ ಶನಿವಾರ 50ನೇ ವರ್ಷಗಳ ಸಂಭ್ರಮ. 1975ರ ಮಾರ್ಚ್​ 15ರಂದು ಮಲೇಷ್ಯಾದ ಕೌಲಾಲಂಪುರದಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಅಜಿತ್​ ಪಾಲ್​ ಸಿಂಗ್​ ನೇತೃತ್ವದ ಭಾರತ ತಂಡ ಹಾಕಿ ಮಾಂತ್ರಿಕ ಮೇಜರ್​ ಧ್ಯಾನ್​ಚಂದ್​ ಅವರ ಪುತ್ರ ಅಶೋಕ್​ ಕುಮಾರ್​ ಸಿಡಿಸಿದ ನಿರ್ಣಾಯಕ ಗೋಲಿನ ನೆರವಿನಿಂದ ರೋಚಕ ಗೆಲುವು ಸಾಧಿಸಿತ್ತು. ಭಾರತದ ಮೊದಲ ಮತ್ತು ಇದುವರೆಗಿನ ಏಕೈಕ ಹಾಕಿ ವಿಶ್ವಕಪ್​ ಗೆಲುವಿನ ಸುವರ್ಣ ಸಂಭ್ರಮದ ಹಿನ್ನೆಲೆಯಲ್ಲಿ ಹಾಕಿ ಇಂಡಿಯಾ (ಎಚ್​ಐ) ಆಗಿನ ತಂಡದ ಎಲ್ಲ ಸದಸ್ಯರನ್ನು ರಾಷ್ಟ್ರ ರಾಜಧಾನಿಯಲ್ಲಿ ಸನ್ಮಾನಿಸಲಿದೆ.

ಹಾಕಿ ಇಂಡಿಯಾದ 7ನೇ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭ ಶನಿವಾರ ನವದೆಹಲಿಯಲ್ಲಿ ನಡೆಯಲಿದ್ದು, ಈ ವೇಳೆ 1975ರ ವಿಶ್ವಕಪ್​ ವಿಜೇತ ತಂಡದ ಸದಸ್ಯರು ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅಲ್ಲದೆ ಈ ಸಮಾರಂಭ ವಿಶ್ವಕಪ್​ ಗೆಲುವಿನ ಸುವರ್ಭ ಮಹೋತ್ಸವ ಸಂಭ್ರಮಕ್ಕೂ ವೇದಿಕೆ ಆಗಲಿದೆ. ಹಾಕಿ ಇಂಡಿಯಾ 2024ರ ಸಾಲಿನ 8 ವಿಭಾಗದ ಪ್ರಶಸ್ತಿಗಳನ್ನು ಸಮಾರಂಭದಲ್ಲಿ ಘೋಷಿಸಲಿದ್ದು, ಒಟ್ಟು 12 ಕೋಟಿ ರೂ. ಮೊತ್ತದ ಬಹುಮಾನವನ್ನು ಹಂಚಲಿದೆ.

*ನಮ್ಮ ಸಾಧನೆಯ ಸುವರ್ಣ ಸಂಭ್ರಮವನ್ನು ಹಾಕಿ ಇಂಡಿಯಾ ದೊಡ್ಡ ಮಟ್ಟದಲ್ಲಿ ಆಚರಿಸುತ್ತಿರುವುದು ಅಪಾರ ಖುಷಿ ತಂದಿದೆ. 1964ರ ಒಲಿಂಪಿಕ್ಸ್​ ಸ್ವರ್ಣ ಪದಕದ ಬಳಿಕ 1975ರ ವಿಶ್ವಕಪ್​ ಗೆಲುವು ಭಾರತ ತಂಡದ ದೊಡ್ಡ ಸಾಧನೆ ಆಗಿತ್ತು. ಅದಾಗಿ 50 ವರ್ಷಗಳೇ ಕಳೆದಿವೆ. ಆದರೆ ಆ ನೆನಪುಗಳು ಇನ್ನೂ ನಮ್ಮ ಮನಸ್ಸಿನಲ್ಲಿ ತಾಜಾ ಆಗಿವೆ.

