ಇಂಗ್ಲೆಂಡ್​ ವೈಟ್​ಬಾಲ್ ಕ್ರಿಕೆಟ್​​ ತಂಡಕ್ಕೆ ಹ್ಯಾರಿ ಬ್ರೂಕ್​ ಹೊಸ ನಾಯಕ

web brook
Published on

ಲಂಡನ್​: ಯುವ ಬ್ಯಾಟರ್​ ಹ್ಯಾರಿ ಬ್ರೂಕ್​ ಇಂಗ್ಲೆಂಡ್​ ವೈಟ್​ಬಾಲ್​ ತಂಡದ ಹೊಸ ನಾಯಕರಾಗಿ ಸೋಮವಾರ ಅಧಿಕೃತವಾಗಿ ನೇಮಕಗೊಂಡಿದ್ದಾರೆ. ಕಳೆದ ಮಾರ್ಚ್​ನಲ್ಲಿ ಇಂಗ್ಲೆಂಡ್​ ತಂಡ ಐಸಿಸಿ ಚಾಂಪಿಯನ್ಸ್​ ಟ್ರೋಫಿಯಲ್ಲಿ ಲೀಗ್​ ಹಂತದಲ್ಲೇ ಹೊರಬಿದ್ದ ಬಳಿಕ ಜೋಸ್​ ಬಟ್ಲರ್​ ಟಿ20 ಮತ್ತು ಏಕದಿನ ತಂಡದ ನಾಯಕತ್ವ ತ್ಯಜಿಸಿದ್ದರು.

26 ವರ್ಷದ ಬ್ರೂಕ್​ ಇದುವರೆಗೆ ಇಂಗ್ಲೆಂಡ್​ ಏಕದಿನ ಮತ್ತು ಟಿ20 ತಂಡದ ಉಪನಾಯಕರಾಗಿದ್ದರು. ಅಲ್ಲದೆ ಬಟ್ಲರ್​ ಗೈರಿನಲ್ಲಿ ಕಳೆದ ಸೆಪ್ಟೆಂಬರ್​ನಲ್ಲಿ ಆಸ್ಟ್ರೆಲಿಯಾ ಎದುರು 5 ಏಕದಿನ ಪಂದ್ಯಗಳಲ್ಲಿ ಹಂಗಾಮಿ ನಾಯಕರೂ ಆಗಿದ್ದರು. ಮುಂದಿನ ಮೇ ಅಂತ್ಯದಲ್ಲಿ ಪ್ರವಾಸಿ ವೆಸ್ಟ್​ ಇಂಡೀಸ್​ ವಿರುದ್ಧ ತವರಿನಲ್ಲಿ ನಡೆಯಲಿರುವ ತಲಾ 3 ಟಿ20 ಮತ್ತು ಏಕದಿನ ಪಂದ್ಯಗಳ ಸರಣಿ ಬ್ರೂಕ್​ಗೆ ಪೂರ್ಣಪ್ರಮಾಣದ ನಾಯಕರಾಗಿ ಮೊದಲ ಸವಾಲು ಆಗಿರಲಿದೆ.

"ಇದೊಂದು ದೊಡ್ಡ ಗೌರವವಾಗಿದೆ. ಬಾಲ್ಯದಿಂದಲೂ ನಾನು ಇಂಗ್ಲೆಂಡ್​ ಪರ ಆಡುವುದು ಮಾತ್ರವಲ್ಲದೆ ನಾಯಕನಾಗುವ ಕನಸನ್ನೂ ಕಂಡಿದ್ದೆ. ಇದೀಗ ಆ ಅಪೂರ್ವ ಅವಕಾಶ ನನಗೆ ಎದುರಾಗಿದೆ' ಎಂದು ಹ್ಯಾರಿ ಬ್ರೂಕ್​ ನಾಯಕತ್ವದ ಜವಾಬ್ದಾರಿ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

2022ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಬ್ರೂಕ್​ ಇದುವರೆಗೆ 44 ಟಿ20, 26 ಏಕದಿನ ಮತ್ತು 24 ಟೆಸ್ಟ್​ ಪಂದ್ಯಗಳನ್ನು ಆಡಿದ್ದಾರೆ. ಈ ಬಾರಿ ಐಪಿಎಲ್​ನಲ್ಲಿ ಡೆಲ್ಲಿ ಪರ ಆಡಬೇಕಾಗಿದ್ದ ಬ್ರೂಕ್​, ಕೊನೇಕ್ಷಣದಲ್ಲಿ ಹಿಂದೆ ಸರಿದಿದ್ದರು. ಇದರಿಂದಾಗಿ ಮುಂದಿನ 2 ವರ್ಷಗಳಿಗೆ ಐಪಿಎಲ್​ನಿಂದ ನಿಷೇಧಕ್ಕೂ ಒಳಗಾಗಿದ್ದಾರೆ.

ಬ್ರೂಕ್​ ಈ ಮುನ್ನ 19 ವಯೋಮಿತಿ ವಿಶ್ವಕಪ್​ನಲ್ಲಿ ಇಂಗ್ಲೆಂಡ್​ ನಾಯಕತ್ವ ವಹಿಸಿದ್ದರು. ಅಲ್ಲದೆ ಯಂಗ್​ ಲಯನ್ಸ್​ ತಂಡದ ನಾಯಕರೂ ಆಗಿದ್ದರು. ದಿ ಹಂಡ್ರೆಡ್​ನಲ್ಲಿ ನಾರ್ಥನ್​ ಸೂಪರ್​ಚಾರ್ಜರ್ಸ್​ ತಂಡದ ನಾಯಕತ್ವ ವಹಿಸಿದ ಅನುಭವವನ್ನೂ ಹೊಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net