

ಡಲ್ಲಾಸ್: ಟಿ-20 ವಿಶ್ವಕಪ್ನ ಮೊದಲ ಪಂದ್ಯದಲ್ಲಿ ಕ್ರಿಕೆಟ್ ಶಿಶು ಎದುರು ಹೀನಾಯವಾಗಿ ಸೋಲುವ ಮೂಲಕ ತೀವ್ರ ಟೀಕೆಗೆ ಗುರಿಯಾಗಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ಮೇಲೆ ಈಗ ಮತ್ತೊಂದು ಆರೋಪ ಕೇಳಿ ಬಂದಿದ್ದು, ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ ತಲೆತಗ್ಗಿಸುವಂತಾಗಿದೆ. ಈ ಬಾರಿಯ ಟಿ-20 ವಿಶ್ವಕಪ್ನಲ್ಲಿ ವಿವಾದಗಳಿಂದಲೇ ಹೆಚ್ಚು ಸದ್ದು ಮಾಡುತ್ತಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರರು ಇದೀಗ ಬಾಲ್ ಟ್ಯಾಂಪರಿಂಗ್ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಯುಎಸ್ಎ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ತಂಡದ ವೇಗಿ ಹ್ಯಾರಿಸ್ ರೌಫ್ ಪಂದ್ಯದ ವೇಳೆ ಬಾಲ್ ಟ್ಯಾಂಪರಿಂಗ್ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಯುಎಸ್ಎ ತಂಡದ ವೇಗಿ ಆರೋಪಿಸಿದ್ದು, ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. ಈ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಈ ಸಂಬಂಧ ಐಸಿಸಿ ತನಿಖೆ ನಡೆಸಲಿದೆಯಾ ಎಂದು ಕಾದು ನೋಡಬೇಕಿದೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಯುಎಸ್ಎ ಕ್ರಿಕೆಟ್ ತಂಡದ ಆಟಗಾರ ರಸ್ಟಿ ಥೆರಾನ್, ಪಾಕಿಸ್ತಾನದ ವೇಗದ ಬೌಲರ್ ಹ್ಯಾರಿಸ್ ರೌಫ್ ವಿರುದ್ಧ ಚೆಂಡು ವಿರೂಪಗೊಳಿಸಿದ್ದಾರೆ. ಹ್ಯಾರಿಸ್ ರೌಫ್ ತನ್ನ ಬೆರಳಿನ ಉಗುರಿನಿಂದ ಚೆಂಡನ್ನು ವಿರೂಪಗೊಳಿಸಲು ಯತ್ನಿಸಿದ್ದಾರೆ. ಚೆಂಡನ್ನು ರಿವರ್ಸ್ ಸ್ವಿಂಗ್ ಮಾಡಲು ಹ್ಯಾರಿಸ್ ರೌಫ್ ಇಷ್ಟೆಲ್ಲ ಮಾಡಿದ್ದಾರೆ. ರನ್‌ಅಪ್‌ನಲ್ಲಿ ಹೋಗುವಾಗ ಹ್ಯಾರಿಸ್ ತನ್ನ ಹೆಬ್ಬೆರಳಿನ ಉಗುರಿನಿಂದ ಚೆಂಡನ್ನು ಉಜ್ಜಿದ್ದನ್ನು ನೀವು ಸ್ಪಷ್ಟವಾಗಿ ನೋಡಬಹುದು. ಹೀಗಾಗಿ ಈ ಬಗ್ಗೆ ಐಸಿಸಿ ಸೂಕ್ತ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
ಈ ಹಿಂದೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಿದ ಆರೋಪದ ಮೇಲೆ ಪಾಕಿಸ್ತಾನದ ಇಬ್ಬರು ಆಟಗಾರರು ಜೈಲು ಪಾಲಾಗಿದ್ದರು. ಈಗ ಮತ್ತೊಮ್ಮೆ ಈ ಆರೋಪ ಕೇಳಿ ಬಂದಿದ್ದು, ಇದನ್ನು ಯಾವ ರೀತಿ ಎದುರಿಸಲಿದ್ದಾರೆ ಎಂದು ಕಾದು ನೋಡಬೇಕಿದೆ.