ಹೊಸ ಉಪನಾಯಕ ಯಾರು ಎಂಬ ಅಭಿಮಾನಿಗಳ ಪ್ರಶ್ನೆಗೆ ಚೆನ್ನೈ ಸೂಪರ್​ಕಿಂಗ್ಸ್​ ಉತ್ತರವೇನು ಗೊತ್ತೇ?

ipl csk
Published on

ಬೆಂಗಳೂರು: ಎಡಗೈ ಬ್ಯಾಟ್ಸ್‌ಮನ್ ಸುರೇಶ್ ರೈನಾ ದಿಢೀರ್ ಆಗಿ ಐಪಿಎಲ್ ಟೂರ್ನಿಯನ್ನು ತ್ಯಜಿಸಿ ದುಬೈನಿಂದ ತವರಿಗೆ ಮರಳಿರುವುದರಿಂದ ಚೆನ್ನೈ ಸೂಪರ್‌ಕಿಂಗ್ಸ್ ತಂಡಕ್ಕೆ ಈಗ ಉಪನಾಯಕ ಇಲ್ಲದಂತಾಗಿದೆ. ಹೀಗಾಗಿ ತಂಡದ ಹೊಸ ಉಪನಾಯಕ ಯಾರಾಗಲಿದ್ದಾರೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಎದ್ದಿದೆ. ಈ ಬಗ್ಗೆ ಟ್ವಿಟರ್‌ನಲ್ಲಿ ಅಭಿಮಾನಿಗಳು ಕೇಳಿರುವ ಪ್ರಶ್ನೆಗೆ ಸಿಎಸ್‌ಕೆ ವಿಶಿಷ್ಟವಾದ ಉತ್ತರ ನೀಡಿದೆ.

ಟ್ವಿಟರ್‌ನಲ್ಲಿ ಬುಧವಾರ ಅಭಿಮಾನಿಯೊಬ್ಬರು, ‘ಈಗ ನಮ್ಮ ತಂಡದ ಉಪನಾಯಕ ಯಾರು’ ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಪ್ರತಿಯಾಗಿ, ‘ವಿವೇಕವುಳ್ಳ ನಾಯಕನಿರುವಾಗ ಭಯವೇಕೆ?’ ಎಂದು ತಮಿಳಿನಲ್ಲಿ ಉತ್ತರಿಸಲಾಗಿದೆ. ಈ ಮೂಲಕ, ತಂಡದ ನಾಯಕರಾಗಿ ಎಂಎಸ್ ಧೋನಿ ಇರುವಾಗ ಭಯವೇಕೆ ಎಂದು ಅಭಿಮಾನಿಗಳನ್ನು ಸಮಾಧಾನ ಪಡಿಸಲಾಗಿದೆ.

ತಂಡದ ಉಪನಾಯಕರಾಗಿ ನಾಯಕ ಎಂಎಸ್ ಧೋನಿಗೆ ಸಮರ್ಥ ಬೆಂಬಲ ನೀಡುತ್ತ ಬಂದಿರುವ ಸುರೇಶ್ ರೈನಾ ಈ ಬಾರಿ ವೈಯಕ್ತಿಕ ಕಾರಣ ನೀಡಿ ಇಡೀ ಟೂರ್ನಿಯನ್ನೇ ತ್ಯಜಿಸಿದ್ದಾರೆ. ಈ ಹಿಂದಿನ 12 ಆವೃತ್ತಿಗಳಲ್ಲೂ ಕನಿಷ್ಠ 300 ರನ್ ಪೇರಿಸಿದ ಏಕೈಕ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆ ಸುರೇಶ್ ರೈನಾ ಅವರದಾಗಿದೆ.

ತಂಡದ ಇಬ್ಬರು ಆಟಗಾರರ ಸಹಿತ 13 ಸದಸ್ಯರಿಗೆ ಕರೊನಾ ಪಾಸಿಟಿವ್ ಬಂದಿರುವ ಕಾರಣದಿಂದ ಸಿಎಸ್‌ಕೆ ತಂಡದ ಅಭ್ಯಾಸ ಇನ್ನೂ ಆರಂಭಗೊಂಡಿಲ್ಲ. ಗುರುವಾರ ನಡೆಯಲಿರುವ 2ನೇ ಪರೀಕ್ಷೆಯಲ್ಲೂ ತಂಡದ 13 ಸದಸ್ಯರ ಹೊರತಾಗಿ ಇತರರ ವರದಿ ನೆಗೆಟಿವ್ ಬಂದರೆ ಶುಕ್ರವಾರದಿಂದ ಅಭ್ಯಾಸ ಆರಂಭಗೊಳ್ಳಲಿದೆ. ಸಿಎಸ್‌ಕೆ ಹೊರತಾಗಿ ಟೂರ್ನಿಯಲ್ಲಿ ಆಡಲಿರುವ ಇತರೆಲ್ಲ ತಂಡಗಳು ಈಗಾಗಲೆ ಕಠಿಣ ಅಭ್ಯಾಸದಲ್ಲಿ ತೊಡಗಿಕೊಂಡಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net