

ಕ್ಯಾರಾರಾ: ಭಾರತ ತಂಡದ ಎಡಗೈ ಆರಂಭಿಕ ಬ್ಯಾಟುಗಾರ್ತಿ ಸ್ಮತಿ ಮಂದನಾ ಆತಿಥೇಯ ಆಸೀಸ್ ವಿರುದ್ಧದ ಅಹರ್ನಿಶಿ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಆದರೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಅವರ ಈ ಶತಕ ಸಾಧನೆಗಿಂತ ಹೆಚ್ಚಾಗಿ, ಶತಕ ಸಂಭ್ರಮಿಸುವ ವೇಳೆ ಅವರ ಮುಖದ ಮೇಲೆ ಬಿದ್ದಿದ್ದ ಮುಂಗುರುಳು ಹೆಚ್ಚು ಸದ್ದು ಮಾಡುತ್ತಿದೆ!
ಮುಂಬೈನ 25 ವರ್ಷದ ಆಟಗಾರ್ತಿ ಸ್ಮತಿ ಶತಕದ ಸಂಭ್ರಮದ ಚಿತ್ರವನ್ನು ಟ್ವೀಟಿಸಿರುವ ಸಹ-ಆಟಗಾರ್ತಿ ಹರ್ಲೀನ್ ಡಿಯೋಲ್, ‘ಅಲೆಕ್ಸಾ ಪ್ಲೀಸ್ ಪ್ಲೇ: ಓಹ್ ಹಸೀನಾ ಝುಲ್ಫೋ ವಾಲಿ!!!(ಓಹ್ ಗುಂಗುರು ಕೂದಲ ಸುಂದರಿಯೆ)’ ಎಂದು ಬರೆದಿದ್ದರು. ಜತೆಗೆ ಸ್ಮತಿ ಅವರನ್ನು ಟ್ಯಾಗ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸ್ಮತಿ, ‘ಅಲೆಕ್ಸಾ ದಯವಿಟ್ಟು ಹರ್ಲೀನ್ ಡಿಯೋಲ್ ಬಾಯಿ ಮುಚ್ಚಿಸು (ಮ್ಯೂಟ್)’ ಎಂದು ತಮಾಷೆಯಾಗಿ ಟ್ವೀಟಿಸಿದ್ದರು.
ಇದರ ಬೆನ್ನಲ್ಲೇ ಇವರಿಬ್ಬರ ಈ ಸಂಭಾಷಣೆ ಭಾರಿ ವೈರಲ್ ಆಗಿದ್ದು, ಕ್ರಿಕೆಟ್ ಪ್ರೇಮಿಗಳು ಕೂಡ ಸ್ಮತಿ ಅವರ ಮುಂಗುರುಳಿನ ಲುಕ್ಗೆ ಮೆಚ್ಚುಗೆ ಸೂಚಿಸಿ ವಿವಿಧ ಕಾಮೆಂಟ್ಗಳನ್ನು ಹಾಕಿದ್ದಾರೆ. ಅನೇಕರು ಸ್ಮತಿ ಸಂಭ್ರಮಾಚರಣೆಯ ವಿಡಿಯೋಗೆ ಮೊಹಮದ್ ರಫಿ ಹಾಡಿರುವ ಈ ಜನಪ್ರಿಯ ಹಾಡನ್ನು ಎಡಿಟ್ ಮಾಡಿ ಹಂಚಿಕೊಂಡಿದ್ದಾರೆ.
ಯಾವ ಬಾಲಿವುಡ್ ಹೀರೋಯಿನ್ಗೂ ಕಡಿಮೆ ಇಲ್ಲದ ಸೌಂದರ್ಯ ಹೊಂದಿದ್ದಾರೆಂದು ಈ ಹಿಂದೆಯೂ ಹಲವು ಬಾರಿ ಕ್ರಿಕೆಟ್ ಪ್ರೇಮಿಗಳ ಗಮನಸೆಳೆದಿದ್ದ ಸ್ಮತಿ ಮಂದನಾ, ಈಗಲೂ ಸಿಂಗಲ್ ಆಗಿರುವರೇ ಎಂದೂ ಅನೇಕರು ಪ್ರಶ್ನಿಸಿದ್ದಾರೆ. ಇನ್ನು ಕೆಲವರು ಸ್ಮತಿ ಶತಕ ಸಾಧನೆಯನ್ನು ಪ್ರಶಂಸಿಸುವ ಬದಲಾಗಿ ಅವರ ಸೌಂದರ್ಯದ ಬಗ್ಗೆಯೇ ಹೆಚ್ಚಿನವರು ಚರ್ಚಿಸುತ್ತಿರುವ ಬಗ್ಗೆ ಅಸಮಾಧಾನವನ್ನೂ ವ್ಯಕ್ತಪಡಿಸಿದ್ದಾರೆ.