ತೆಂಡುಲ್ಕರ್ ಪೋಸ್ಟರ್ ಹರಿದು ಹಾಕಿದ್ರು ಬಾಲಿವುಡ್ ನಟಿ ಹುಮಾ ಖುರೇಷಿ, ಮುಂದೇನಾಯ್ತು?

huma sachin web
Published on

ನವದೆಹಲಿ: ಎರಡು ದಶಕಗಳ ಕಾಲ ಭಾರತೀಯ ಕ್ರಿಕೆಟ್‌ನಲ್ಲಿ ಆರಾಧ್ಯದೈವವಾಗಿ ಮೆರೆದಿದ್ದ ದಿಗ್ಗಜ ಬ್ಯಾಟ್ಸ್‌ಮನ್ ಸಚಿನ್ ತೆಂಡುಲ್ಕರ್ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದರು. ಅವರ ಅಭಿಮಾನಿಗಳು ವಿವಿಧ ರೀತಿಯಲ್ಲಿ ತಮ್ಮ ಪ್ರೀತಿಯನ್ನು ತೋರ್ಪಡಿಸುತ್ತಿದ್ದರು. ಅದರಂತೆ ಹೆಚ್ಚಿನ ಅಭಿಮಾನಿಗಳು ಸಚಿನ್ ತೆಂಡುಲ್ಕರ್ ಪೋಸ್ಟರ್‌ಗಳನ್ನು ಮನೆಯ ಗೋಡೆಗೆ ಅಂಟಿಸಿ ಖುಷಿಪಡುತ್ತಿದ್ದರು. ಬಾಲಿವುಡ್ ನಟಿ ಹುಮಾ ಖುರೇಷಿ ಅವರ ಸಹೋದರ ಹಾಗೂ ನಟ ಶಕೀಬ್ ಸಲೀಂ ರೂಂನಲ್ಲೂ ಕೂಡ ಇದೇ ರೀತಿ ಸಚಿನ್ ತೆಂಡುಲ್ಕರ್‌ರ ಪೋಸ್ಟರ್ ಇತ್ತು. ಆದರೆ ಒಂದು ದಿನ ಆ ಪೋಸ್ಟರ್‌ಅನ್ನು ಹುಮಾ ಖುರೇಷಿ ಹರಿದು ಹಾಕಿದ್ದರು! ಮುಂದೇನಾಯಿತು ಗೊತ್ತೇ?

ಟಿವಿ ಕಾರ್ಯಕ್ರಮವೊಂದರಲ್ಲಿ ತಮ್ಮ ಬಾಲ್ಯದ ದಿನಗಳನ್ನು ನೆನೆಸಿಕೊಂಡಿರುವ ಹುಮಾ ಖುರೇಷಿ, ‘ಸಹೋದರ ಶಕೀಬ್ ಸಲೀಂ, ಸಚಿನ್ ತೆಂಡುಲ್ಕರ್‌ರ ದೊಡ್ಡ ಅಭಿಮಾನಿಯಾಗಿದ್ದ. ಆತನ ರೂಂನಲ್ಲಿ ತೆಂಡುಲ್ಕರ್‌ರ ದೊಡ್ಡ ಪೋಸ್ಟರ್ ಒಂದಿತ್ತು. ಒಮ್ಮೆ ಶಕೀಬ್ ಜತೆಗೆ ದೊಡ್ಡ ಜಗಳ ಏರ್ಪಟ್ಟು ನಾನು ಆ ಪೋಸ್ಟರ್ ಹರಿದು ಹಾಕಿದ್ದೆ’ ಎಂದು ಹೇಳಿಕೊಂಡಿದ್ದಾರೆ. ಜತೆಗೆ ಸಚಿನ್ ಅಭಿಮಾನಿಗಳು ಕೋಪಗೊಳ್ಳಬಾರದು ಎಂಬ ಕಾರಣಕ್ಕೆ, ‘ಐ ಲವ್ ಸಚಿನ್’ ಎಂದೂ ಹೇಳಿಕೊಂಡಿದ್ದಾರೆ.

ಸಚಿನ್ ಪೋಸ್ಟರ್ ಹರಿದು ಹಾಕಿದ ಹುಮಾ ವಿರುದ್ಧ ತಾನು ಹೇಗೆ ಸೇಡು ತೀರಿಸಿಕೊಂಡೆ ಎಂದು ಅದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಕೀಬ್ ಸಲೀಂ ವಿವರಿಸಿದ್ದಾರೆ. ಹುಮಾ ಖುರೇಷಿ ಆಗ ಪಾಕಿಸ್ತಾನದ ಕ್ರಿಕೆಟಿಗ ಶಾಹಿದ್ ಅಫ್ರಿದಿ ಅವರ ದೊಡ್ಡ ಅಭಿಮಾನಿಯಾಗಿದ್ದರಂತೆ. ಹೀಗಾಗಿ ಅವರ ರೂಂನಲ್ಲಿ ಅಫ್ರಿದಿ ಅವರ 3-4 ಪೋಸ್ಟರ್‌ಗಳಿದ್ದವು. ನಾನು ಅವೆಲ್ಲವನ್ನೂ ಹರಿದುಹಾಕುವ ಮೂಲಕ ಹುಮಾ ವಿರುದ್ಧ ಸೇಡು ತೀರಿಸಿಕೊಂಡಿದ್ದೆ ಎಂದು ಶಕೀಬ್ ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net