ಬ್ಯೂಟಿ ಕ್ವೀನ್​ ಜೆನ್ನಾ ಕಾಂಜೊ ಹತ್ಯೆ! ಲೆಬನನ್​​ನ ರಸ್ತೆ ರಸ್ತೆಗಳಲ್ಲಿ ಆರಂಭವಾದ ಹೋರಾಟ

lebanon
Published on

ಬೈರುತ್​: ಕೌಟುಂಬಿಕ ಕಲಹವೆನ್ನುವುದು ತೀರಾ ಸಣ್ಣ ಕುಟುಂಬಗಳಿಂದ ಹಿಡಿದು ಎಂತೆಂತಾ ಸಿರಿವಂತರ ಮನೆಯಲ್ಲೂ ಅತ್ಯಂತ ಮಾಮೂಲು ಎನ್ನುವಂತಾಗಿಬಿಟ್ಟಿದೆ. ಇದೀಗ ಲೆಬನನ್ ರಾಷ್ಟ್ರದಲ್ಲಿ ಕೌಟುಂಬಿಕ ಕಲಹಗಳ ಸಂಖ್ಯೆ ಅತ್ಯಂತ ಹೆಚ್ಚಳವಾಗಿದ್ದು, ಅದೇ ಕಾರಣದಿಂದಾಗಿ ಬ್ಯೂಟಿ ಕ್ವೀನ್​ ಒಬ್ಬಳ ಹತ್ಯೆಯಾಗಿರುವುದಾಗಿ ಹೇಳಲಾಗಿದೆ.

ಲೆಬನನ್​ನ ಬ್ಯೂಟಿ ಕ್ವೀನ್​ ಜೆನ್ನಾ ಕಾಂಜೊ ಇತ್ತೀಚೆಗೆ ಹತ್ಯೆಯಾಗಿದ್ದಾರೆ. ಜೆನ್ನಾ ಅವರ ಪತಿ ಇಬ್ರಾಹಿಂ ಗಜಲ್​ ಈ ಕೊಲೆ ಮಾಡಿದ್ದಾನೆ ಎನ್ನುವ ಶಂಕೆ ವ್ಯಕ್ತವಾಗಿದೆ. ಮಾಡೆಲಿಂಗ್​ ಕ್ಷೇತ್ರದಲ್ಲಿ ಅಪಾರ ಮನ್ನಣೆ ಗಳಿಸಿದ್ದ ಜೆನ್ನಾ ಮದುವೆಯಾದಾಗಿನಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ಗಂಡ ಮತ್ತು ಹೆಂಡತಿಯ ನಡುವೆ ಹೆಚ್ಚು ಮನಸ್ತಾಪಗಳಿದ್ದವು ಎನ್ನಲಾಗಿದೆ. ಅಲ್ಲದೆ ಹೆಂಡತಿಯ ಕೊಲೆಯಾಗುತ್ತಿದ್ದಂತೆಯೇ ಗಂಡ ಕೆನಡಾಗೆ ಹಾರಿದ್ದು, ಅವರ ಮೇಲಿರುವ ಅನುಮಾನ ಹೆಚ್ಚಾಗುವಂತಾಗಿದೆ.

ಜೆನ್ನಾ ಕೊಲೆಯಾದ ನಂತರ ಇಬ್ರಾಹಿಂ ಆತನ ಸಹೋದರಿಯೊಂದಿಗೆ ಫೋನ್​ನಲ್ಲಿ ಮಾತನಾಡಿರುವ ಆಡಿಯೋ ಕ್ಲಿಪ್​ ಒಂದನ್ನು ಅಲ್ಲಿನ ಸ್ಥಳೀಯ ಮಾಧ್ಯಮ ಬಿಸ್ತರಿಸಿದೆ. ಅದರಲ್ಲಿ ಇಬ್ರಾಹಿಂ ತಾನು ಕೊಲೆ ಮಾಡಿರುವುದಾಗಿ ಹೇಳಿರುವುದು ರೆಕಾರ್ಡ್​ ಆಗಿದೆ. ನಾನು ಬೇಕೆಂದು ಮಾಡಲಿಲ್ಲ. ಅವಳು ಕೂಗುತ್ತಿದ್ದಳು. ಅಳು ನಿಲ್ಲಿಸು ಎಂದು ಹೇಳಿದೆ. ಅವಳು ಕೇಳದಿದ್ದಾಗ ಅವಳ ಬಾಯಿ ಒತ್ತಿ ಹಿಡಿದೆ ಎಂದಿರುವ ಮಾತುಗಳಿವೆ. ಸಹೋದರಿ ಕೊಲೆಯ ಬಗ್ಗೆ ಮತ್ತೆ ಮತ್ತೆ ಕೇಳಿದಾಗ ಆತ ನೇರವಾಗಿ ಕೊಲೆ ಮಾಡಿದೆ ಎಂದು ಹೇಳದೆ ಬೇರೆ ಬೇರೆ ರೀತಿಯಲ್ಲಿ ವಿವರಿಸಿರುವುದು ರೆಕಾರ್ಡ್​ ಆಗಿದೆ.

ಹೋರಾಟದ ಚಿತ್ರ
ಹೋರಾಟದ ಚಿತ್ರ

ಲೆಬನನ್​​ನಲ್ಲಿ ಈಗಾಗಲೇ ಜೆನ್ನಾ ರೀತಿಯಲ್ಲೇ ಎರಡು ಮೂರು ಹೆಣ್ಣು ಮಕ್ಕಳ ಕೊಲೆಯಾಗಿದೆ. ಎಲ್ಲ ಪ್ರಕರಣಗಳಲ್ಲೂ ಕೌಟುಂಬಿಕ ಕಲಹವೇ ಕಾರಣವಾಗಿತ್ತು ಎನ್ನಲಾಗಿದೆ. ಆ ಹಿನ್ನೆಲೆಯಲ್ಲಿ ರಾಷ್ಟ್ರಾದ್ಯಂತ ಜನರು ರಸ್ತೆಗಿಳಿದು ಹೋರಾಟ ಆರಂಭಿಸಿದ್ದಾರೆ. ಈ ರೀತಿಯ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಲಾಗುತ್ತಿದೆ. ಇಬ್ರಾಹಿಂ ಈ ಪ್ರಕರಣದ ಕುರಿತು ಏನು ಹೇಳುತ್ತಾನೆ ಎಂದು ಕೇಳಲು ಅಲ್ಲಿನ ಮಾಧ್ಯಮವೊಂದು ಆತನನ್ನು ಕರೆಸಿ, ಸಂದರ್ಶನ ನಡೆಸಿದ್ದು, ಮಾಧ್ಯಮದ ವಿರುದ್ಧವೂ ಜನರು ಆಕ್ರೋಶ ಹೊರಹಾಕಲಾರಂಭಿಸಿದ್ದಾರೆ. ಹೆಣ್ಣು ಮಕ್ಕಳನ್ನು ಕೊಲ್ಲುವ ನೀಚರ ಮಾತನ್ನು ಕೇಳುವಂತದ್ದು ಏನಿದೆ ಎಂದು ಪ್ರಶ್ನಿಸಲಾರಂಭಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net