ಮಹದೇವ್ ಬೆಟ್ಟಿಂಗ್ ಆ್ಯಪ್ ವಿವಾದ: ಪೊಲೀಸರಿಂದ ತಪ್ಪಿಸಿಕೊಳ್ಳಲು ಸಾಹಿಲ್ ಖಾನ್ 1800 ಕಿಮೀ ಪ್ರಯಾಣಿಸಿದ್ದ!

suhel
Published on

ಮುಂಬೈ: ಮಹಾದೇವ್ ಬೆಟ್ಟಿಂಗ್ ಆ್ಯಪ್‌ ಕೇಸ್​ನಲ್ಲಿ ಸಿಲುಕಿಕೊಂಡಿದ್ದರೂ ಪೊಲೀಸರ ಕೈಗೆ ಸಿಗದೆ ಪರಾರಿಯಾಗಿದ್ದ ನಟ ಮತ್ತು ಉದ್ಯಮಿ ಸಾಹಿಲ್ ಖಾನ್ ಏ.28 ರಂದು ಛತ್ತೀಸ್‌ಗಢದ ಜಗದಲ್‌ಪುರದಲ್ಲಿ ಬಂಧಿಸಿ ಮುಂಬೈನ ವಿಶೇಷ ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು. ನ್ಯಾಯಾಲಯ ಸಾಹಿಲ್ ಖಾನ್ ಗೆ ಮೇ 1 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ.

ಸಾಹಿಲ್ ತನ್ನ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೋರ್ಟ್​ ತಿರಸ್ಕರಿಸಿದ ನಂತರ ಪೊಲೀಸರಿಂದ ತಪ್ಪಿಸಿಕೊಳ್ಳಲು ನಾಲ್ಕು ದಿನಗಳಲ್ಲಿ 1,800 ಕಿ.ಮೀ ದೂರ ಪ್ರಯಾಣಿಸಿದ್ದಾನೆ. ಪೊಲೀಸರು 40 ಗಂಟೆ ಕಾಲ ತೀವ್ರ ಹುಡುಕಾಟ ನಡೆಸಿದ ನಂತರ ಸಿಕ್ಕಿಬಿದ್ದಿದ್ದಾನೆ.

ಸಾಹಿಲ್ ಇಷ್ಟು ದೂರ ಸಂಚರಿಸಿದ್ದು ಹೇಗೆ?: ಸಾಹಿಲ್ ಖಾನ್ ಏ.25 ರಂದು ತನ್ನ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯದಲ್ಲಿ ನಿರಾಕರಿಸಿದ ಕಾರಣ ರಸ್ತೆಯಲ್ಲಿ ಓಡಿಹೋಗಿದ್ದಾನೆ. ಅವನು ಮಹಾರಾಷ್ಟ್ರದಿಂದ ತಪ್ಪಿಸಿಕೊಂಡು ಗೋವಾದಲ್ಲಿ ತಂಗಿದ್ದಾನೆ. ನಂತರ ಕರ್ನಾಟಕದ ಹುಬ್ಬಳ್ಳಿ ಮಾರ್ಗವಾಗಿ ಹೈದರಾಬಾದ್‌ ಸೇರಿಕೊಂಡಿದ್ದಾನೆ.

