

Ricky Ponting : ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ರಿಕಿ ಪಾಂಟಿಂಗ್ ಅವರು ಇಂಗ್ಲೆಂಡ್ ಯುವ ಆಟಗಾರ ಹ್ಯಾರಿ ಬ್ರೂಕ್ ಅವರನ್ನು ಮನಸಾರೆ ಶ್ಲಾಘಿಸಿದ್ದಾರೆ. ಬ್ರೂಕ್ ಸದ್ಯ ವಿಶ್ವದ ಅತ್ಯುತ್ತಮ ಟೆಸ್ಟ್ ಬ್ಯಾಟ್ಸ್‌ಮನ್ ಎಂದು ಹೊಗಳಿದ್ದಾರೆ. ದೇಶ-ವಿದೇಶ ಪಿಚ್ಗಳಲ್ಲಿ ಬ್ರೂಕ್ ಅವರು ಬ್ಯಾಟ್ ಬೀಸುವ ರೀತಿಯನ್ನು ಪಾಂಟಿಂಗ್ ಶ್ಲಾಘಿಸಿದ್ದಾರೆ.
25 ವರ್ಷದ ಹ್ಯಾರಿ ಬ್ರೂಕ್ ವಿಶ್ವದ ನಂಬರ್ 1 ಟೆಸ್ಟ್ ಬ್ಯಾಟ್ಸ್‌ಮನ್ ಎನಿಸಿಕೊಂಡಿರುವುದು ಗೊತ್ತೇ ಇದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಟೆಸ್ಟ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಬ್ರೂಕ್ ಅವರು ಮೊದಲ ಬಾರಿಗೆ ಅಗ್ರಸ್ಥಾನವನ್ನು ವಶಪಡಿಸಿಕೊಂಡಿದ್ದಾರೆ. ಅತ್ಯುತ್ತಮ ಫಾರ್ಮ್‌ನೊಂದಿಗೆ ರನ್ ಗಳಿಸುತ್ತಿರುವ ಬಲಗೈ ಬ್ಯಾಟ್ಸ್‌ಮನ್, ಇತ್ತೀಚಿನ ಟೆಸ್ಟ್ ರ್ಯಾಂಕಿಂಗ್ನಲ್ಲಿ ನಂಬರ್ 1 (898 ರೇಟಿಂಗ್ ಪಾಯಿಂಟ್‌ಗಳು) ಪಟ್ಟಕ್ಕೇರಿದ್ದಾರೆ.
ಅಂದಹಾಗೆ ಬ್ರೂಕ್ ಇತ್ತೀಚಿನ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 171, 123 ಮತ್ತು 55 ರನ್ ಗಳಿಸಿದರು. ಈ ಮೂಲಕ ಇಂಗ್ಲೆಂಡ್‌ನ ಜೋ ರೂಟ್ (898) ಅವರನ್ನು ಹಿಂದಿಕ್ಕಿ ಅಗ್ರಸ್ಥಾನ ಪಡೆದರು. ಈ ಸಂದರ್ಭದಲ್ಲಿ ರಿಕಿ ಪಾಂಟಿಂಗ್ ಅವರು ಐಸಿಸಿ ರಿವ್ಯೂ ಶೋನಲ್ಲಿ ಹ್ಯಾರಿ ಬ್ರೂಕ್ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಬ್ರೂಕ್ ಅವರು ವಿಶ್ವದ ಅತ್ಯುತ್ತಮ ಟೆಸ್ಟ್ ಬ್ಯಾಟ್ಸ್‌ಮನ್ ಎಂದು ನಾನು ಭಾವಿಸುತ್ತೇನೆ. ತವರು ನೆಲದಲ್ಲಿ ಮಾತ್ರವಲ್ಲ, ವಿದೇಶದಲ್ಲಿಯೂ ಅವರು ಅದ್ಭುತವಾಗಿ ಆಡುತ್ತಿದ್ದಾರೆ. ವಿದೇಶಿ ಪಿಚ್ಗಳಲ್ಲಿ 7 ಶತಕಗಳನ್ನು ಬಾರಿಸಿದ್ದಾರೆ. ನಿಜಕ್ಕೂ ಅವರೊಬ್ಬ ಕ್ಲಾಸ್ ಪ್ಲೇಯರ್. ನಾನು ಬ್ರೂಕ್ ಅವರ ಬ್ಯಾಟಿಂಗ್ ಅನ್ನು ಪ್ರೀತಿಸುತ್ತೇನೆ ಎಂದು ರಿಕಿ ಪಾಂಟಿಂಗ್ ಹೇಳಿದ್ದಾರೆ.
