

ಹೈದರಾಬಾದ್: ಅಹಮದಾಬಾದ್ ಮತ್ತು ಕೋಲ್ಕತದಲ್ಲಿ ನಿಗದಿಯಾಗಿದ್ದ ಪಂದ್ಯಗಳಿಗೆ ಭದ್ರತಾ ಕಳವಳ ವ್ಯಕ್ತವಾದ ಹಿನ್ನೆಲೆಯಲ್ಲಿ ಏಕದಿನ ವಿಶ್ವಕಪ್ ಟೂರ್ನಿಯ ವೇಳಾಪಟ್ಟಿಯನ್ನು ಐಸಿಸಿ ಇತ್ತೀಚೆಗಷ್ಟೇ ಬದಲಾಯಿಸಿತ್ತು. ಇದೀಗ ಟೂರ್ನಿಗೆ ಒಂದೂವರೆ ತಿಂಗಳಷ್ಟೇ ಬಾಕಿ ಉಳಿದಿರುವ ನಡುವೆ ಹೈದರಾಬಾದ್ ಕ್ರಿಕೆಟ್ ಸಂಸ್ಥೆಯೂ (ಎಚ್ಸಿಎ) ವೇಳಾಪಟ್ಟಿಯ ಬಗ್ಗೆ ತಕರಾರು ಎತ್ತಿದ್ದು, ಅಕ್ಟೋಬರ್ 9 ಮತ್ತು 10ರಂದು ಸತತ 2 ದಿನಗಳಲ್ಲಿ ಪಂದ್ಯ ಆಯೋಜಿಸುವುದು ಭದ್ರತಾ ದೃಷ್ಟಿಯಿಂದ ಸವಾಲೆನಿಸಿದೆ ಎಂದಿದೆ. ಇದರಿಂದಾಗಿ, ಅಕ್ಟೋಬರ್ 5ರಂದು ಆರಂಭಗೊಳ್ಳಲಿರುವ ಟೂರ್ನಿಯ ವೇಳಾಪಟ್ಟಿಗೆ ಮತ್ತೆ ತಿದ್ದುಪಡಿ ಮಾಡಲಾಗುವುದೇ ಎಂಬ ಕುತೂಹಲ ಮೂಡಿದೆ.
ಬಹಳಷ್ಟು ತಡವಾಗಿ ಕಳೆದ ಜೂನ್ನಲ್ಲಷ್ಟೇ ಐಸಿಸಿ, ವಿಶ್ವಕಪ್ ವೇಳಾಪಟ್ಟಿ ಬಿಡುಗಡೆಗೊಳಿಸಿತ್ತು. ಬಳಿಕ ನವರಾತ್ರಿ, ಕಾಳಿ ಪೂಜೆ ಹಬ್ಬದ ಹಿನ್ನೆಲೆಯಲ್ಲಿ ಭಾರತ&ಪಾಕ್ ಸಹಿತ ಒಟ್ಟು 9 ಪಂದ್ಯಗಳ ದಿನಾಂಕ&ಸಮಯ ಬದಲಾಯಿಸಿದ ಐಸಿಸಿ ಈ ತಿಂಗಳ ಆರಂಭದಲ್ಲಿ ಪರಿಷತ ವೇಳಾಪಟ್ಟಿ ಬಿಡುಗಡೆಗೊಳಿಸಿತ್ತು. ಈ ಬದಲಾದ ವೇಳಾಪಟ್ಟಿಯ ಅನ್ವಯ ಹೈದರಾಬಾದ್ನಲ್ಲಿ ಅಕ್ಟೋಬರ್ 12ರಂದು ನಿಗದಿಯಾಗಿದ್ದ ಪಾಕಿಸ್ತಾನ&ಶ್ರೀಲಂಕಾ ನಡುವಿನ ಪಂದ್ಯವನ್ನು ಅಕ್ಟೋಬರ್ 10ಕ್ಕೆ ಮರುನಿಗದಿಗೊಳಿಸಲಾಗಿತ್ತು. ಆದರೆ ಇದಕ್ಕೆ ಮೊದಲೇ ಹೈದರಾಬಾದ್ನಲ್ಲಿ ಅಕ್ಟೋಬರ್ 9ರಂದು ನ್ಯೂಜಿಲೆಂಡ್-ನೆದರ್ಲೆಂಡ್ ನಡುವಿನ ಪಂದ್ಯ ನಿಗದಿಯಾಗಿತ್ತು. ಇದರಿಂದಾಗಿ ಸತತ 2 ದಿನಗಳಲ್ಲಿ ಪಂದ್ಯ ಆಯೋಜಿಸುವ ಸವಾಲು ಎದುರಿಸುತ್ತಿರುವ ಎಚ್ಸಿಎಗೆ ಭದ್ರತಾ ಕಳವಳ ಉಂಟಾಗಿದೆ.
"ಖಂಡಿತವಾಗಿಯೂ ದಿನಾಂಕ ಬದಲಾವಣೆ ಮಾಡಬೇಕೇ ಎಂದು ಹೇಳಲಾರೆ. ಆದರೆ ಸತತ 2 ದಿನಗಳಲ್ಲಿ ಪಂದ್ಯ ಆಡುವುದು ಸರಿಯಲ್ಲ. ಈ ಬಗ್ಗೆ ಬಿಸಿಸಿಐ ಮರುಪರಿಶೀಲನೆ ನಡೆಸಿದರೆ ಉತ್ತಮ. ನಾವೂ ಭದ್ರತಾ ಸಂಸ್ಥೆಗಳೊಂದಿಗೆ ಮಾತುಕತೆಯಲ್ಲಿದ್ದೇವೆ. ಇದೇ ವೇಳೆ ನಮ್ಮ ಪರಿಸ್ಥಿತಿಯನ್ನು ಬಿಸಿಸಿಐಗೂ ವಿವರಿಸುತ್ತೇವೆ' ಎಂದು ಎಚ್ಸಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರತಿ ಅಂತಾರಾಷ್ಟ್ರೀಯ ಪಂದ್ಯಕ್ಕೆ ಹೈದರಾಬಾದ್ ಪೊಲೀಸ್ ಇಲಾಖೆ 2,000-2,500 ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸುತ್ತದೆ. ಆದರೆ ಈ ಪೈಕಿ ಒಂದು ಪಂದ್ಯದಲ್ಲಿ ಪಾಕಿಸ್ತಾನ ತಂಡವೂ ಆಡಲಿರುವುದರಿಂದ ಭದ್ರತೆ ಇನ್ನಷ್ಟು ಹೆಚ್ಚಾಗಲಿದೆ..