

ಮುಂಬೈ: ಹರ್ಮಾನ್ಪ್ರೀತ್ ಕೌರ್ ಸಾರಥ್ಯದ ಭಾರತದ ಮಹಿಳಾ ತಂಡ ಟೆಸ್ಟ್ ಕ್ರಿಕೆಟ್ ಸತ್ವಪರೀಕ್ಷೆಗೆ ಸಜ್ಜಾಗಿದ್ದು, ಗುರುವಾರದಿಂದ 4 ದಿನಗಳ ಕಾಲ ಪ್ರವಾಸಿ ಇಂಗ್ಲೆಂಡ್ ವಿರುದ್ಧ ಏಕೈಕ ಟೆಸ್ಟ್ ಪಂದ್ಯವನ್ನು ಆಡಲಿದೆ. ಭಾರತದಲ್ಲಿ 9 ವರ್ಷಗಳ ಬಳಿಕ ಮಹಿಳೆಯರ ಟೆಸ್ಟ್ ಪಂದ್ಯ ನಡೆಯಲಿದೆ. ಪುರುಷರ ಟೆಸ್ಟ್ನಂತೆ ಮಹಿಳಾ ಕ್ರಿಕೆಟ್ನಲ್ಲೂ ಭಾರತ ಪ್ರವಾಸಿಗರನ್ನು ಸ್ಪಿನ್ ಖೆಡ್ಡಾದಲ್ಲಿ ಬೀಳಿಸಲು ಪ್ರಯತ್ನಿಸಲಿದೆ.
ಭಾರತ ಮತ್ತು ಇಂಗ್ಲೆಂಡ್ ಮಹಿಳಾ ತಂಡಗಳು 1986ರಿಂದ 14 ಟೆಸ್ಟ್ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಭಾರತ ಒಂದರಲ್ಲಿ ಸೋತಿದ್ದು, 2ರಲ್ಲಿ ಗೆದ್ದಿದೆ. ಉಳಿದ ಪಂದ್ಯಗಳು ಡ್ರಾಗೊಂಡಿವೆ. ಹರ್ಮಾನ್ಪ್ರೀತ್ ಕೌರ್ ಇದೇ ಮೊದಲ ಬಾರಿಗೆ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ.
ಕರ್ನಾಟಕದ ಎಡಗೈ ಆರಂಭಿಕ ಬ್ಯಾಟರ್ ಶುಭಾ ಸತೀಶ್ ಟೆಸ್ಟ್ ಪದಾರ್ಪಣೆ ಅವಕಾಶ ಪಡೆಯುವ ನಿರೀಕ್ಷೆ ಇದೆ. ಟಿ20-ಏಕದಿನ ಅನುಭವಿಗಳಾದ ಜೆಮೀಮಾ ರೋಡ್ರಿಗಸ್, ಹರ್ಲೀನ್ ಡಿಯೋಲ್ ಕೂಡ ಚೊಚ್ಚಲ ಟೆಸ್ಟ್ ಅನುಭವದ ನಿರೀೆಯಲ್ಲಿದ್ದಾರೆ. ಈ ಪಂದ್ಯದೊಂದಿಗೆ ಇಂಗ್ಲೆಂಡ್ ತಂಡ ಮಹಿಳಾ ಕ್ರಿಕೆಟ್ನಲ್ಲಿ 100 ಟೆಸ್ಟ್ ಆಡಿದ ಮೊದಲ ತಂಡವೆನಿಸಲಿದೆ.
2021ರಲ್ಲಿ ಬ್ರಿಸ್ಟಾಲ್ನಲ್ಲಿ ಕೊನೆಯದಾಗಿ ಉಭಯ ತಂಡಗಳ ನಡುವೆ ಟೆಸ್ಟ್ ಪಂದ್ಯ ನಡೆದಿತ್ತು. ಆ ಪಂದ್ಯದಲ್ಲಿ ಭಾರತ ರೋಚಕ ಡ್ರಾ ಸಾಧಿಸಿತ್ತು. ಸ್ಮೃತಿ ಮಂದನಾ ಮೊದಲ ಇನಿಂಗ್ಸ್ನಲ್ಲಿ 78 ರನ್ ಸಿಡಿಸಿ ಗಮನಸೆಳೆದಿದ್ದರೆ, ಶೆಫಾಲಿ ವರ್ಮ 96 ಮತ್ತು 63 ರನ್ ಸಿಡಿಸಿ ಮಿಂಚಿದ್ದರು. ಭಾರತ ತಂಡ ಈ ಪಂದ್ಯದ ಬೆನ್ನಲ್ಲೇ ಪ್ರವಾಸ ಆಸ್ಟ್ರೆಲಿಯಾ ವಿರುದ್ಧವೂ ಡಿಸೆಂಬರ್ 21ರಿಂದ 24ರವರೆಗೆ ವಾಂಖೆಡೆಯಲ್ಲಿ ಏಕೈಕ ಟೆಸ್ಟ್ ಪಂದ್ಯವನ್ನು ಆಡಲಿದೆ.
ಭಾರತದಲ್ಲಿ ಈ ಮುನ್ನ 2014ರ ನವೆಂಬರ್ನಲ್ಲಿ ಮೈಸೂರಿನಲ್ಲಿ ಕೊನೆಯದಾಗಿ ಮಹಿಳೆಯರ ಟೆಸ್ಟ್ ಪಂದ್ಯ ನಡೆದಿತ್ತು. ದಕ್ಷಿಣ ಆಫ್ರಿಕಾ ವಿರುದ್ಧದ ಆ ಪಂದ್ಯದಲ್ಲಿ ಭಾರತ ಇನಿಂಗ್ಸ್ ಮತ್ತು 34 ರನ್ಗಳಿಂದ ಗೆದ್ದಿತ್ತು. ಮಿಥಾಲಿ ರಾಜ್ ಮತ್ತು ಜೂಲನ್ ಗೋಸ್ವಾಮಿ ನಿವೃತ್ತಿಯ ನಂತರ ಭಾರತ ಆಡುತ್ತಿರುವ ಮೊದಲ ಟೆಸ್ಟ್ ಪಂದ್ಯವೂ ಇದಾಗಿದೆ.
ಆರಂಭ: ಬೆಳಗ್ಗೆ 9.30, ನೇರಪ್ರಸಾರ: ಜಿಯೋಸಿನಿಮಾ