

ಬೆಂಗಳೂರು: ಕರೊನಾ ಸೋಂಕಿನಿಂದ ಬಳಲುತ್ತಿದ್ದ ಭಾರತ ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್ ಸಹಿತ ಎಲ್ಲ 6 ಆಟಗಾರರು ಗುಣಮುಖ ಹೊಂದಿದ್ದು, ಸೋಮವಾರ ಸಂಜೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಮನ್‌ಪ್ರೀತ್ ಜತೆಗೆ ಡಿೆಂಡರ್ ಸುರೇಂದರ್ ಕುಮಾರ್, ಜಸ್ಕರಣ್ ಸಿಂಗ್, ವರುಣ್ ಕುಮಾರ್, ಗೋಲ್ ಕೀಪರ್ ಕೃಷ್ಣ ಬಹದೂರ್ ಪಾಠಕ್ ಮತ್ತು ಸ್ಟ್ರೈಕರ್ ಮಂದೀಪ್ ಸಿಂಗ್ 2 ಬಾರಿ ನೆಗೆಟಿವ್ ವರದಿ ಪಡೆದಿದ್ದಾರೆ. ಈ ಮುನ್ನ ಆಗಸ್ಟ್ 10 ಮತ್ತು 12ರ ಪರೀಕ್ಷೆಯಲ್ಲಿ ಅವರಿಗೆ ಪಾಸಿಟಿವ್ ವರದಿ ಬಂದಿತ್ತು.
ಎಲ್ಲರೂ ಲಕ್ಷಣರಹಿತರಾಗಿದ್ದರೂ, ಮಂದೀಪ್ ಸಿಂಗ್ ಅವರನ್ನು ಮೊದಲಿಗೆ ರಕ್ತ ಆಮ್ಲಜನಕ ಮಟ್ಟ ಕುಸಿತದಿಂದಾಗಿ ಸಾಯ್ ಕೇಂದ್ರದಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಮುನ್ನೆಚ್ಚರಿಕೆಯ ಕ್ರಮವಾಗಿ ಇತರ ಐವರು ಆಟಗಾರರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಭಾರತ ಪುರುಷರ ಮತ್ತು ಮಹಿಳಾ ಹಾಕಿ ತಂಡಗಳ ತರಬೇತಿ ಶಿಬಿರ ಬೆಂಗಳೂರಿನ ಸಾಯ್ ಕೇಂದ್ರದಲ್ಲಿ ನಿಗದಿಯಂತೆಯೇ ಬುಧವಾರ ಆರಂಭಗೊಳ್ಳಲಿದೆ. ಪುರುಷರ ತಂಡದ 33 ಮತ್ತು ಮಹಿಳಾ ತಂಡದ 24 ಸದಸ್ಯರು ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಸೆಪ್ಟೆಂಬರ್ 30ರವರೆಗೂ ಶಿಬಿರ ಮುಂದುವರಿಯುವ ನಿರೀಕ್ಷೆ ಇದೆ.
ಕರ್ನಾಟಕ ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ಕರೊನಾದಿಂದ ಚೇತರಿಸಿಕೊಂಡಿರುವ 6 ಆಟಗಾರರು ಇನ್ನೂ ಸಾಯ್ ಆವರಣದಲ್ಲಿ ವಾರದ 7-10 ದಿನಗಳ ಕಾಲ ಸ್ವಯಂ-ಐಸೋಲೇಷನ್‌ನಲ್ಲಿರಲಿದ್ದಾರೆ ಎಂದು ಸಾಯ್ ಮೂಲಗಳು ತಿಳಿಸಿವೆ.