

Harshal Patel: ನಿನ್ನೆ (ಏ.03) ನಡೆದ ಕೆಕೆಆರ್ ಮತ್ತು ಎಸ್ಆರ್ಎಚ್ ನಡುವಿನ 14ನೇ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿದ ಅಂಗಕ್ರಿಶ್ ರಘುವಂಶಿ (50 ರನ್, 32 ಎಸೆತ, 5 ಬೌಂಡರಿ, 2 ಸಿಕ್ಸರ್) ಹಾಗೂ ವೆಂಕಟೇಶ್ ಅಯ್ಯರ್ (60 ರನ್, 29 ಎಸೆತ, 7 ಬೌಂಡರಿ, 3 ಸಿಕ್ಸರ್) ಜತೆಗೆ ಬೌಲರ್ಗಳ ಸಂಘಟಿತ ನಿರ್ವಹಣೆಯ ನೆರವಿನಿಂದ ಹಾಲಿ ಚಾಂಪಿಯನ್ ಕೋಲ್ಕತ ನೈಟ್ರೈಡರ್ಸ್ ತಂಡ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 80 ರನ್ಗಳ ಬೃಹತ್ ಗೆಲುವು ದಾಖಲಿಸಿತು.
'ಒನ್ ಸೈಡೆಡ್ ಮ್ಯಾಚ್' ಎಂಬ ಮಾತು ನಿನ್ನೆಯ ಪಂದ್ಯದಲ್ಲಿ ಮರುಕುಳಿದ್ದು ಕ್ರಿಕೆಟ್ ಪ್ರಿಯರಲ್ಲಿ ಬೇಸರ ಮೂಡಿಸಿತು. ಕಾರಣ, ಭಾರೀ ಅಂತರದಲ್ಲಿ ಕೆಕೆಆರ್ ಎದುರು ಮಂಡಿಯೂರಿದ ಎಸ್ಆರ್ಎಚ್, ರೋಚಕತೆಗೆ ಸಾಕ್ಷಿಯಾಗುವುದಿರಲಿ, ಗೆಲುವಿನ ಸಮೀಪಕ್ಕೂ ಸುಳಿಯಲಿಲ್ಲ ಎಂಬ ನಿರಾಶೆ. ಅಜಿಂಕ್ಯ ರಹಾನೆ ಪಡೆ ಗೆಲುವಿನ ಹಳಿ ಏರಿದರೆ, ಟೂರ್ನಿಯಲ್ಲಿ ಸತತ 3ನೇ ಸೋಲಿಗೆ ತುತ್ತಾದ ಪ್ಯಾಟ್ ಕಮ್ಮಿನ್ಸ್ ಪಡೆ ಐಪಿಎಲ್ ಅಂಕಪಟ್ಟಿಯಲ್ಲಿ ಕೊನೇ ಸ್ಥಾನಕ್ಕೆ ಜಾರಿದೆ.
ಇನ್ನು ಈ ಪಂದ್ಯದಲ್ಲಿ ಎಲ್ಲರ ಗಮನ ಸೆಳೆದಿದ್ದು ಬೌಲರ್ ಹರ್ಷಲ್ ಪಟೇಲ್ ಹಿಡಿದ ಆ ಅದ್ಭುತ ಕ್ಯಾಚ್. ಈಡೆನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿದ್ದ ಅಂಗಕ್ರಿಶ್ ರಘುವಂಶಿ ಬಾರಿಸಿದ ಬಾಲ್ ಹಿಡಿಯಲು ಭಾರೀ ಶ್ರಮವಹಿಸಿದ ಹರ್ಷಲ್, ಓಡುತ್ತಲೇ ಜಿಗಿದು ಹಿಡಿದ ಕ್ಯಾಚ್ ನೋಡುಗರ ಹುಬ್ಬೇರಿಸಿತು. ಈ ಕ್ಯಾಚ್ ನೋಡಿ ಒಂದು ಕ್ಷಣ ಬೆರಗಾದ ಅಭಿಮಾನಿಗಳು, ಹರ್ಷಲ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇನ್ನು ಈ ರೋಮಾಂಚಕ ಕ್ಯಾಚ್ನ ದೃಶ್ಯಗಳು ಕ್ಷಣಮಾತ್ರದಲ್ಲಿ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹರ್ಷಲ್ ಪಟೇಲ್ ಕರಿಯರ್ನಲ್ಲಿ ಇದೊಂದು ಉತ್ತಮ ಕ್ಯಾಚ್. ಈ ರೀತಿ ಹಿಂದೆಂದೂ ಅವರು ಹಿಡಿದಿರಲಿಲ್ಲ ಎಂಬ ಪ್ರಶಂಸೆಗಳು ವ್ಯಕ್ತವಾಗಿವೆ,(ಏಜೆನ್ಸೀಸ್).