

ನವದೆಹಲಿ: ನಿನ್ನೆ (ಜು.04) ಟಿ20 ವಿಶ್ವಕಪ್ ಟ್ರೋಫಿ ಗೆದ್ದ ಭಾರತಕ್ಕೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು. ಬಿಸಿಸಿಐ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾದ ವಿಶ್ವಕಪ್ ವೀರರಿಗೆ 125 ಕೋಟಿ ರೂ. ಬಹುಮಾನ ನೀಡಿ, ವಿಶೇಷವಾಗಿ ಸನ್ಮಾನಿಸಲಾಯಿತು. ಬಾರ್ಬಡೋಸ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ 7 ರನ್ಗಳ ಅಂತರದಿಂದ ಎದುರಾಳಿಯನ್ನು ಮಣಿಸಿ, 17 ವರ್ಷಗಳ ಬಳಿಕ ಭಾರತಕ್ಕೆ ವಿಶ್ವಕಪ್ ಗೆದ್ದುಕೊಟ್ಟ ಟೀಮ್ ಇಂಡಿಯಾಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿವೆ.
ಟಿ20 ವಿಶ್ವಕಪ್ ಗೆಲ್ಲುತ್ತಿದ್ದಂತೆ ಭಾರತ ತಂಡದ ನಾಯಕ ರೋಹಿತ್ ಶರ್ಮ, 'ರನ್ ಮಷಿನ್' ವಿರಾಟ್ ಕೊಹ್ಲಿ ಮತ್ತು ಆಲ್ರೌಂಡರ್ ರವೀಂದ್ರ ಜಡೇಜಾ ಅಂತಾರಾಷ್ಟ್ರೀಯ ಟಿ20 ಫಾರ್ಮೆಟ್ಗೆ ನಿವೃತ್ತಿ ಘೋಷಿಸಿದರು. ಒಂದೆಡೆ ಐತಿಹಾಸಿಕವಾಗಿ ವಿಶ್ವಕಪ್ ಗೆದ್ದ ಭಾರತ ತಂಡವನ್ನು ಕಂಡು ಸಂತಸ ಪಡುವುದೋ ಅಥವಾ ನೆಚ್ಚಿನ ಸ್ಟಾರ್ ಕ್ರಿಕೆಟಿಗರು ನಿವೃತ್ತಿ ಘೋಷಿಸಿದರು ಎಂದು ಬೇಸರಕ್ಕೆ ಶರಣಾಗುವುದೋ ತಿಳಿಯದೆ ಕ್ರಿಕೆಟ್ ಅಭಿಮಾನಿಗಳು ಕಂಗಾಲಾಗಿದ್ದರು. ಆದ್ರೆ, ಇದೀಗ ಜಗತ್ತಿನ ಶ್ರೇಷ್ಠ ಬೌಲರ್ ಎಂದೇ ಗುರುತಿಸಿಕೊಂಡಿರುವ ಟೀಮ್ ಇಂಡಿಯಾದ ಜಸ್ಪ್ರೀತ್ ಬುಮ್ರಾ ನಿವೃತ್ತಿ ವದಂತಿ ಅಭಿಮಾನಿಗಳನ್ನು ಮತ್ತಷ್ಟು ಗೊಂದಲಕ್ಕೆ ದೂಡಿತು.
ಈ ಕುರಿತಂತೆ ನಿನ್ನೆ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಬುಮ್ರಾ, "ಸದ್ಯಕ್ಕೆ ನಿವೃತ್ತಿ ಪಡೆಯುತ್ತಿಲ್ಲ. ನಾನು ಈಗಷ್ಟೇ ಪ್ರಾರಂಭಿಸಿದ್ದೇನೆ, ಮತ್ತು ಭವಿಷ್ಯದಲ್ಲಿ ಈ ಪ್ರಶ್ನೆಯಿಂದ ಬಹಳ ದೂರ ಉಳಿಯಲು ಬಯಸುತ್ತೇನೆ" ಎಂದು ಹೇಳಿದರು. ಬುಮ್ರಾ ಮಾತನ್ನು ಆಲಿಸುತ್ತಿದ್ದಂತೆ ಅಭಿಮಾನಿಗಳು ಸಂತಸ ಹೊರಹಾಕಿದ್ದು, ನೀವು ಟೀಮ್ ಇಂಡಿಯಾದ ಬಲಿಷ್ಠ ಆಟಗಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).