ಬೆಂಗಳೂರಲ್ಲೇ ಇದ್ದರೂ ಮೂರೂವರೆ ತಿಂಗಳ ಬಳಿಕ ಮಗಳ ನೋಡಿದ ಎಸ್‌ವಿ ಸುನೀಲ್

SUNIL SV FOR WEB-1
Published on

ಬೆಂಗಳೂರು: ರಾಷ್ಟ್ರೀಯ ಹಾಕಿ ಶಿಬಿರ ನಡೆಯುತ್ತಿದ್ದ ವೇಳೆಯಲ್ಲೇ ಲಾಕ್‌ಡೌನ್ ಘೋಷಣೆಯಿಂದಾಗಿ ಬೆಂಗಳೂರು ಕ್ರೀಡಾ ಪ್ರಾಧಿಕಾರದಲ್ಲೇ (ಸಾಯ್) ಕಳೆದ ಮೂರು ತಿಂಗಳಿಂದ ಲಾಕ್ ಆಗಿದ್ದ ಆಟಗಾರರು ಇದೀಗ ತವರಿನತ್ತ ತೆರಳಿದ್ದಾರೆ. ಹಾಕಿ ಇಂಡಿಯಾ ಆಟಗಾರರಿಗೆ ಒಂದು ತಿಂಗಳ ವಿಶ್ರಾಂತಿ ನೀಡಿದೆ. ಬೆಂಗಳೂರಿನಲ್ಲೇ ಇದ್ದರೂ ಕುಟುಂಬದಿಂದ ದೂರ ಉಳಿದಿದ್ದ ಎಸ್‌ವಿ ಸುನೀಲ್, ಮೊನ್ನೆಯಷ್ಟೇ ಕುಟುಂಬ ಸೇರಿಕೊಂಡಿದ್ದು, ಮುದ್ದಾದ ಮಗಳೊಂದಿಗೆ ಆಟವಾಡುತ್ತಿರುವ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದಾರೆ.

ಒಲಿಂಪಿಕ್ಸ್ ಸಿದ್ಧತೆಗಾಗಿ ನಡೆಯುತ್ತಿದ್ದ ರಾಷ್ಟ್ರೀಯ ಶಿಬಿರದಲ್ಲಿದ್ದ ವೇಳೆ ಕರೊನಾ ವೈರಸ್ ಭೀತಿಯಿಂದಾಗಿ ಲಾಕ್‌ಡೌನ್ ಘೋಷಿಸಲಾಯಿತು. ಕೊಡಗಿನ ಎಸ್‌ವಿ ಸುನೀಲ್ ರಾಷ್ಟ್ರೀಯ ತಂಡದಲ್ಲಿರುವ ಏಕೈಕ ಕನ್ನಡಿಗ. ಬೆಂಗಳೂರಿನ ಸಾಯ್ ಕೇಂದ್ರದಲ್ಲೇ ಇದ್ದರೂ ಕಲ್ಯಾಣನಗರದಲ್ಲಿರುವ ತಮ್ಮ ಮನೆಗೆ ಹೋಗಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಸುನೀಲ್ ಸಿಲುಕಿದ್ದರು. ಹಾಕಿ ಇಂಡಿಯಾದ ನಿರ್ದೇಶದಂತೆ ಆಟಗಾರರು ಸಾಯ್ ಕೇಂದ್ರದಲ್ಲೇ ಲಾಕ್ ಆದರು. ಮನೆಯವರ ಆರೋಗ್ಯದ ದೃಷ್ಟಿಯಿಂದ ಸುನೀಲ್ ಕೂಡ ಪತ್ನಿ ನಿಶಾ ಹಾಗೂ ಒಂದು ವರ್ಷದ ಕಂದಮ್ಮ ಶಾನ್ವಿತಾರಿಂದ ದೂರ ಉಳಿಯಬೇಕಾಯಿತು. ಇದೀಗ ಸುನೀಲ್ಮ ಗಳೊಂದಿಗೆ ಸಂಪೂರ್ಣ ರಿಲ್ಯಾಕ್ಸ್ ಮೂಡ್‌ನಲ್ಲಿದ್ದಾರೆ. ಸಾಯ್ ಕೇಂದ್ರಕ್ಕೆ ಕೇವಲ 20 ಕಿಲೋಮೀಟರ್ ದೂರದಲ್ಲೆ ಕಲ್ಯಾಣನಗರವಿದೆ.

31 ವರ್ಷದ ಸುನೀಲ್, ಕಳೆದ 13 ವರ್ಷಗಳಿಂದ ರಾಷ್ಟ್ರೀಯ ತಂಡದ ಭಾಗವಾಗಿದ್ದಾರೆ. ಇದುವರೆಗೂ 250 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದು, 59 ಗೋಲು ಸಿಡಿಸಿದ್ದಾರೆ. 2014ರ ಇಂಚೋನ್ ಏಷ್ಯಾಡ್‌ನಲ್ಲಿ ಸ್ವರ್ಣ ಹಾಗೂ 2018ರ ಜಕಾರ್ತ ಏಷ್ಯಾಡ್‌ನಲ್ಲಿ ಬೆಳ್ಳಿ ಪದಕ ಜಯಿಸಿದ ಭಾರತ ತಂಡದ ಸದಸ್ಯರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net