

ನಾಗ್ಪುರ: ಇಲ್ಲಿನ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆದ ಭಾರತ (Team India) ಹಾಗೂ ಇಂಗ್ಲೆಂಡ್ (England) ನಡುವಿನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯರು 4 ವಿಕೆಟ್ಗಳ ಜಯ ಸಾಧಿಸುವ ಮೂಲಕ ಉತ್ತಮ ಆರಂಭ ಪಡೆದಿದ್ದು, ಪ್ರವಾಸಿ ತಂಡಕ್ಕೆ ಮತ್ತೊಮ್ಮೆ ಸೋಲಿನ ಆಘಾತವನ್ನು ನೀಡಿದ್ದಾರೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ಇಂಗ್ಲೆಂಡ್ ತಂಡಕ್ಕೆ ನಾಯಕ ಜೋಸ್ ಬಟ್ಲರ್ (52 ರನ್, 67 ಎಸೆತ, 4 ಬೌಂಡರಿ) ಜೇಕಬ್ ಬೆಥೆಲ್ (51 ರನ್, 64 ಎಸೆತ, 3 ಬೌಂಡರಿ, 1 ಸಿಕ್ಸರ್) ಅರ್ಧಶತಕಗಳ ಫಲವಾಗಿ 47.4 ಓವರ್ಗಳಲ್ಲಿ 248 ರನ್ಗಳಿಗೆ ಆಲೌಟ್ ಆಯಿತು. ಗುರಿ ಬೆನ್ನತ್ತಿದ್ದ ಟೀಮ್ ಇಂಡಿಯಾ (Team India) ಪರ ಶುಭಮನ್ ಗಿಲ್ (87 ರನ್, 96 ಎಸೆತ, 14 ಬೌಂಡರಿ), ಶ್ರೇಯಸ್ ಅಯ್ಯರ್ (59 ರನ್, 36 ಎಸೆತ, 9 ಬೌಂಡರಿ, 2 ಸಿಕ್ಸರ್), ಅಕ್ಷರ್ ಪಟೇಲ್ (52 ರನ್, 47 ಎಸೆತ, 6 ಬೌಂಡರಿ, 1 ಸಿಕ್ಸರ್) ಅರ್ಧಶತಕಗಳ ಫಲವಾಗಿ ಗುರಿಯನ್ನು 6 ವಿಕೆಟ್ ನಷ್ಟಕ್ಕೆ 38.4 ಓವರ್ಗಳಲ್ಲಿ ತಲುಪುವ ಮೂಲಕ ಗೆಲುವಿನ ನಗೆ ಬೀರಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ಗೆ ಇಳಿದ ಇಂಗ್ಲೆಂಡ್ ತಂಡಕ್ಕೆ ಆರಂಭಿಕರಾದ ಫಿಲ್ ಸಾಲ್ಟ್ (43 ರನ್, 26 ಎಸೆತ, 5 ಬೌಂಡರಿ, 3 ಸಿಕ್ಸರ್) ಬೆನ್ ಡಕೆಟ್ (32 ರನ್, 29 ಎಸೆತ, 6 ಬೌಂಡರಿ) 9 ಓವರ್ನ ಮುಕ್ತಾಯಕ್ಕೆ 73 ರನ್ ಜತೆಯಾಟವಾಡಿ ಬೃಹತ್ ಮೊತ್ತ ಪೇರಿಸುವ ಮುನ್ಸೂಚನೆಯನ್ನು ನೀಡಿತ್ತು. ಈ ಸಮಯದಲ್ಲಿ ಕೈಚಳಕ ತೋರಿದ ಟೀಮ್ ಇಂಡಿಯಾದ (Team India) ವೇಗಿಗಳು ಆಂಗ್ಲರಿಗೆ ಡಗೌಟ್ ದಾರಿ ತೋರಿಸುವಲ್ಲಿ ಯಶಸ್ವಿಯಾದರು. ಟೀಮ್ ಇಂಡಿಯಾ ಪರ ಹರ್ಷಿತ್ ರಾಣಾ, ರವೀಂದ್ರ ಜಡೇಜಾ ತಲಾ ಮೂರು ವಿಕೆಟ್ ಪಡೆದರೆ ಕುಲ್ದೀಪ್ ಯಾದವ್, ಅಕ್ಸರ್ ಪಟೇಲ್ ಮತ್ತು ಮೊಹಮ್ಮದ್ ಶಮಿ ತಲಾ ಒಂದು ವಿಕೆಟ್ ಪಡೆದಿದ್ದಾರೆ.
17ನೇ ಆವೃತ್ತಿಯ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿರುವ ಯುವ ವೇಗಿ ಹರ್ಷಿತ್ ರಾಣಾ (Harshit Rana) ಏಕದಿನ ಪದಾರ್ಪಣೆ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಎಲ್ಲರ ಗಮನ ಸೆಳೆದರು. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 7 ಓವರ್ ಬೌಲ್ ಮಾಡಿದ ರಾಣಾ 53 ರನ್ ಬಿಟ್ಟುಕೊಟ್ಟು 3 ವಿಕೆಟ್ಗಳನ್ನು ಪಡೆಯುವ ಮೂಲಕ ವಿಶೇಷ ಸಾಧನೆಯೊಂದನ್ನು ಮಾಡಿದ್ದಾರೆ.
ಭಾರತದ ಪರ ಮೂರು ಮಾದರಿಗಳಲ್ಲಿ ಪದಾರ್ಪಣೆ ಮಾಡಿರುವ ಹರ್ಷಿತ್ ರಾಣಾ (Harshit Rana) ತಮ್ಮ ಮೊದಲ ಪಂದ್ಯದಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ಗಳನ್ನು ಪಡೆದಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. 1974ರ ಬಳಿಕ ಭಾರತೀಯ ಕ್ರಿಕೆಟಿಗರೊಬ್ಬರು ಈ ಸಾಧನೆಯನ್ನು ಮಾಡಿದ್ದು, ಹರ್ಷಿತ್ ರಾಣಾ ಈ ಹಗ್ಗಳಿಕೆಗೆ ಪಾತ್ರರಾಗಿದ್ದಾರೆ.
2024ರಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಹರ್ಷಿತ್ ರಾಣಾ (Harshit Rana) ತಾವಾಡಿದ ಮೊದಲ ಪಂದ್ಯದಲ್ಲೇ ನಾಲ್ಕು ವಿಕೆಟ್ಗಳನ್ನು ಪಡೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಕನ್ಕಷನ್ ನಿಯಮದಡಿ ಪದಾರ್ಪಣೆ ಮಾಡಿದ್ದ ಹರ್ಷಿತ್ ಮೂರು ವಿಕೆಟ್ಗಳನ್ನು ಪಡೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಇದೀಗ ಏಕದಿನ ಮಾದರಿಯಲ್ಲು ಮೂರು ವಿಕೆಟ್ ಪಡೆಯುವ ಮೂಲಕ ಹರ್ಷಿತ್ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದು, ರಾಷ್ಟ್ರೀಯ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ಮುನ್ಸೂಚನೆಯನ್ನು ನೀಡಿದ್ದಾರೆ.