

ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಆಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 17ನೇ ಆವೃತ್ತಿಯ 66ನೇ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗಲಿದ್ದು, ಈ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದೆ.
ಆಡಿರುವ 12 ಪಂದ್ಯಗಳ ಪೈಕಿ ಏಳರಲ್ಲಿ ಗೆದ್ದು, 5ರಲ್ಲಿ ಸೋಲು ಕಂಡಿರುವ ಎಸ್ಆರ್ಎಚ್ ಪ್ಲೇಆಫ್ ಹಾದಿಯನ್ನು ಸುಗಮವಾಗಿರಿಸಿಕೊಂಡಿದ್ದು, ಗುಜರಾತ್ ವಿರುದ್ಧದ ಪಂದ್ಯದಲ್ಲಿ ಜಯಿಸಿದರೆ ಪ್ಲೇಆಫ್ ಪ್ರವೇಶಿಸಿದ ಮೂರನೇ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಒಂದು ವೇಳೆ ಮಳೆಯಿಂದ ಪಂದ್ಯ ರದ್ದುಗೊಂಡರೆ ಎಸ್ಆರ್ಎಚ್ ಪ್ಲೇಆಫ್ ಹಾದಿ ಇನ್ನಷ್ಟು ಸುಗಮವಾಗಲಿದೆ.
ಆಗ ನಾಲ್ಕನೇ ಸ್ಥಾನಕ್ಕೆ ಆರ್ಸಿಬಿ ಹಾಗೂ ಸಿಎಸ್ಕೆ ನಡುವೆ ಪೈಪೋಟಿ ಏರ್ಪಡಲಿದ್ದು, ಅಂತಿಮವಾಗಿ ಯಾವ ತಂಡ ಪ್ಲೇಆಫ್ ಪ್ರವೇಶಿಸಲಿದೆ ಎಂದು ಕಾದು ನೋಡಬೇಕಿದೆ. ಏಕೆಂದರೆ ನಾಲ್ಕನೇ ಸ್ಥಾನಕ್ಕಾಗಿ ನಾಲ್ಕು ತಂಡಗಳ ನಡುವೆ ಪೈಫೋಟಿ ಏರ್ಪಟ್ಟಿದ್ದು, ಪ್ರಮುಖವಾಗಿ ಆರ್ಸಿಬಿ ಹಾಗೂ ಸಿಎಸ್ಕೆ ತಂಡಗಳ ಹೆಸರು ಕೇಳಿ ಬರುತ್ತಿದೆ. ಡೆಲ್ಲಿ ಹಾಗೂ ಲಖನೌ ಹೆಸರು ಕೂಡ ಚಾಲ್ತಿಯಲ್ಲಿದ್ದು, ಒಂದು ವೇಳೆ ಆರ್ಸಿಬಿ ಅಥವಾ ಸಿಎಸ್ಕೆ ಬದಲಾಗಿ ಲಖನೌ ಪ್ಲೇಆಫ್ ಪ್ರವೇಶಿಸಬೇಕಾದರೆ ಬೃಹತ್ ಅಂತರದಲ್ಲಿ ತನ್ನ ಮುಂದಿನ ಪಂದ್ಯವನ್ನು ಗೆಲ್ಲಬೇಕಿದೆ.
ಒಂದು ವೇಳೆ ಎಸ್ಆರ್ಎಚ್ ಹಾಗೂ ಗುಜರಾತ್ ನಡುವಿನ ಪಂದ್ಯ ರದ್ದುಗೊಂಡರೆ ಸನ್ರೈಸರ್ಸ್ ಒಂದು ಅಂಕ ಪಡೆಯುವ ಮೂಲಕ ಪ್ಲೇಆಫ್ ಪ್ರವೇಶಿಸಲಿದೆ. ಹೀಗಾಗಿ ಎಲ್ಲರ ಚಿತ್ತ ಈಗ ಆರ್ಸಿಬಿ ಹಾಗೂ ಸಿಎಸ್ಕೆ ನಡುವಿನ ಪಂದ್ಯದ ಮೇಲೆ ಬಿದ್ದಿದ್ದು, ಅಂತಿಮವಾಗಿ ಯಾವ ತಂಡ ವಿಜಯಶಾಲಿಯಾಗಲಿದೆ ಎಂದು ನೋಡಲು ಮೇ 18ರವರೆಗೆ ಕಾಯಬೇಕಿದೆ. ಇದರ ಹೊರತಾಗಿಯೂ ಲಖನೌ ಹಾಗೂ ಡೆಲ್ಲಿ ತಂಡಗಳ ಹೆಸರು ಕೇಳಿ ಬರುತ್ತಿದ್ದು, ಒಂದು ವೇಳೆ ಈ ಎರಡರಲ್ಲಿ ಒಂದು ತಂಡ ಪ್ಲೇಆಫ್ ಪ್ರವೇಶಿಸಬೇಕಿದ್ದರೆ ಲೆಕ್ಕಾಚಾರ ತಲೆಕೆಳಗಾಗಬೇಕಿದೆ.