ಧೋನಿ ನಿವೃತ್ತಿ ಬೆನ್ನಲ್ಲೇ ಪಾಕ್ ಅಭಿಮಾನಿಯೂ ಕ್ರಿಕೆಟ್‌ನಿಂದ ದೂರ!

dhoni fan
Published on

ನವದೆಹಲಿ: ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಪ್ರಕಟಿಸಿರುವುದರಿಂದ ಅವರ ಅಭಿಮಾನಿಗಳು ಅಪಾರ ಬೇಸರಗೊಂಡಿದ್ದಾರೆ. ಪಾಕಿಸ್ತಾನದ ಅವರ ಅಭಿಮಾನಿಯಂತೂ ಕ್ರಿಕೆಟ್‌ನಿಂದಲೇ ದೂರ ಸರಿಯಲು ನಿರ್ಧರಿಸಿದ್ದಾರೆ.

ಕರಾಚಿ ಮೂಲದ ಮೊಹಮದ್ ಬಶೀರ್ ಬೊಜೈ ಎಂಬವರು ‘ಚಾಚಾ ಚಿಕಾಗೋ’ ಎಂದೇ ಕ್ರಿಕೆಟ್ ವಲಯದಲ್ಲಿ ಗುರುತಿಸಿಕೊಂಡಿರುವ ಕಟ್ಟಾ ಅಭಿಮಾನಿ. ಐಸಿಸಿ ಟೂರ್ನಿಗಳಲ್ಲಿ ಭಾರತ-ಪಾಕಿಸ್ತಾನ ನಡುವಿನ ಪಂದ್ಯದ ಸಮಯದಲ್ಲಂತೂ ಪ್ರೇಕ್ಷಕರ ಗ್ಯಾಲರಿಯಲ್ಲಿ ಇವರ ಹಾಜರಿ ಶತಸ್ಸಿದ್ಧ. ವಿಶ್ವದೆಲ್ಲೆಡೆ ಎಲ್ಲೇ ಭಾರತ-ಪಾಕಿಸ್ತಾನ ಪಂದ್ಯ ನಡೆದರೂ ಇವರು ಹಾಜರಾಗುತ್ತಾರೆ. ಆದರೆ ಪಂದ್ಯದ ವೇಳೆ ಧೋನಿಯನ್ನು ಬೆಂಬಲಿಸಿದ್ದಕ್ಕಾಗಿ ಕೆಲ ಸಂದರ್ಭಗಳಲ್ಲಿ ಪಾಕ್ ಅಭಿಮಾನಿಗಳಿಂದ ನಿಂದನೆಗೂ ಒಳಗಾಗಿದ್ದಾರೆ.

‘ಧೋನಿ ನಿವೃತ್ತಿಯಾಗಿದ್ದಾರೆ. ಅದರಂತೆ ನಾನು ಕೂಡ. ಧೋನಿ ಕ್ರಿಕೆಟ್ ಆಡದ ಕಾರಣ ಇನ್ನೂ ನಾನೂ ಪಂದ್ಯಗಳನ್ನು ನೋಡುವ ಸಲುವಾಗಿ ಎಲ್ಲಿಗೂ ಪ್ರಯಾಣಿಸಲಾರೆ. ನಾನು ಧೋನಿ ಅವರನ್ನು ಇಷ್ಟ ಪಟ್ಟಿರುವೆ. ಅದಕ್ಕೆ ಪ್ರತಿಯಾಗಿ ಅವರೂ ನನಗೆ ಪ್ರೀತಿ ನೀಡಿದ್ದಾರೆ’ ಎಂದು ಬಶೀರ್ ಹೇಳಿದದ್‌ಆರೆ. ಅವರು ಚಿಕಾಗೋದಲ್ಲಿ ರೆಸ್ಟೋರೆಂಟ್ ಒಂದನ್ನು ಹೊಂದಿದ್ದಾರೆ.