ಎರಡು ವರ್ಷಗಳ ಹಿಂದಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿರುವ ಹ್ಯಾರಿ ಬ್ರೂಕ್ ಇದುವರೆಗೆ ಟೆಸ್ಟ್ನಲ್ಲಿ ಎಂಟು ಶತಕಗಳನ್ನು ಬಾರಿಸಿದ್ದಾರೆ. ಈ ಪೈಕಿ ಏಳು ಶತಕಗಳು ವಿದೇಶಿ ನೆಲದಲ್ಲಿ ದಾಖಲಾಗಿವೆ. ಅವರ ಹೆಸರಲ್ಲಿ ದ್ವಿಶತಕ ಮತ್ತು ತ್ರಿಶತಕ ಕೂಡ ಇದೆ. ಹ್ಯಾರಿ ಬ್ರೂಕ್ ಅವರು ಏಕದಿನ ಮಾದರಿಯಲ್ಲೂ ಶತಕ ಬಾರಿಸಿದ್ದಾರೆ. ಒಟ್ಟಾರೆಯಾಗಿ, ಹ್ಯಾರಿ ಬ್ರೂಕ್ ತನ್ನ ವೃತ್ತಿಜೀವನದಲ್ಲಿ ಇಂಗ್ಲೆಂಡ್‌ಗಾಗಿ 23 ಟೆಸ್ಟ್, 20 ಏಕದಿನ ಮತ್ತು 39 ಟಿ20 ಪಂದ್ಯಗಳನ್ನು ಆಡಿದ್ದಾರೆ. ಆಯಾ ಸ್ವರೂಪಗಳಲ್ಲಿ 2280, 719 ಮತ್ತು 707 ರನ್ ಗಳಿಸಿದ್ದು, ಉತ್ತಮ ಫಾರ್ಮ್ನಲ್ಲಿದ್ದಾರೆ.
ಐಸಿಸಿ ಬಿಡುಗಡೆ ಮಾಡಿರುವ ಟಾಪ್-10 ಟೆಸ್ಟ್ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಭಾರತದ ಯಶಸ್ವಿ ಜೈಸ್ವಾಲ್ (4ನೇ ಸ್ಥಾನ) ಮತ್ತು ರಿಷಬ್ ಪಂತ್ (9ನೇ ಸ್ಥಾನ) ಸ್ಥಾನ ಪಡೆದಿದ್ದಾರೆ. ಶುಭಮನ್ ಗಿಲ್ 17 ಹಾಗೂ ವಿರಾಟ್ ಕೊಹ್ಲಿ 20ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಮತ್ತೊಂದೆಡೆ, ಭಾರತದ ವೇಗಿ ಜಸ್ಪ್ರೀತ್ ಬುಮ್ರಾ (890) ಬೌಲರ್‌ಗಳ ಶ್ರೇಯಾಂಕದಲ್ಲಿ ತಮ್ಮ ನಂಬರ್ ಒನ್ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಕಾಗಿಸೊ ರಬಾಡ (856) ಮತ್ತು ಹ್ಯಾಸಲ್‌ವುಡ್ (851) ನಂತರದ ಸ್ಥಾನಗಳಲ್ಲಿದ್ದಾರೆ. ಅಶ್ವಿನ್ 4ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಕುಸಿದಿದ್ದು, ಜಡೇಜಾ 6ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಟೆಸ್ಟ್ ಆಲ್‌ರೌಂಡರ್‌ಗಳ ಪೈಕಿ ಜಡೇಜಾ (415) ಅಗ್ರಸ್ಥಾನದಲ್ಲಿದ್ದು, ಅಶ್ವಿನ್ 3ನೇ (283) ಸ್ಥಾನದಲ್ಲಿದ್ದಾರೆ. (ಏಜೆನ್ಸೀಸ್)