

ದಿಸ್ಪುರ: ಹಿಮಾ ದಾಸ್ ಬಗ್ಗೆ ನಿಮಗೆಲ್ಲರಿಗೂ ಗೊತ್ತಿರುತ್ತದೆ. ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಪರ ಮೊದಲ ಚಿನ್ನದ ಪದಕ ಗೆದ್ದ ಮೊದಲ ಅಥ್ಲೀಟ್ ಎಂಬ ಕೀರ್ತಿಗೆ ಭಾಜನರಾದ ಓಟಗಾರ್ತಿ ಆಕೆ. ಇದೀಗ ಅದೇ ಹಿಮಾದಾಸ್ಗೆ ಮತ್ತೊಂದು ವಿಶಿಷ್ಟ ಸ್ಥಾನ ಸಿಕ್ಕಿದೆ.
ಹಿಮಾ ದಾಸ್ರನ್ನು ಅಸ್ಸಾಂ ಸರ್ಕಾರ ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಡಿಎಸ್ಪಿ) ನೇಮಿಸಿದೆ. ಈ ಕುರಿತಾಗಿ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಟ್ವಿಟ್ಟರ್ನಲ್ಲಿ ಮಾಹಿತಿ ನೀಡಿದ್ದಾರೆ. ಅಸ್ಸಾಂನ ಸರ್ಬಾನಂದ ಸೋನೊವಾಲ್ ಸರ್ಕಾರವು ಹಿಮಾ ದಾಸ್ ಅವರನ್ನು ಡಿಎಸ್ಪಿಯಾಗಿ ನೇಮಿಸಲು ನಿರ್ಧರಿಸಿದೆ ಎಂದು ಅವರು ತಿಳಿಸಿದ್ದಾರೆ.
ಹಿಮಾ ದಾಸ್ ಅವರ ಕ್ರೀಡಾ ಭವಿಷ್ಯದ ಬಗ್ಗೆಯೂ ಮಾತನಾಡಿರುವ ಅವರು, "ಅನೇಕರು ಹಿಮಾ ಅವರ ಕ್ರೀಡಾ ವೃತ್ತಿಜೀವನದ ಬಗ್ಗೆ ಏನು? ಎಂದು ಕೇಳುತ್ತಿದ್ದಾರೆ. ಹಿಮಾ ಅವರು ಎನ್ಐಎಸ್ ಪಟಿಯಾಲದಲ್ಲಿ ಒಲಿಂಪಿಕ್ ಅರ್ಹತೆಗಾಗಿ ತರಬೇತಿ ಪಡೆಯುತ್ತಿದ್ದಾರೆ ಮತ್ತು ಭಾರತಕ್ಕಾಗಿ ಸ್ಪರ್ಧಿಸಲಿದ್ದಾರೆ. ನಮ್ಮ ಗಣ್ಯ ಕ್ರೀಡಾಪಟುಗಳು ವಿವಿಧ ಉದ್ಯೋಗಗಳಲ್ಲಿದ್ದಾರೆ ಮತ್ತು ಕ್ರೀಡೆಯನ್ನೂ ಮುಂದುವರಿಸುತ್ತಿದ್ದಾರೆ. ನಿವೃತ್ತಿಯ ನಂತರವೂ ಅವರು ಕ್ರೀಡೆಗಳನ್ನು ಉತ್ತೇಜಿಸುವುದನ್ನು ಮುಂದುವರಿಸುತ್ತಾರೆ." ಎಂದು ಸ್ಪಷ್ಟನೆ ನೀಡಿದ್ದಾರೆ. (ಏಜೆನ್ಸೀಸ್)