

ನವದೆಹಲಿ: ಟಿ20 ವಿಶ್ವಕಪ್ ಗೆದ್ದ ಭಾರತ ತಂಡದ ಆಟಗಾರರು ಟ್ರೋಫಿಯೊಂದಿಗೆ ತವರಿಗೆ ಮರಳಿದರು. ಅವರಿಗೆ ಅದ್ಧೂರಿ ಸ್ವಾಗತವೂ ದೊರೆಯಿತು. ನಿನ್ನೆ (ಜುಲೈ 04) ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ರೋಹಿತ್ ಪಡೆಯನ್ನು ನೋಡಲು ನೂರಾರು ಅಭಿಮಾನಿಗಳು ವಿಮಾನ ನಿಲ್ದಾಣದಲ್ಲಿ ಜಮಾಯಿಸಿದ್ದರು. ಬಳಿಕ ಟೀಮ್ ಇಂಡಿಯಾ ಆಟಗಾರರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿತು ಮತ್ತು ಅವರೊಂದಿಗೆ ಉಪಾಹಾರ ಸೇವಿಸಿದರು. ಈ ಸಂದರ್ಭದಲ್ಲಿ ಪ್ರಧಾನಿಯವರು ಪ್ರತಿಯೊಬ್ಬ ಆಟಗಾರರನ್ನು ಆತ್ಮೀಯವಾಗಿ ಅಭಿನಂದಿಸಿದರು. ಟಿ20 ವಿಶ್ವಕಪ್ನ ವೈಶಿಷ್ಟ್ಯಗಳ ಬಗ್ಗೆ ವಿಚಾರಿಸಿದರು. ಬಳಿಕ ಮೋದಿ ಮನೆಯಿಂದ ಟೀಮ್ ಇಂಡಿಯಾ ಆಟಗಾರರು ಮುಂಬೈ ವಿಮಾನ ನಿಲ್ದಾಣಕ್ಕೆ ತೆರಳಿದರು.
ಭಾರತೀಯ ಆಟಗಾರರು ಮುಂಬೈ ವಿಮಾನ ನಿಲ್ದಾಣದಿಂದ ನೇರವಾಗಿ ವಾಂಖೆಡೆ ಸ್ಟೇಡಿಯಂ ತಲುಪಿದರು. ವಾಂಖೆಡೆ ಸ್ಟೇಡಿಯಂ ಬಳಿ ತೆರೆದ ಬಸ್ನಲ್ಲಿ ವಿಜಯೋತ್ಸವ ಮೆರವಣಿಗೆ ನಡೆಯಿತು. ಇದನ್ನು ನೋಡಲು ಲಕ್ಷಾಂತರ ಅಭಿಮಾನಿಗಳು ಮುಂಬೈ ಬೀದಿಗಳಲ್ಲಿ ಬೀಡುಬಿಟ್ಟಿದ್ದರು. ಟೀಮ್ ಇಂಡಿಯಾ ಆಗಮನದಿಂದ ಮುಂಬೈನಲ್ಲಿ ಹರ್ಷೋದ್ಘಾರ ಮುಗಿಲು ಮುಟ್ಟಿತು. ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ನಗರಕ್ಕೆ ಆಗಮಿಸಿದ್ದರಿಂದ ಸಂಚಾರ ದಟ್ಟಣೆಯು ಉಂಟಾಯಿತು.
