ಟಿ20 ವಿಶ್ವಕಪ್​ನಲ್ಲಿ ಇಂದು ಹಾಲಿ ಚಾಂಪಿಯನ್​ ಇಂಗ್ಲೆಂಡ್​ ಕಣಕ್ಕೆ

web eng vs sco
Published on

ಪ್ರಾವಿಡೆನ್ಸ್​/ಬ್ರಿಜ್​ಟೌನ್​: ಹಾಲಿ ಚಾಂಪಿಯನ್​ ಇಂಗ್ಲೆಂಡ್​ ತಂಡ 9ನೇ ಆವೃತ್ತಿಯ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಮಂಗಳವಾರ ಅಭಿಯಾನ ಆರಂಭಿಸಲಿದ್ದು, ಸ್ಕಾಟ್ಲೆಂಡ್​ ವಿರುದ್ಧ ಮೊದಲ ಪಂದ್ಯ ಆಡಲಿದೆ.

ಇಂಗ್ಲೆಂಡ್​ ತಂಡ ಟೂರ್ನಿಗೆ ಪೂರ್ವಭಾವಿಯಾಗಿ ಪಾಕಿಸ್ತಾನ ವಿರುದ್ಧ ಟಿ20 ಸರಣಿ ಆಡಿತ್ತು ಮತ್ತು ಐಪಿಎಲ್​ನಿಂದಲೂ ತನ್ನ ಆಟಗಾರರನ್ನು ಬೇಗನೆ ಕರೆಸಿಕೊಂಡಿತ್ತು. ಆದರೆ ಮಳೆ ಅಡಚಣೆಯಿಂದಾಗಿ ಪಾಕ್​ ವಿರುದ್ಧದ ಸರಣಿಯಲ್ಲಿ ಆಂಗ್ಲರಿಗೆ ಸಮರ್ಥ ಅಭ್ಯಾಸ ನಡೆಸಲು ಸಾಧ್ಯವಾಗಲಿಲ್ಲ. ಇದರ ಹೊರತಾಗಿಯೂ ಇಂಗ್ಲೆಂಡ್​ ತಂಡ ಟೂರ್ನಿಯಲ್ಲಿ ಈ ಸಲವೂ ಫೇವರಿಟ್​ ತಂಡಗಳ ಪೈಕಿ ಒಂದಾಗಿ ಕಣಕ್ಕಿಳಿಯಲಿದೆ.

ಐಪಿಎಲ್​ನಲ್ಲಿ ಮಿಂಚಿದ ಫಿಲ್​ ಸಾಲ್ಟ್​ ಭರ್ಜರಿ ಫಾರ್ಮ್​ ಜತೆಗೆ ವೇಗಿ ಜೋಫ್ರಾ ಆರ್ಚರ್​ ಪುನರಾಗಮನ ಆಂಗ್ಲರ ಬಲ ಹೆಚ್ಚಿಸಿದೆ. ಜೋಸ್​ ಬಟ್ಲರ್​ ಬಳಗ ಚುಟುಕು ಕ್ರಿಕೆಟ್​ ಮಾದರಿಯಲ್ಲಿ ಸ್ಕಾಟ್ಲೆಂಡ್​ ಎದುರು ಮೊದಲ ಬಾರಿ ಆಡಲಿದೆ.

ಓಮನ್​-ನಮೀಬಿಯಾ ನಡುವೆ ಅಲ್ಪ ಮೊತ್ತದ ಟೈ ಫಲಿತಾಂಶ ಕಂಡ ಕೆನ್ಸಿಂಗ್​ಟನ್​ ಓವಲ್​ನಲ್ಲೇ ಬಿ ಗುಂಪಿನ ಈ ಪಂದ್ಯವೂ ನಡೆಯಲಿದ್ದು, ಮತ್ತೆ ಬೌಲರ್​ಗಳೇ ಮೇಲುಗೈ ಸಾಧಿಸುವ ನಿರೀಕ್ಷೆ ಇದೆ. ಆಸ್ಟ್ರೆಲಿಯಾ ಬಿ ಗುಂಪಿನ ಮತ್ತೊಂದು ತಂಡವಾಗಿದೆ.

