

ಅಹಮದಾಬಾದ್: ಟೀಮ್ ಇಂಡಿಯಾ ವೇಗಿ ಇಶಾಂತ್ ಶರ್ಮ ಅವರಿಗೆ ಇಂಗ್ಲೆಂಡ್ ವಿರುದ್ಧ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಅಹರ್ನಿಶಿ ಪಂದ್ಯ ವೃತ್ತಿಜೀವನದ 100ನೇ ಟೆಸ್ಟ್ ಆಗಿತ್ತು. ಭಾರತ ತಂಡ ಪಂದ್ಯದಲ್ಲಿ ಎರಡೇ ದಿನಗಳಲ್ಲಿ ಗೆದ್ದು ಇಶಾಂತ್ ಶರ್ಮಗೆ ಭರ್ಜರಿ ಉಡುಗೊರೆ ನೀಡಿತು. ಇದರೊಂದಿಗೆ ಇನ್ನೊಂದು ಕಾರಣಕ್ಕಾಗಿಯೂ ಇಶಾಂತ್ ಶರ್ಮ ಅವರಿಗೆ ಇದು ವೃತ್ತಿಜೀವನದ ಸ್ಮರಣೀಯ ಪಂದ್ಯವೆನಿಸಿತು.
ಕಳೆದ 14 ವರ್ಷಗಳಿಂದ ಭಾರತ ತಂಡದ ಸದಸ್ಯರಾಗಿರುವ ಇಶಾಂತ್ ಶರ್ಮ ಬಾಲಂಗೋಚಿ ಬ್ಯಾಟ್ಸ್ಮನ್. ಆದರೆ ಹಿಂದಿನ 99 ಟೆಸ್ಟ್ಗಳಲ್ಲಿ 134 ಇನಿಂಗ್ಸ್ಗಳಲ್ಲಿ ಅವರಿಗೆ ಬ್ಯಾಟ್ ಹಿಡಿಯುವ ಅವಕಾಶ ಲಭಿಸಿತ್ತು. ಈ ವೇಳೆ ಒಂದು ಅರ್ಧಶತಕವನ್ನೂ ಅವರು ಬಾರಿಸಿದ್ದರು. ಆದರೆ ಅವರ ಬ್ಯಾಟ್ನಿಂದ ಎಂದೂ ಸಿಕ್ಸರ್ ಸಿಡಿದಿರಲಿಲ್ಲ. ಆ ಕೊರತೆ ಗುರುವಾರ ಅಹಮದಾಬಾದ್ನಲ್ಲಿರುವ ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣದಲ್ಲಿ ನೀಗಿತು.
ಭಾರತ ತಂಡದ ಮೊದಲ ಇನಿಂಗ್ಸ್ ವೇಳೆ ಇಶಾಂತ್ ಶರ್ಮ ಅವರು ಇಂಗ್ಲೆಂಡ್ ಸ್ಪಿನ್ನರ್ ಜಾಕ್ ಲೀಚ್ ಎಸೆತದಲ್ಲಿ ಲಾಂಗ್ ಆ್ನಲ್ಲಿ ಸಿಕ್ಸರ್ ಸಿಡಿಸಿದರು. ಇದು ಅವರು ಆಡಿದ 194 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ (100 ಟೆಸ್ಟ್, 80 ಏಕದಿನ, 14 ಟಿ20) ಸಿಡಿಸಿದ ಮೊದಲ ಸಿಕ್ಸರ್ ಆಗಿದೆ. ಇನಿಂಗ್ಸ್ನಲ್ಲಿ ಅವರ ಅಜೇಯ 10 ರನ್ ಗಳಿಕೆ ಭಾರತದ ಇನಿಂಗ್ಸ್ ಮುನ್ನಡೆ ಹಿಗ್ಗಿಸುವಲ್ಲೂ ಪ್ರಮುಖ ಪಾತ್ರವಹಿಸಿತು. ಈ ಹಿಂದೆ ಏಕದಿನದಲ್ಲಿ 28 ಮತ್ತು ಟಿ20ಯಲ್ಲಿ 3 ಇನಿಂಗ್ಸ್ಗಳಲ್ಲಿ ಬ್ಯಾಟಿಂಗ್ ಮಾಡಿದ್ದರೂ ಅವರು ಸಿಕ್ಸರ್ ಸಿಡಿಸಿರಲಿಲ್ಲ. ಆದರೆ ಪ್ರಥಮ ದರ್ಜೆ ಕ್ರಿಕೆಟ್ನ 144 ಪಂದ್ಯಗಳಲ್ಲಿ 4 ಸಿಕ್ಸರ್ ಸಿಡಿಸಿದ ದಾಖಲೆ ಹೊಂದಿದ್ದಾರೆ.