

ಸೆಂಚುರಿಯನ್: ಹೆನ್ರಿಕ್ ಕ್ಲಾಸೆನ್-ಡೇವಿಡ್ ಮಿಲ್ಲರ್ ಜೋಡಿ 94 ಎಸೆತಗಳಲ್ಲೇ 222 ರನ್ ಸಿಡಿಸಿ ಅತಿವೇಗದ ದ್ವಿಶತಕದ ಜತೆಯಾಟದ ವಿಶ್ವದಾಖಲೆ ಬರೆದ ಬಲದಿಂದ ದಕ್ಷಿಣ ಆಫ್ರಿಕಾ ತಂಡ ಪ್ರವಾಸಿ ಆಸ್ಟ್ರೆಲಿಯಾ ವಿರುದ್ಧದ ಏಕದಿನ ಸರಣಿಯ 4ನೇ ಪಂದ್ಯದಲ್ಲಿ 164 ರನ್ಗಳಿಂದ ಜಯಿಸಿದೆ. ಇದರಿಂದ 5 ಪಂದ್ಯಗಳ ಸರಣಿ 2-2 ಸಮಬಲಗೊಂಡಿದ್ದು, ನಿರ್ಣಾಯಕ ಅಂತಿಮ ಪಂದ್ಯ ಭಾನುವಾರ ಜೊಹಾನ್ಸ್ರ್ಬಗ್ನಲ್ಲಿ ನಡೆಯಲಿದೆ.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಆಸೀಸ್ 5 ವಿಕೆಟ್ಗೆ 416 ರನ್ ಪೇರಿಸಿದರೆ, ಆಸೀಸ್ 34.5 ಓವರ್ಗಳಲ್ಲಿ 252 ರನ್ಗಳಿಗೆ ಆಲೌಟ್ ಆಗಿ ಶರಣಾಯಿತು. ಕ್ಲಾಸೆನ್-ಮಿಲ್ಲರ್ ಜೋಡಿಯ ಜತೆಯಾಟವು, 2019ರಲ್ಲಿ ಇಂಗ್ಲೆಂಡ್ನ ಜೋಸ್ ಬಟ್ಲರ್-ಇವೊಯಿನ್ ಮಾರ್ಗನ್ ನಡುವಿನ ದ್ವಿಶತಕದ ಜತೆಯಾಟದ ದಾಖಲೆಯನ್ನು ಮುರಿಯಿತು. ಕ್ಲಾಸೆನ್-ಮಿಲ್ಲರ್ ಓವರ್ಗೆ 14.47ರ ಸರಾಸರಿಯಲ್ಲಿ ರನ್ ದೋಚಿದರೆ, ಬಟ್ಲರ್-ಮಾರ್ಗನ್ ವೆಸ್ಟ್ ಇಂಡೀಸ್ ಎದುರು 10.03ರ ಸರಾಸರಿಯಲ್ಲಿ 204 ರನ್ (122 ಎಸೆತ) ಸೇರಿಸಿದ್ದರು. ಇನ್ನು ಕ್ಲಾಸೆನ್ (174) 5 ಅಥವಾ ಅದಕ್ಕಿಂತ ಕೆಳ ಕ್ರಮಾಂಕದಲ್ಲಿ ಆಡಿದ ಬ್ಯಾಟರ್ನ 2ನೇ ಗರಿಷ್ಠ ರನ್ ಗಳಿಕೆಯ ಸಾಧನೆ ಮಾಡಿದರು. 1983ರ ವಿಶ್ವಕಪ್ನಲ್ಲಿ ಕಪಿಲ್ ದೇವ್ ಜಿಂಬಾಬ್ವೆ ವಿರುದ್ಧ ಅಜೇಯ 175 ರನ್ ಬಾರಿಸಿರುವುದು ಈಗಲೂ ಗರಿಷ್ಠವಾಗಿ ಉಳಿದಿದೆ.
ದಕ್ಷಿಣ ಆಫ್ರಿಕಾ: 5 ವಿಕೆಟ್ಗೆ 416 (ಕ್ಲಾಸೆನ್ 174, ಮಿಲ್ಲರ್ 82*), ಆಸ್ಟ್ರೆಲಿಯಾ: 34.5 ಓವರ್ಗಳಲ್ಲಿ 252 (ಕ್ಯಾರಿ 99, ಎನ್ಗಿಡಿ 51ಕ್ಕೆ 4, ರಬಾಡ 41ಕ್ಕೆ 3).