PHOTOS| ಪಾಕ್​ ಹಿಂದುಗಳ ನೆರವಿಗೆ ನಿಂತ ಮಾಜಿ ಕ್ರಿಕೆಟರ್​ ಶಾಹೀದ್ ಅಫ್ರಿದಿ!

Afridi
Published on

ಇಸ್ಲಮಾಬಾದ್​: ಮಹಾಮಾರಿ ಕರೊನಾ ಸಂಕಷ್ಟ ಕಾಲದಲ್ಲಿ ಅನೇಕ ಸೆಲೆಬ್ರಿಟಿಗಳು ತಮ್ಮ ರಾಷ್ಟ್ರದ ಬೆನ್ನಿಗೆ ನಿಂತಿದ್ದು, ಇದರಲ್ಲಿ ಪಾಕಿಸ್ತಾನವೂ ಕೂಡ ಹೊರತಾಗಿಲ್ಲ. ವಿಶೇಷವಾಗಿ ಪಾಕ್​ ಕ್ರಿಕೆಟ್​ ತಂಡದ ಮಾಜಿ ನಾಯಕ ಶಾಹೀದ್​ ಅಫ್ರಿದಿ ಅವರು ಪಾಕ್​ನಲ್ಲಿರುವ ಹಿಂದುಗಳ ನೆರವಿಗೆ ಧಾವಿಸಿ, ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಿ ವಿಶೇಷವಾಗಿ ಗಮನ ಸೆಳೆದಿದ್ದಾರೆ.

ಪಾಕಿಸ್ತಾನದ ಗ್ರಾಮೀಣ ಭಾಗಗಳಿಗೆ ತೆರಳಿ ಶಾಹೀದ್​ ಅಫ್ರಿದಿ ಫೌಂಡೇಶನ್​ ವತಿಯಿಂದ ಅಗತ್ಯ ವಸ್ತುಗಳನ್ನು ವಿತರಣೆ ಮಾಡಿದ್ದಾರೆ. ಹಿಂದು ದೇವಸ್ಥಾನಕ್ಕೂ ಭೇಟಿ ನೀಡಿ ಸಹಾಯಾಸ್ತ ಚಾಚಿದ್ದಾರೆ. ಪಾಕ್​ನ ಬಹುತೇಕ ಭಾಗಗಳಲ್ಲಿ ಈ ಮಾನವೀಯ ಕಾರ್ಯವನ್ನು ಅಫ್ರಿದಿ ಮಾಡಿದ್ದು, ವೈಚಾರಿಕ ನೆಲದಲ್ಲಿ ಭಾರತ ಮತ್ತು ಪಾಕ್ ನಡುವೆ ಯಾವುದೇ ಭಿನ್ನಾಭಿಪ್ರಾಯವಿದ್ದರೂ ಅಫ್ರಿದಿ ಅವರ ಕಾರ್ಯವನ್ನು ಮನಸಾರೆ ಹೊಗಳುವುದರಲ್ಲಿ ತಪ್ಪಿಲ್ಲ.

ಈ ಬಗ್ಗೆ ಅಫ್ರಿದಿ, ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಮತ್ತು ಒಟ್ಟಿಗೆ ಗೆಲವು ಸಾಧಿಸುತ್ತೇವೆ ಎಂದು ಕರೊನಾ ಕುರಿತಾಗಿ ತಮ್ಮ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ. ಅದರೊಟ್ಟಿಗೆ ಶ್ರೀ ಲಕ್ಷ್ಮೀ ನಾರಾಯಣ ಮಂದಿರಕ್ಕೆ ತಮ್ಮ ಫೌಂಡೇಶನ್​ ಜತೆ ಭೇಟಿ ನೀಡಿರುವ ಫೋಟೋಗಳನ್ನು ಪೋಸ್ಟ್​ ಮಾಡಿದ್ದಾರೆ. ಈ ವೇಳೆ ಅಫ್ರಿದಿಗೆ ಪಾಕ್ ಸ್ಕ್ವಾಶ್​ ದಿಗ್ಗಜ ಆಟಗಾರ ಜಹಾಂಗೀರ್​ ಖಾನ್​​ ಕೂಡ ಕೈಜೋಡಿಸಿದ್ದಾರೆ. ​

ಇನ್ನು ಅಫ್ರಿದಿ ಕಾರ್ಯಕ್ಕೆ ನೆರವು ನೀಡಿರುವ ಟೀಮ್​ ಇಂಡಿಯಾ ಮಾಜಿ ಆಟಗಾರ ಯುವರಾಜ್​ ಸಿಂಗ್​ ಅಫ್ರಿದಿ ಫೌಂಡೇಶನ್​ಗೆ ದೇಣಿಗೆ ನೀಡಿದ್ದಾರೆ. ಈ ಹಿಂದೆ ಅಫ್ರಿದಿ ಕೂಡ ಪಂಜಾಬ್​ ಕ್ರಿಕೆಟ್​ ಅಸೋಸಿಯೇಶನ್​ಗೆ ಹಣದ ಸಹಾಯ ಮಾಡಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net