

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಆವೃತ್ತಿಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಗ್ರ್ಯಾಂಡ್ ಓಪನಿಂಗ್ ಇದೇ ಮಾರ್ಚ್ 22ರಂದು ಚೆನ್ನೈನ ಚೇಪಾಕ್ ಸ್ಟೇಡಿಯಂನಲ್ಲಿ ಅದ್ದೂರಿಯಾಗಿ ನಡೆಯಲಿದೆ. ಇದರ ಬೆನ್ನಲ್ಲೇ ಮೊದಲ 21 ದಿನಗಳ ವೇಳಾಪಟ್ಟಿಯನ್ನು ಬಿಸಿಸಿಐ ಬಿಡುಗಡೆಗೊಳಿಸಿದೆ. ಕಿಕ್ಸ್ಟಾರ್ಟ್ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಆಯೋಜಿಸುವ ಮೂಲಕ ಕ್ರಿಕೆಟ್ ಅಭಿಮಾನಿಗಳಲ್ಲಿ ಮತ್ತಷ್ಟು ಕಿಚ್ಚು ಹೆಚ್ಚಿಸಿದೆ.
ಒಂದೆಡೆ ಐಪಿಎಲ್ನ 10 ತಂಡಗಳ 10 ಕ್ಯಾಪ್ಟನ್ಗಳ ಮೇಲೆ ಭಾರೀ ಭರವಸೆ ಮತ್ತು ನಿರೀಕ್ಷೆಗಳ ಹೆಚ್ಚಾದರೂ ಸಹ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ವಿರುದ್ಧ ಕೇಳಿಬರುತ್ತಿರುವ ವಿಚಾರಗಳು ಮಾತ್ರ ಕಿಂಚಿತ್ತು ಕಡಿಮೆಯಾಗಿಲ್ಲ ಎಂಬಂತೆ ಕಾಣುತ್ತಿದೆ. ಹೌದು, ಇದಕ್ಕೆ ಕಾರಣ ಎರಡು ವರ್ಷ ಗುಜರಾತ್ ಟೈಟನ್ಸ್ ನಾಯಕನಾಗಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಫೈನಲ್ ಹಣಾಹಣಿಯವರೆಗೂ ತಂದಿದ್ದ ಪಾಂಡ್ಯ ಕಳೆದ ವರ್ಷ ದಿಢೀರ್ ಟೈಟನ್ಗೆ ಕೈಕೊಟ್ಟು ಮುಂಬೈ ಇಂಡಿಯನ್ಸ್ ತಂಡಕ್ಕೆ ಮತ್ತೆ ಹಿಂತಿರುಗಿದರು. ಈ ಸಂಗತಿ ಕ್ರಿಕೆಟ್ ಫ್ಯಾನ್ಸ್ಗಳಲ್ಲಿ ಭಾರೀ ಆಶ್ಚರ್ಯ ಮೂಡಿಸಿತು.
ಸದ್ಯ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ ಈ ಬಾರಿಯ ಐಪಿಎಲ್ನಲ್ಲಿ ಕಾಣಿಸಿಕೊಳ್ಳಲಿರುವ ಹಾರ್ದಿಕ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಕೆಲವು ವಿಚಾರಗಳ ಕುರಿತು ಮಾತನಾಡಿರುವ ಗುಜರಾತ್ ಟೈಟನ್ಸ್ನ ಕೋಚ್ ಆಶಿಶ್ ನೆಹ್ರಾ, "ಮುಂಬೈ ಇಂಡಿಯನ್ಸ್ಗೆ ಹಾರ್ದಿಕ್ ಹೋಗಿದ್ದು ಅವರ ನಿರ್ಧಾರ, ಖಂಡಿತ ಮಿಸ್ ಮಾಡಿಕೊಳ್ಳುತ್ತೀವಿ. ಆದರೆ, ಒಮ್ಮೆಯೂ ಪಾಂಡ್ಯ ಅವರನ್ನು ಮನವೊಲಿಸಲು ನಾವು ಪ್ರಯತ್ನಿಸಲಿಲ್ಲ" ಎಂದು ನೆಹ್ರಾ ಹೇಳಿದರು.
"ಮಾರ್ಚ್ 22ರಿಂದ ಪ್ರಾರಂಭವಾಗುವ ಐಪಿಎಲ್ನಲ್ಲಿ ಗುಜರಾತ್ ಟೈಟನ್ಸ್ ಪರವಾಗಿ ಖಂಡಿತ ಹಾರ್ದಿಕ್ನ ಮಿಸ್ ಮಾಡ್ಕೊತ್ತೀವಿ. ನೀವು ಆಡಿದಷ್ಟು, ಅನುಭವ ಹೆಚ್ಚುತ್ತದೆ. ನಾನು ಅವರನ್ನು ಹೋಗದಂತೆ ತಡೆಯಬಹುದಿತ್ತು. ಆದ್ರೆ, ಅದನ್ನು ಮಾಡಲಿಲ್ಲ. ಪಾಂಡ್ಯ ಎರಡು ವರ್ಷಗಳ ಕಾಲ ಜಿಟಿಯಲ್ಲಿ ಆಡಿದ್ದಾರೆ. ಆದರೆ ಇಂದು ಮುಂಬೈಗೆ ಮರಳಿದ್ದಾರೆ. 5-6 ವರ್ಷಗಳ ಕಾಲ ಅದೇ ತಂಡದಲ್ಲಿ ಆಡಿರುವುದು ಇದಕ್ಕೆ ಕಾರಣ" ಎಂದರು,(ಏಜೆನ್ಸೀಸ್).