‘ಎಲ್ಲ ಶ್ರೇಷ್ಠ ಆಟಗಾರರೂ ಒಂದಲ್ಲ ಒಂದು ದಿನ ನಿವೃತ್ತಿಯಾಗಲೇಬೇಕು. ಆದರೆ ಧೋನಿ ಅವರ ನಿವೃತ್ತಿ ನನಗೆ ತೀವ್ರ ಬೇಸರ ತಂದಿದೆ. ಅವರು ಸಾಕಷ್ಟು ಸ್ಮರಣೀಯ ನೆನಪುಗಳನ್ನು ನೀಡಿದ್ದಾರೆ. ಅವರಿಗೆ ಭರ್ಜರಿ ಬೀಳ್ಕೊಡುಗೆ ಸಿಗಬೇಕಾಗಿತ್ತು’ ಎಂದು 65 ವರ್ಷದ ಮೊಹಮದ್ ಬಶೀರ್ ಬೊಜೈ ಹೇಳಿದ್ದಾರೆ.

2011ರ ವಿಶ್ವಕಪ್‌ನಲ್ಲಿ ನಡೆದ ಭಾರತ-ಪಾಕಿಸ್ತಾನ ನಡುವಿನ ಸೆಮಿಫೈನಲ್ ಪಂದ್ಯದ ಬಳಿಕ ಧೋನಿ-ಬಶೀರ್ ನಡುವೆ ಬಾಂಧವ್ಯ ಬೆಳೆದಿತ್ತು. ಮೊಹಾಲಿಯಲ್ಲಿ ನಡೆದ ಪಂದ್ಯದ ಟಿಕೆಟ್ ಸಿಗದೆ ಬಶೀರ್ ಪರದಾಡುತ್ತಿದ್ದಾಗ, ಧೋನಿ ಟಿಕೆಟ್ ವ್ಯವಸ್ಥೆ ಮಾಡಿಕೊಟ್ಟಿದ್ದರು. 2018ರ ಏಷ್ಯಾಕಪ್ ವೇಳೆ ಬಶೀರ್ ಅವರನ್ನು ತಮ್ಮ ಹೋಟೆಲ್ ರೂಂಗೆ ಕರೆಸಿಕೊಂಡಿದ್ದ ಧೋನಿ, ತಮ್ಮ ಜೆರ್ಸಿಯನ್ನು ಉಡುಗೊರೆ ನೀಡಿದ್ದರು.

ಕರೊನಾ ನಂತರ ಸಹಜಸ್ಥಿತಿ ಮರಳಿದಾಗ ರಾಂಚಿಗೆ ತೆರಳಿ ಧೋನಿ ಅವರನ್ನು ಭೇಟಿಯಾಗಲು ಬಯಸಿರುವ ಬಶೀರ್, ಐಪಿಎಲ್‌ನಲ್ಲಿ ಧೋನಿ ಆಟವನ್ನು ನೋಡಲು ಯುಎಇಗೆ ತೆರಳುವ ಬಗ್ಗೆ ಯೋಚಿಸಿದ್ದರೂ, ಹೃದಯದ ಕಾಯಿಲೆಯಿಂದಾಗಿ ಇದು ಸಾಧ್ಯವಾಗುತ್ತಿಲ್ಲ. ಅವರ ಪತ್ನಿ ಭಾರತದ ಹೈದರಾಬಾದ್‌ನವರಾಗಿದ್ದಾರೆ.

2015ರ ಏಕದಿನ ವಿಶ್ವಕಪ್‌ನಲ್ಲಿ ಸಿಡ್ನಿಯ ಬಿಸಿಲಿನಲ್ಲಿ ಪಂದ್ಯ ವೀಕ್ಷಿಸುತ್ತಿದ್ದಾಗ ಸುರೇಶ್ ರೈನಾ ಅವರು ಬಶೀರ್‌ಗೆ ಸನ್‌ಗ್ಲಾಸ್ ತಂದುಕೊಟ್ಟಿದ್ದರಂತೆ. ಯಾಕೆಂದು ಕೇಳಿದರೆ, ಧೋನಿ ಕೊಟ್ಟಿದ್ದು ಎಂದಿದ್ದರಂತೆ. ಆ ಕ್ಷಣವನ್ನು ಎಂದೂ ಮರೆಯಲಾರೆ ಎಂದು ಬಶೀರ್ ನೆನಪಿಸಿಕೊಳ್ಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net