600 ವಿಕೆಟ್‌ಗಳ ಸರದಾರ ಅಶ್ವಿನ್ ಕ್ರಿಕೆಟಿಗನಾಗಿದ್ದು ಆಕಸ್ಮಿಕವಂತೆ!

ash web
Published on

ಅಹಮದಾಬಾದ್: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 600 ವಿಕೆಟ್ ಕಬಳಿಸಿದ 5ನೇ ಭಾರತೀಯರೆನಿಸಿರುವ ತಮಿಳುನಾಡಿನ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಟೆಸ್ಟ್ ಕ್ರಿಕೆಟ್‌ನಲ್ಲಿ 400 ವಿಕೆಟ್ ಕಬಳಿಸಿದ 4ನೇ ಭಾರತೀಯರು ಮತ್ತು ವಿಶ್ವದ 2ನೇ ಅತಿವೇಗದ ಸಾಧಕರೆಂಬ ಮೈಲಿಗಲ್ಲನ್ನೂ ಸ್ಥಾಪಿಸಿದ್ದಾರೆ. ಇದಕ್ಕಾಗಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಆರ್. ಅಶ್ವಿನ್ ಅವರನ್ನು ಆಧುನಿಕ ಕ್ರಿಕೆಟ್‌ನ ದಿಗ್ಗಜ ಎಂದೂ ಬಣ್ಣಿಸಿದ್ದಾರೆ. ಕ್ರಿಕೆಟ್‌ನಲ್ಲಿ ಇಂಥ ಅಮೋಘ ಸಾಧನೆ ತೋರಿರುವ ಆರ್. ಅಶ್ವಿನ್ ಕ್ರಿಕೆಟಿಗರಾಗಿದ್ದೇ ಆಕಸ್ಮಿಕವಂತೆ! ಇದನ್ನು ಸ್ವತಃ ಅಶ್ವಿನ್ ಅವರೇ ಹೇಳಿಕೊಂಡಿದ್ದಾರೆ.

‘ನಾನು ಆಕಸ್ಮಿಕವಾಗಿ ಕ್ರಿಕೆಟಿಗನಾದೆ. ನಾನು ಕ್ರಿಕೆಟ್ ಪ್ರೇಮಿಯಾಗಿದ್ದೆ. ಬಳಿಕ ಕ್ರಿಕೆಟಿಗನಾಗಿ ಬದಲಾದೆ. ನಾನೀಗ ಇಲ್ಲಿ ನನ್ನ ಕನಸಿನ ಜೀವನ ನಡೆಸುತ್ತಿದ್ದೇನೆ. ಮುಂದೊಂದು ದಿನ ನಾನು ಭಾರತ ತಂಡದ ಜೆರ್ಸಿ ಧರಿಸುವೆ ಮತ್ತು ಭಾರತ ಪರ ಆಡುವೆ ಎಂದು ಕಲ್ಪನೆಯನ್ನೂ ಮಾಡಿರಲಿಲ್ಲ’ ಎಂದು ಅಶ್ವಿನ್ ಬಿಸಿಸಿಐ ವೆಬ್‌ಸೈಟ್‌ಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ಭಾರತ ಪರ ಆಡಲು ನಾನೆಷ್ಟು ಅದೃಷ್ಟವಂತನಾಗಿದ್ದೆ ಎಂಬುದು ಕೋವಿಡ್-19 ಲಾಕ್‌ಡೌನ್ ವೇಳೆ ಮನವರಿಕೆಯಾಯಿತು ಎಂದಿರುವ 34 ವರ್ಷದ ಅಶ್ವಿನ್, ಲಾಕ್‌ಡೌನ್ ವೇಳೆ ಸಾಕಷ್ಟು ಹಳೆಯ ಕ್ರಿಕೆಟ್ ಪಂದ್ಯಗಳ ವಿಡಿಯೋ ನೋಡಿದ್ದೆ. ಅದರಿಂದ ಕ್ರಿಕೆಟ್ ಆಟವನ್ನು ಇನ್ನಷ್ಟು ಹೆಚ್ಚು ಅರ್ಥಮಾಡಿಕೊಳ್ಳಲು ಸಾಧ್ಯವಾಯಿತು. ಚೆಪಾಕ್‌ನಲ್ಲಿ ಸಚಿನ್ ತೆಂಡುಲ್ಕರ್ ಸಿಡಿಸಿದ್ದ ಶತಕದ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ನೋಡಿ ಸಾಕಷ್ಟು ಸ್ಫೂರ್ತಿ ಪಡೆದುಕೊಂಡಿದ್ದೆ ಎಂದು ಹೇಳಿದ್ದಾರೆ. ಅಹಮದಾಬಾದ್‌ನ ಅಹರ್ನಿಶಿ ಟೆಸ್ಟ್‌ನಲ್ಲಿ 7 ವಿಕೆಟ್ ಕಬಳಿಸಿದ ಅಶ್ವಿನ್ ಅವರ ಒಟ್ಟು ವಿಕೆಟ್ ಸಂಖ್ಯೆ ಈಗ 401ಕ್ಕೇರಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ವಿಕೆಟ್ ಸಂಖ್ಯೆ 603ಕ್ಕೇರಿದೆ.

ಇಂಗ್ಲೆಂಡ್ ಬಾಲಂಗೋಚಿ ಜೋಫ್ರಾ ಆರ್ಚರ್, ಅಶ್ವಿನ್ ಪಾಲಿಗೆ 400ನೇ ಟೆಸ್ಟ್ ವಿಕೆಟ್ ಆದರು. ಅಂಪೈರ್ ನೀಡಿದ ಎಲ್‌ಬಿಡಬ್ಲ್ಯು ತೀರ್ಪಿನ ವಿರುದ್ಧ ಆರ್ಚರ್ ಡಿಆರ್‌ಎಸ್ ಮನವಿ ಸಲ್ಲಿಸಿದಾಗಲೇ 400 ವಿಕೆಟ್ ಪೂರ್ಣಗೊಂಡಿದ್ದು ತಿಳಿಯಿತು. ಆ ವೇಳೆ ಸಂಪೂರ್ಣ ಕ್ರೀಡಾಂಗಣ ಚಪ್ಪಾಳೆ ತಟ್ಟಿದಾಗ ಅಪಾರ ಖುಷಿಯಾಯಿತು ಎಂದು ಅಶ್ವಿನ್ ಹೇಳಿದ್ದಾರೆ. ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲೂ ಭಾರತ ತಂಡದ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಶ್ವಿನ್, ಕಳೆದ ಮೂರು ತಿಂಗಳು ಅದ್ಭುತ ಕ್ಷಣಗಳನ್ನು ನೀಡಿವೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net