Sanjiv Goenka: ಕೂಲ್ ಕ್ಯಾಪ್ಟನ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಭಾರತೀಯ ಕ್ರೀಡಾಭಿಮಾನಿಗಳು ಹೆಚ್ಚು ಆರಾಧಿಸುವ ಕ್ರಿಕೆಟಿಗರಲ್ಲಿ ಒಬ್ಬರು. ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿ ನಾಲ್ಕು ವರ್ಷಗಳೇ ಕಳೆದರೂ ಈ ಟೀಮ್ ಇಂಡಿಯಾ ದಿಗ್ಗಜ ಆಟಗಾರನ ಮೇಲಿನ ಅಭಿಮಾನ ಸ್ವಲ್ಪವೂ ಕಡಿಮೆಯಾಗಿಲ್ಲ. ವರ್ಷಕ್ಕೊಮ್ಮೆ ನಡೆಯುವ ಐಪಿಎಲ್‌ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿರುತ್ತಾರೆ.
ಸದ್ಯ ಮತ್ತೊಮ್ಮೆ ಅಭಿಮಾನಿಗಳನ್ನು ರಂಜಿಸಲು ಮಿಸ್ಟರ್ ಕೂಲ್ ರೆಡಿಯಾಗಿದ್ದಾರೆ. ಧೋನಿ ಅವರು ಮುಂಬರುವ ಐಪಿಎಲ್ನಲ್ಲಿ ಅನ್‌ಕ್ಯಾಪ್ಡ್ ಆಟಗಾರನಾಗಿ ಚೆನ್ನೈ ಸೂಪರ್ ಕಿಂಗ್ಸ್ ( CSK ) ಪರ ಆಡಲಿದ್ದಾರೆ. ಇದೇ ಸಂದರ್ಭದಲ್ಲಿ ಲಖನೌ ಸೂಪರ್ ಜೈಂಟ್ಸ್ ( LSG ) ಮಾಲೀಕ ಸಂಜೀವ್ ಗೋಯೆಂಕಾ ಅವರು ಧೋನಿ ಬಗ್ಗೆ ಮೆಚ್ಚುಗೆಯ ಸುರಿಮಳೆಗೈದಿದ್ದಾರೆ. ಧೋನಿ ಓರ್ವ ಅದ್ಭುತ ನಾಯಕ ಮತ್ತು ಅವರಿಂದ ಸಾಕಷ್ಟು ಕಲಿತಿದ್ದೇನೆ ಎಂದು ಹೇಳಿದ್ದಾರೆ.
ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಧೋನಿ ಹೆಸರು ಶಾಶ್ವತವಾಗಿ ಉಳಿಯುತ್ತದೆ. ಧೋನಿಯಂತಹ ನಾಯಕನನ್ನು ಇದುವರೆಗೂ ನಾನು ನೋಡಿಲ್ಲ. ಅವರ ಆಲೋಚನಾ ಕ್ರಮ ಮತ್ತು ಪ್ರಬುದ್ಧತೆ, ಪದಗಳನ್ನೇ ಮೀರಿದೆ. ಧೋನಿ ಅವರು ಅತ್ಯಂತ ಚಿಕ್ಕ ವಯಸ್ಸಿನಲ್ಲಿ ತಮ್ಮನ್ನು ತಾವು ರೂಪಿಸಿಕೊಂಡ ರೀತಿ ನಿಜವಾಗಿಯೂ ಅದ್ಭುತವಾಗಿದೆ. ಧೋನಿ ತಮ್ಮ ಅನುಭವದಿಂದ ಅನೇಕ ಯುವ ಕ್ರಿಕೆಟಿಗರನ್ನು ಕೂಡ ಬೆಳೆಸಿದ್ದಾರೆ. ಮತೀಶ ಪತಿರಾಣ ಅವರನ್ನು ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಧೋನಿ ಅವರು ಪತಿರಾಣರನ್ನು ಮ್ಯಾಚ್ ವಿನ್ನರ್ ಆಟಗಾರನಾಗಿ ರೂಪಿಸಿದ್ದಾರೆ. ತಮ್ಮ ಆಟಗಾರರನ್ನು ಹೇಗೆ ಮತ್ತು ಯಾವಾಗ ಬಳಸಿಕೊಳ್ಳಬೇಕು ಎಂಬುದು ಧೋನಿಗೆ ಚೆನ್ನಾಗಿ ಗೊತ್ತಿದೆ ಎಂದು ಗೋಯೆಂಕಾ ಅವರು ಕೊಂಡಾಡಿದರು.