| ಅಜಿತ್​ ಪಾಲ್​ ಸಿಂಗ್​, 1975ರ ವಿಶ್ವಕಪ್​ ವಿಜೇತ ನಾಯಕ

ಪ್ರಚಂಡ ವಿಶ್ವ ವಿಕ್ರಮ

ಮೂರನೇ ಆವೃತ್ತಿಯ ಹಾಕಿ ವಿಶ್ವಕಪ್​ನಲ್ಲಿ ಅಜೇಯವಾಗಿ ಪ್ರಶಸ್ತಿ ಜಯಿಸುವ ಮೂಲಕ ಭಾರತ ಇತಿಹಾಸ ಬರೆದಿತ್ತು. ಲೀಗ್​ ಹಂತದಲ್ಲಿ ಇಂಗ್ಲೆಂಡ್​ (2-1), ಘಾನಾ (7-0), ಪಶ್ಚಿಮ ಜರ್ಮನಿ (3-1) ವಿರುದ್ಧ ಗೆಲುವು ಸಾಧಿಸಿದ್ದ ಭಾರತ, ಆಸೀಸ್​ ಎದುರು 1-1ರಿಂದ ಡ್ರಾ ಕಂಡಿತ್ತು ಮತ್ತು ಅರ್ಜೆಂಟೀನಾ ಎದುರು 1-2ರಿಂದ ಸೋತಿತು. ಎ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದ್ದ ಭಾರತ, ಸೆಮೀಸ್​ನಲ್ಲಿ ಆತಿಥೇಯ ಮಲೇಷ್ಯಾವನ್ನು 3-2ರಿಂದ ಮಣಿಸಿತು. ನಂತರ ಫೈನಲ್​ನಲ್ಲಿ ಪಾಕಿಸ್ತಾನವನ್ನು ಪರಾಭವಗೊಳಿಸಿತು. 1973ರ ವಿಶ್ವಕಪ್ ಫೈನಲ್​ನಲ್ಲಿ ನೆದರ್ಲೆಂಡ್​ ಎದುರು ಪೆನಾಲ್ಟಿ ಶೂಟೌಟ್​ನಲ್ಲಿ 2-4ರಿಂದ ಸೋತಿದ್ದ ಭಾರತ, 2 ವರ್ಷಗಳ ನಂತರ ಪ್ರಶಸ್ತಿಗೆ ಮುತ್ತಿಕ್ಕುವಲ್ಲಿ ಯಶಸ್ವಿಯಾಯಿತು. ಮೂರು ಬಾರಿಯ ಒಲಿಂಪಿಕ್ಸ್​ ಸ್ವರ್ಣ ಪದಕ ವಿಜೇತ ಬಲ್ಬೀರ್​ ಸಿಂಗ್​ ಸೀನಿಯರ್​ ತಂಡದ ಮ್ಯಾನೇಜರ್​ ಆಗಿ ಗೆಲುವಿಗೆ ಸ್ಫೂರ್ತಿ ತುಂಬಿದ್ದರು.

ವಿಜಯದಲ್ಲಿ ಇಬ್ಬರು ಕನ್ನಡಿಗರ ಮಿಂಚು

1975ರ ಹಾಕಿ ವಿಶ್ವಕಪ್​ ವಿಜೇತ ಭಾರತ ತಂಡದಲ್ಲಿ ಇಬ್ಬರು ಕನ್ನಡಿಗರಿದ್ದರು. ಅವರೆಂದರೆ ಬಿಳಿಮೊಗ ಪುಟ್ಟಸ್ವಾಮಿ ಗೋವಿಂದ ಮತ್ತು ಪಿ.ಇ. ಕಾಳಯ್ಯ. ಇವರಿಬ್ಬರು ಕೊಡಗಿನ ಹಾಕಿ ತಾರೆಯರು ಭಾರತ ತಂಡದ ವಿಶ್ವಕಪ್​ ಗೆಲುವಿಗೆ ಅಮೂಲ್ಯ ಕೊಡುಗೆ ನೀಡಿದ್ದರು. ಫಾರ್ವರ್ಡ್​ ಆಟಗಾರರಾಗಿದ್ದ ಬಿ.ಪಿ. ಗೋವಿಂದ, ಆ ಕಾಲದ ಅತ್ಯಂತ ವೇಗದ ಹೊಡೆತಗಳ ಹಾಕಿ ಆಟಗಾರರೆನಿಸಿದ್ದರು. 1973ರ ವಿಶ್ವಕಪ್​ನಲ್ಲಿ ರನ್ನರ್​ಅಪ್​ಗೆ ತೃಪ್ತಿಪಟ್ಟಿದ್ದ ತಂಡದಲ್ಲೂ ಇದ್ದ ಗೋವಿಂದ, 1975ರ ಲೀಗ್​ ಹಂತದಲ್ಲಿ 2 ಗೋಲು ಸಿಡಿಸಿ ಮಿಂಚಿದ್ದರು. ಕಾಳಯ್ಯ ಅವರು ಘಾನಾ ಮತ್ತು ಅರ್ಜೆಂಟೀನಾ ವಿರುದ್ಧದ ಲೀಗ್​ ಪಂದ್ಯಗಳಲ್ಲಿ ಆಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net