

ಬೆಂಗಳೂರು: ಧೋನಿ ನಿವೃತ್ತಿ ಪೋಸ್ಟ್ನಲ್ಲಿ 4 ನಿಮಿಷ, 7 ಸೆಕೆಂಡ್ಗಳ ವಿಡಿಯೋದಲ್ಲಿ 15 ವರ್ಷಗಳ ವೃತ್ತಿಜೀವನದ ವಿವಿಧ ಸಿಹಿ-ಕಹಿ ಕ್ಷಣಗಳ ಚಿತ್ರಗಳನ್ನು ಪ್ರಕಟಿಸಿದ್ದಾರೆ. ಅದರ ಹಿನ್ನೆಲೆಯಲ್ಲಿ ದಿಗ್ಗಜ ಗಾಯಕ ಮುಕೇಶ್ ಅವರ ‘ಮೈ ಪಲ್ ದೋ ಪಲ್ ಕಾ ಶಾಯರ್ ಹುಂ’ ಹಾಡು ಇದೆ. ಇದು ಧೋನಿ ಅವರ ನೆಚ್ಚಿನ ಹಾಡು ಮಾತ್ರವಲ್ಲ, ಅವರು ಇದನ್ನು ಆಗಾಗ ಹಾಡುತ್ತಿರುತ್ತಾರೆ.
‘ನಾನು ಕೇವಲ ಕ್ಷಣಕಾಲದ ವ್ಯಕ್ತಿ. ಈ ಕೆಲ ಕ್ಷಣಗಳು ನಾನು ಯಾರು ಎಂಬುದನ್ನು ನಿರೂಪಿಸುತ್ತವೆ. ಇವು ನನ್ನ ಇಡೀ ಜೀವನದ ಕಥೆಯನ್ನು ಹೇಳುತ್ತವೆ. ನನ್ನಂಥವರು ಈ ಹಿಂದೆಯೂ ಇಲ್ಲಿದ್ದರು. ನನ್ನ ನಂತರವೂ ಹಲವರು ಬರಲಿದ್ದಾರೆ. ಅವರು ನನಗಿಂತಲೂ ಉತ್ತಮವಾಗಿರಬಹುದು’ ಎಂಬುದು ಈ ಹಾಡಿನ ತಾತ್ಪರ್ಯ.
ಧೋನಿ ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಈ ಹಾಡನ್ನು ಹಾಡಿರುವ ವಿಡಿಯೋ ಕೂಡ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 1976ರಲ್ಲಿ ತೆರೆಕಂಡ ಅಮಿತಾಭ್ ಬಚ್ಚನ್, ಶಶಿ ಕಪೂರ್, ರಿಷಿ ಕಪೂರ್ ಅವರ ನಟನೆಯ ‘ಕಭೀ, ಕಭೀ’ ಸಿನಿಮಾದ ಜನಪ್ರಿಯ ಹಾಡು ಇದಾಗಿದ್ದು, ಇದರ ಸಾಹಿತಿ ಸಾಹಿರ್ ಲುಧಿಯನ್ವಿ. ಧೋನಿ ವಿದಾಯ ಗೀತೆಯಾಗಿ ಈ ಹಾಡು ಈಗ ಮತ್ತೊಮ್ಮೆ ಭಾರಿ ಜನಪ್ರಿಯತೆ ಪಡೆದುಕೊಂಡಿದೆ.