ಹಾಕಿ ಇಂಡಿಯಾ ಲೀಗ್​ಗೆ ಮರುಜೀವ; 7 ವರ್ಷಗಳ ಬಳಿಕ ಮತ್ತೆ ಬರಲಿದೆ ಐಪಿಎಲ್​ ಮಾದರಿಯ ಹಾಕಿ ಟೂರ್ನಿ!

web hil
Published on

ನವದೆಹಲಿ: ಐಪಿಎಲ್​ ಮಾದರಿಯ ಹಾಕಿ ಟೂರ್ನಿ "ಹಾಕಿ ಇಂಡಿಯಾ ಲೀಗ್​'ಗೆ (ಎಚ್​ಐಎಲ್​) 7 ವರ್ಷಗಳ ಬಳಿಕ ಮರುಜೀವ ನೀಡಲು ಹಾಕಿ ಇಂಡಿಯಾ ಮುಂದಾಗಿದೆ. ಡಿಸೆಂಬರ್​ 27 ಅಥವಾ 28ರಿಂದ ಫೆಬ್ರವರಿ 1ರವರೆಗೆ ಟೂರ್ನಿ ಆಯೋಜನೆಗೊಳ್ಳಲಿದೆ ಎಂದು ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್​ ರ್ಟಿಕಿ ಖಚಿತಪಡಿಸಿದ್ದಾರೆ.

ಹಾಕಿ ಇಂಡಿಯಾ ಲೀಗ್​ 2013ರಲ್ಲಿ ಆರಂಭಗೊಂಡಿತ್ತು ಮತ್ತು 2017ರಲ್ಲಿ ಕೊನೇ ಆವೃತ್ತಿ ನಡೆದಿದೆ. ಇದೀಗ ಮತ್ತೆ ಹಾಕಿ ಇಂಡಿಯಾ ಲೀಗ್​ ಆಯೋಜಿಸುವ ಹಾಕಿ ಇಂಡಿಯಾದ ಯೋಜನೆಗೆ ಅಂತಾರಾಷ್ಟ್ರೀಯ ಹಾಕಿ ಒಕ್ಕೂಟವೂ (ಎಫ್​ಐಎಚ್​) ಹಸಿರು ನಿಶಾನೆ ತೋರಿಸಿದೆ.

ಈ ಬಾರಿ ಹಾಕಿ ಇಂಡಿಯಾ ಲೀಗ್​ನಲ್ಲಿ ಪುರುಷರ ಜತೆಗೆ ಮಹಿಳಾ ತಂಡಗಳ ಸ್ಪರ್ಧೆಗಳೂ ನಡೆಯಲಿವೆ. ಪುರುಷರ ವಿಭಾಗದಲ್ಲಿ 8 ಮತ್ತು ಮಹಿಳಾ ವಿಭಾಗದಲ್ಲಿ 6 ತಂಡಗಳು ಕಣಕ್ಕಿಳಿಯಲಿವೆ. ಈ ಪೈಕಿ ಒಂದು ತಂಡ, ಭಾರತ ಹಾಕಿ ತಂಡದ ಪ್ರಮುಖ ಪ್ರಾಯೋಜಕನಾಗಿರುವ ಒಡಿಶಾ ರಾಜ್ಯದಾಗಿರಲಿದೆ. ತಂಡಗಳ ಬಿಡ್ಡಿಂಗ್​ ಪ್ರಕ್ರಿಯೆ ಸೆಪ್ಟೆಂಬರ್​ನಲ್ಲಿ ನಡೆಯಲಿದೆ.

ಟೂರ್ನಿಯಲ್ಲಿ ಆಡುವ ಆಟಗಾರರ ನೋಂದಣಿ ಪ್ರಕ್ರಿಯೆ ಈಗಾಗಲೆ ಆರಂಭಗೊಂಡಿದೆ. ಟೂರ್ನಿಯಲ್ಲಿ ಆಡಲು ಒಟ್ಟು 15 ದೇಶಗಳ ಅಗ್ರ ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಎಲ್ಲ ಪಂದ್ಯಗಳು ರೌರ್ಕೆಲಾ ಮತ್ತು ರಾಂಚಿಯಲ್ಲಿ ನಡೆಯಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net