ನಾನು ಧೋನಿಯನ್ನು ಭೇಟಿಯಾದಾಗಲೆಲ್ಲ ಹೊಸದನ್ನು ಕಲಿತಿದ್ದೇನೆ. ಒಮ್ಮೆ ನಾನು ಲಖನೌ-ಚೆನ್ನೈ ಪಂದ್ಯದ ವೇಳೆ ಧೋನಿಯನ್ನು ಭೇಟಿಯಾಗಿದ್ದೆ. ನನ್ನ ಜೊತೆ ನನ್ನ 11 ವರ್ಷದ ಮೊಮ್ಮಗನೂ ಇದ್ದ. ಆತನಿಗೆ ಕ್ರಿಕೆಟ್ ಹುಚ್ಚು. ಐದಾರು ವರ್ಷಗಳ ಹಿಂದೆ ನನ್ನ ಮೊಮ್ಮಗನಿಗೆ ಕ್ರಿಕೆಟ್ ಆಡುವುದನ್ನು ಧೋನಿಯೇ ಕಲಿಸಿದ್ದರು. ಭೇಟಿಯ ಸಂದರ್ಭದಲ್ಲಿ ನನ್ನ ಮೊಮ್ಮಗ ಧೋನಿ ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳುತ್ತಲೇ ಇದ್ದರು. ಧೋನಿ ಸ್ವಲ್ಪವೂ ಬೇಸರ ಮಾಡಿಕೊಳ್ಳದೆ ಉತ್ತರ ನೀಡುತ್ತಲೇ ಇದ್ದರು. ಕೊನೆಗೆ ನಾನು ಧೋನಿಯ ಬಳಿ ಹೋಗಿ ಮೊಮ್ಮಗನನ್ನು ಅಲ್ಲಿಂದ ಹೊರಡಲು ಹೇಳಿದೆ. ಆದರೆ, ನನ್ನ ಮೊಮ್ಮಗನೊಂದಿಗಿನ ಸಂಭಾಷಣೆಯನ್ನು ಆನಂದಿಸುತ್ತಿರುವುದಾಗಿ ಧೋನಿ ಹೇಳಿದರು.
ನನ್ನ ಮೊಮ್ಮಗನ ಜೊತೆ ಸುಮಾರು ಅರ್ಧ ಗಂಟೆ ಕಾಲ ಧೋನಿ ಹರಟೆ ಹೊಡೆದರು. ಮಗುವಿಗಾಗಿ ಇಷ್ಟು ಸಮಯ ವ್ಯಯಿಸಿದ್ದಕ್ಕೆ ಧೋನಿ ನಿಜಕ್ಕೂ ಗ್ರೇಟ್. ಅವರ ವ್ಯಕ್ತಿತ್ವ ಇತರರೊಂದಿಗೆ ಹೇಗೆ ಮಾತನಾಡಬೇಕೆಂದು ಕಲಿಸುತ್ತದೆ. ಅದಕ್ಕಾಗಿಯೇ ಅವರು ಧೋನಿ ಆದರು. ಅವರು ಲಖನೌ ವಿರುದ್ಧ ಪಂದ್ಯವನ್ನು ಆಡಿದಾಗಲೆಲ್ಲಾ, ಇಡೀ ಕ್ರೀಡಾಂಗಣ ಹಳದಿ ಜರ್ಸಿಗಳಿಂದ ತುಂಬಿರುತ್ತದೆ ಎಂದು ಗೋಯೆಂಕಾ ಟಿಆರ್‌ಎಸ್ ಪಾಡ್‌ಕಾಸ್ಟ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು. (ಏಜೆನ್ಸೀಸ್)