

ಮಾಳೆ(ಮಾಲ್ಡೀವ್ಸ್): ಅಪರಿಮಿತ ಶ್ರದ್ಧೆ ಮತ್ತು ಸತತ ಪರಿಶ್ರಮದಿಂದಲೇ ಉನ್ನತ ಸಾಧನೆ ಸಾಧ್ಯ. ಇದಕ್ಕೆ ಒಲಿಂಪಿಕ್ಸ್ನಲ್ಲಿ ಪದಕಗಳನ್ನು ಗೆದ್ದ ಭಾರತದ ಕ್ರೀಡಾಪಟುಗಳ ಜೀವನವೇ ನಿದರ್ಶನ. ಅದರಲ್ಲೂ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗಳಿಸಿದ ನೀರಜ್ ಚೋಪ್ರ ಅವರು, ಸದಾ ಕಾಲ ತಮ್ಮ ಕ್ರೀಡೆ ಬಗ್ಗೆಯೇ ಮನಸ್ಸು ಕೇಂದ್ರೀಕೃತವಾಗಿರುತ್ತೆ ಎಂದಿದ್ದಾರೆ.
ಹಾಲಿಡೇ ಮೇಲೆ ಮಾಲ್ಡೀವ್ಸ್ಗೆ ತೆರಳಿರುವ ಚೋಪ್ರ, ಸಮುದ್ರದಡಿಯಲ್ಲಿ ಸ್ಕೂಬಾ ಡೈವಿಂಗ್ ಮಾಡುತ್ತಾ ಜಾವೆಲಿನ್ ಎಸೆಯುವಂತೆ ನಟಿಸಿದ್ದಾರೆ. ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿ, "ಆಸ್ಮಾನ್ ಪರ್, ಜಮೀನ್ ಪೆ ಯಾ ಅಂಡರ್ವಾಟರ್, ಐ ಆ್ಯಮ್ ಥಿಂಕಿಂಗ್ ಆಫ್ ... ಜಾವೆಲಿನ್!"(ಆಕಾಶದಲ್ಲಿ, ನೆಲದ ಮೇಲೆ ಅಥವಾ ನೀರಿನಲ್ಲಿ, ನಾನು ಜಾವೆಲಿನ್ ಬಗ್ಗೆಯೇ ಯೋಚಿಸುತ್ತಿದ್ದೇನೆ) ಎಂದು ಶೀರ್ಷಿಕೆ ನೀಡಿದ್ದಾರೆ. ಜೊತೆಗೆ, ತರಬೇತಿ ಶುರುವಾಗಿ ಬಿಟ್ಟಿದೆ ಎಂದು ಬರೆದಿದ್ದಾರೆ.
13 ಗಂಟೆಗಳ ಹಿಂದಷ್ಟೇ ಪೋಸ್ಟ್ ಆಗಿರುವ ನೀರಜ್ ಚೋಪ್ರರ ಈ ಪೋಸ್ಟ್ಗೆ ಲಕ್ಷಾಂತರ ಅಭಿಮಾನಿಗಳು ಲೈಕ್ಗಳ ಸುರಿಮಳೆಗೈದಿದ್ದಾರೆ. ಸಾವಿರಾರು ಜನ ನಿಮ್ಮ ಶ್ರದ್ಧೆ ಮೆಚ್ಚುವಂಥದ್ದು ಎಂದು ಹೊಗಳಿದ್ದಾರೆ. ಮತ್ತೊಂದೆಡೆ, ಹೈಜಂಪರ್ ತೇಜಸ್ವಿನ್ ಶಂಕರ್ ಅವರು, "ವೆಕೇಶನ್ನಲ್ಲೂ ಜಾವೆಲಿನ್ನಾ? ಸ್ವಲ್ಪ ನಿನ್ನ ಮನಸ್ಸು ಮತ್ತು ದೇಹಕ್ಕೆ ವಿಶ್ರಾಂತಿ ಕೊಡಪ್ಪ" ಎಂದು ಕಾಮೆಂಟ್ ಮಾಡಿದ್ದಾರೆ. (ಏಜೆನ್ಸೀಸ್)