ಪೊಲೀಸರಿಂದ ತಪ್ಪಿಸಿಕೊಳ್ಳಲು ಸಾಹಿಲ್ ಖಾನ್ ತನ್ನ ವೇಷ ಬದಲಿಸಿ ಸ್ಕಾರ್ಫ್‌ನ ಸಹಾಯದಿಂದ ತನ್ನ ಮುಖವನ್ನು ಮುಚ್ಚಿಕೊಂಡು ಓಡಾಡುತ್ತಿದ್ದ ಎನ್ನಲಾಗಿದೆ. ಆದರೆ ಹೈದರಾಬಾದ್‌ನಲ್ಲಿ ಸಾಹಿಲ್‌ ಅಡಗಿದ್ದ ಸ್ಥಳವನ್ನು ಪೊಲೀಸರು ಗುರುತಿಸುತ್ತಿದ್ದಂತೆ ಅವನು ಛತ್ತೀಸ್‌ಗಢಕ್ಕೆ ಓಡಿಹೋಗಿದ್ದಾನೆ. ಅಲ್ಲಿ ಅವನು ಜಗದಲ್‌ಪುರದ ಆರಾಧ್ಯ ಇಂಟರ್‌ನ್ಯಾಷನಲ್ ಹೋಟೆಲ್‌ನಲ್ಲಿ ತಂಗಿದ್ದು, ಹಿಂಬಾಲಿಸಿ ಬಂದ ಪೊಲೀಸರು ಬಂಧಿಸಿದ್ದಾರೆ.

72 ಗಂಟೆ ಚೇಸ್‌ನಲ್ಲಿ ಕಡೆಗೂ ಮುಂಬೈ ಪೊಲೀಸರು ಖಾನ್‌ ನನ್ನು ಬಂಧಿಸಿದ್ದಾರೆ. ಈ ಸಂದರ್ಭದಲ್ಲಿ ಆತನಿಂದ ಎರಡು ಮೊಬೈಲ್ ಫೋನ್‌ಗಳು, ನಗದು ವಶಪಡಿಸಿಕೊಳ್ಳಲಾಗಿದೆ.

ಮಹದೇವ್ ಆ್ಯಪ್‌ಗೆ ಲಿಂಕ್ ಮಾಡಲಾಗಿರುವ ಲಯನ್ ಬುಕ್ ಮತ್ತು ಲೋಟಸ್ 24/7 ನಂತಹ ಬೆಟ್ಟಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ಮುಂಚೂಣಿಗೆ ತರುವಲ್ಲಿ ಖಾನ್ ಭಾಗಿಯಾಗಿದ್ದಾನೆ. ಲೋಟಸ್ ಬುಕ್ ಅಪ್ಲಿಕೇಶನ್‌ ಜೊತೆ ಖಾನ್ ಹಣಕಾಸಿನ ಸಂಬಂಧ ಹೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಾದೇವ್ ಬೆಟ್ಟಿಂಗ್ ಆಪ್ ಎಂದರೇನು?: ಮಹಾದೇವ್ ಆನ್‌ಲೈನ್ ಬೆಟ್ಟಿಂಗ್ ಅಪ್ಲಿಕೇಶನ್ ಅನ್ನು ಛತ್ತೀಸ್‌ಗಢದ ಸೌರಭ್ ಚಂದ್ರಕರ್ ಮತ್ತು ದುಬೈನ ರವಿ ಉಪ್ಪಲ್ ಮಾಸ್ಟರ್ ಮೈಂಡ್ ಗಳು. ಐಪಿಎಲ್ ಕ್ರಿಕೆಟ್, ಫುಟ್‌ಬಾಲ್ ಮತ್ತು ಟೆನಿಸ್‌ನಂತಹ ಕ್ರೀಡೆಗಳಲ್ಲಿ ಬಳಕೆದಾರರನ್ನು ಜೂಜಿನತ್ತ ಸೆಳೆಯಲು ಅವರು ಸಾಮಾಜಿಕ ಮಾಧ್ಯಮವನ್ನು ಬಳಸುತ್ತಿದ್ದರು ಎಂದು ಆರೋಪಿಸಲಾಗಿದೆ. ಆ್ಯಪ್ ಪ್ರಚಾರ ಚಟುವಟಿಕೆಗಳಲ್ಲಿ ನಟರಾದ ರಣಬೀರ್ ಕಪೂರ್, ಶ್ರದ್ಧಾ ಕಪೂರ್ ಮತ್ತು ತಮನ್ನಾ ಭಾಟಿಯಾ ಅವರನ್ನು ತೊಡಗಿಸಿಕೊಂಡಿದೆ ಎಂದು ವರದಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net