ಈ ಸಂಭ್ರಮಾಚರಣೆ ಒಂದೆಡೆಯಾದರೆ, ಟೀಮ್ ಇಂಡಿಯಾ ಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್ಗೆ ನಿವೃತ್ತಿ ಘೋಷಿಸಿರುವುದು ಎಲ್ಲರಿಗೂ ಗೊತ್ತೇ ಇದೆ. ಇನ್ನು ಕೆಲವು ವರ್ಷಗಳ ಕಾಲ ಆಡುವ ಸಾಮರ್ಥ್ಯ ಇದ್ದರೂ ಯುವ ಆಟಗಾರರಿಗೆ ಅವಕಾಶ ನೀಡಬೇಕು ಎಂಬ ಉದ್ದೇಶದಿಂದ ಟಿ20 ಸ್ವರೂಪಕ್ಕೆ ವಿದಾಯ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಜಿ ಕ್ರಿಕೆಟಿಗರು ಹಾಗೂ ತಜ್ಞರು ಟಿ20ಯಲ್ಲಿ ಟೀಮ್ ಇಂಡಿಯಾಗೆ ರೋಹಿತ್-ಕೊಹ್ಲಿ ನೀಡಿದ ಸೇವೆ ಹಾಗೂ ವಿಶ್ವಕಪ್ನಲ್ಲಿ ತಂಡವನ್ನು ಮುನ್ನಡೆಸಿದ ರೀತಿಯನ್ನು ಸ್ಮರಿಸುತ್ತಿದ್ದಾರೆ. ಇವರಿಬ್ಬರ ಸೇವೆಯನ್ನು ಬ್ಯಾಟಿಂಗ್ ದಿಗ್ಗಜ ವೀರೇಂದ್ರ ಸೆಹ್ವಾಗ್ ಕೂಡ ಶ್ಲಾಘಿಸಿದ್ದಾರೆ. ಅದರಲ್ಲೂ ಕೊಹ್ಲಿ ಬಗ್ಗೆ ಕುತೂಹಲಕಾರಿ ಕಾಮೆಂಟ್ಗಳನ್ನು ಮಾಡಿದ್ದಾರೆ.
ಭಾರತ ತಂಡದಲ್ಲಿ ವಿರಾಟ್ ಕೊಹ್ಲಿ ಒಂದು ಪವಾಡ ಇದ್ದಂತೆ. ಇಂತಹ ಆಟಗಾರ ಭಾರತದಲ್ಲಿ ಮತ್ತೆ ಹುಟ್ಟುವುದಿಲ್ಲ. ಒಬ್ಬ ಬ್ಯಾಟರ್ ಆಗಿ ಇನ್ನೇನು ಮಾಡಬಹುದು? ತಂಡಕ್ಕೆ ಗೆಲುವು ಅನಿವಾರ್ಯ ಆದಂತಹ ಸಮಯದಲ್ಲಿ ಕೊಹ್ಲಿ ಯಾವಾಗಲೂ ಕೈಹಿಡಿದಿದ್ದಾರೆ. ಟೀಮ್ ಇಂಡಿಯಾ ಫೈನಲ್ನಲ್ಲಿ ಗೆದ್ದು ಇದೀಗ ಚಾಂಪಿಯನ್ ಆಗಿದೆ. ಈ ಸಂತೋಷದ ಬೀಳ್ಕೊಡುಗೆಯು ಸಹ ಕೊಹ್ಲಿಗೆ ಸಿಕ್ಕಿದೆ. ಹ್ಯಾಟ್ಸ್ ಆಫ್ ಟು ಕೊಹ್ಲಿ. ಕೊಹ್ಲಿಯಂತಹ ಆಟಗಾರ ಮತ್ತೆ ಹುಟ್ಟುವುದಿಲ್ಲ ಎಂದು ಸೆಹ್ವಾಗ್ ಹೇಳಿದ್ದಾರೆ.
ಟಿ20 ವಿಶ್ವಕಪ್ ಇತಿಹಾಸದಲ್ಲಿ ಕೊಹ್ಲಿ ಅತ್ಯುತ್ತಮ ಬ್ಯಾಟ್ಸ್ಮನ್ ಎಂದು ಸೆಹ್ವಾಗ್ ಹೊಗಳಿದ್ದಾರೆ. 2014, 2016 ಮತ್ತು 2022ರ ವಿಶ್ವಕಪ್ನಲ್ಲಿ ಹಲವು ಪಂದ್ಯಗಳಲ್ಲಿ ಏಕಾಂಗಿಯಾಗಿ ತಂಡವನ್ನು ಗೆದ್ದುಕೊಟ್ಟಿದ್ದಾರೆ ಎಂದು ಸೆಹ್ವಾಗ್ ಉಲ್ಲೇಖಿಸಿದರು. ಟಿ20ಯಲ್ಲಿ ಯಶಸ್ವಿಯಾಗಿರುವಂತೆಯೇ ಇನ್ನೆರಡು ಮಾದರಿಗಳಲ್ಲಿಯೂ ಯಶಸ್ವಿಯಾಗಲು ಮತ್ತು ಉನ್ನತ ಗುಣಮಟ್ಟವನ್ನು ಸ್ಥಾಪಿಸಲು ಬಯಸುತ್ತೇನೆ ಎಂದು ಸೆಹ್ವಾಗ್ ಶುಭ ಹಾರೈಸಿದರು. (ಏಜೆನ್ಸೀಸ್)