ವಿಶ್ವಾಸದಲ್ಲಿ ಜೋಸ್​ ಬಟ್ಲರ್​ ಬಳಗ

ಇಂಗ್ಲೆಂಡ್​ ತಂಡ 2022ರಲ್ಲಿ ಜೋಸ್​ ಬಟ್ಲರ್​ ಸಾರಥ್ಯದಲ್ಲೇ ಮೆಲ್ಬೋರ್ನ್​ನಲ್ಲಿ ಪಾಕಿಸ್ತಾನವನ್ನು ಮಣಿಸಿ 2ನೇ ಬಾರಿ ಟಿ20 ವಿಶ್ವಕಪ್​ ಎತ್ತಿ ಹಿಡಿದಿತ್ತು. ಅದಕ್ಕೆ ಮುನ್ನ 2010ರಲ್ಲಿ ಇಂಗ್ಲೆಂಡ್​ ತಂಡ ಆಸ್ಟ್ರೆಲಿಯಾವನ್ನು ಸೋಲಿಸಿ ಕೆನ್ಸಿಂಗ್​ಟನ್​ ಓವಲ್​ನಲ್ಲೇ ಮೊದಲ ಬಾರಿ ಟಿ20 ವಿಶ್ವಕಪ್​ ಜಯಿಸಿತ್ತು. ಅದೇ ನೆಲದಲ್ಲಿ ಈ ಬಾರಿ ಮತ್ತೆ ಅಭಿಯಾನ ಆರಂಭಿಸಲಿರುವುದರಿಂದ ಇಂಗ್ಲೆಂಡ್​, ಸತತ 2 ಬಾರಿ ಟಿ20 ವಿಶ್ವಕಪ್​ ಗೆದ್ದ ಮೊದಲ ತಂಡವೆನಿಸುವ ಸ್ಫೂರ್ತಿ ಪಡೆದುಕೊಂಡಿದೆ. ಕಳೆದ 14 ವರ್ಷಗಳಲ್ಲಿ ಇಂಗ್ಲೆಂಡ್​ ತಂಡ ಸೀಮಿತ ಓವರ್​ ಕ್ರಿಕೆಟ್​ನಲ್ಲಿ ದೊಡ್ಡ ಯಶಸ್ಸು ಸಾಧಿಸಿದ್ದು, 2019ರಲ್ಲಿ ಏಕದಿನ ವಿಶ್ವಕಪ್​ ಕೂಡ ಗೆದ್ದುಕೊಂಡಿತ್ತು.

ಆ್ಘನ್​ ಇಂದು ಕಣಕ್ಕೆ

ಕಳೆದ ಏಕದಿನ ವಿಶ್ವಕಪ್​ನಲ್ಲಿ ಇಂಗ್ಲೆಂಡ್​, ದ. ಆಫ್ರಿಕಾ, ಪಾಕಿಸ್ತಾನ ತಂಡಗಳಿಗೆ ಆಘಾತ ನೀಡಿ ನಾಕೌಟ್​ ಹಂತಕ್ಕೇರಲು ನಿಕಟ ಸ್ಪರ್ಧೆ ನಡೆಸಿದ್ದ ಅಫ್ಘಾನಿಸ್ತಾನ ತಂಡ ಇದೀಗ ಟಿ20 ವಿಶ್ವಕಪ್​ನಲ್ಲಿ ಅದನ್ನು ಸಾಧಿಸುವ ಹುರುಪಿನಲ್ಲಿದೆ. ಟಿ20 ವಿಶ್ವಕಪ್​ಗೆ ಪದಾರ್ಪಣೆ ಮಾಡುತ್ತಿರುವ ಆಫ್ರಿಕಾದ ಉಗಾಂಡ ತಂಡದ ವಿರುದ್ಧ ರಶೀದ್​ ಖಾನ್​ ಬಳಗ ಮಂಗಳವಾರ (ಸ್ಥಳಿಯ ಕಾಲಮಾನ ಸೋಮವಾರ ರಾತ್ರಿ) ಸಿ ಗುಂಪಿನಲ್ಲಿ ಅಭಿಯಾನ ಆರಂಭಿಸಲಿದೆ.

ಇಂದಿನ ಪಂದ್ಯಗಳು:

ಅಫ್ಘಾನಿಸ್ತಾನ-ಉಗಾಂಡ

ಗುಂಪು: ಸಿ

ಎಲ್ಲಿ: ಪ್ರಾವಿಡೆನ್ಸ್​

ಆರಂಭ: ಬೆಳಗ್ಗೆ 6.00

ಇಂಗ್ಲೆಂಡ್​-ಸ್ಕಾಟ್ಲೆಂಡ್​

ಗುಂಪು: ಬಿ

ಎಲ್ಲಿ: ಬ್ರಿಜ್​ಟೌನ್​

ಆರಂಭ: ರಾತ್ರಿ 8.00

ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​

ಡಿಸ್ನಿ-ಹಾಟ್​ಸ್ಟಾರ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net