Wasim Akram | ಈತ ಭಾರತ ತಂಡದ ಪಾಲಿಗೆ ರನ್​​ ಮಷಿನ್​..ತಮ್ಮದೇ ತಂಡದ ವೇಗಿಯನ್ನು ಟೀಕಿಸಿದ ಪಾಕ್​ ಮಾಜಿ ಕ್ರಿಕೆಟಿಗ ವಾಸಿಮ್ ಅಕ್ರಮ್!

Wasim Akram
Published on

Wasim Akram: ಸೆಪ್ಟೆಂಬರ್ 28 ರಂದು ನಡೆದ ಏಷ್ಯಾ ಕಪ್ ಫೈನಲ್‌ ಪಂದ್ಯದಲ್ಲಿ ಭಾರತದ ವಿರುದ್ಧದ ದುಬಾರಿಯಾಗಿರುವ ವೇಗಿ ಹ್ಯಾರಿಸ್ ರೌಫ್​​ರನ್ನು ಪಾಕ್​​ ಮಾಜಿ ಕ್ರಿಕೆಟಿಗ ವಾಸಿಮ್ ಅಕ್ರಮ್ ತರಾಟೆಗೆ ತೆಗೆದುಕೊಂಡಿದ್ದಾರೆ. ಕ್ರೀಡಾ ವಾಹಿನಿಯೊಂದಿಗೆ ಮಾತನಾಡಿದ ಅಕ್ರಮ್​, ಭಾರತ ವಿರುದ್ಧದ ಯಾವುದೇ ಟೂರ್ನಿ ಇರಲಿ, ರೌಫ್​ ದಾರಾಳವಾಗಿ ರನ್​ ಬಿಟ್ಟುಕೊಡುವ ಯಂತ್ರವಾಗಿದ್ದಾರೆ ಎಂದು ಕರೆದರು.

ಭಾರತ ಪಾಕ್​ ಪಂದ್ಯ ನಡೆದಾಗಲೆಲ್ಲಾ ಹ್ಯಾರಿಸ್ ರೌಫ್ ತಮ್ಮ ಸನ್ನೆಗಳ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ, ಆದರೆ, ಈ ಬಾರಿ ಕೇವಲ 3.5 ಓವರ್‌ಗಳಲ್ಲಿ 50 ರನ್‌ಗಳನ್ನು ಬಿಟ್ಟುಕೊಟ್ಟು ಭಾರತ ತಂಡದ ಗೆಲುವಿನ ಕಿರೀಟ ಮುಡಿಸಿದರು. ಇಂತಹ ದೊಡ್ಡ ಟೂರ್ನಿಗಳಲ್ಲಿ ರೌಫ್ ದುಬಾರಿಯಾಗುವುದು ವಾಸಿಮ್ ಅಕ್ರಮ್ ಟೀಕಿಸಿದರು. ಪದೇ ಪದೇ ಟೀಮ್​ ಇಂಡಿಯಾ ವಿರುದ್ಧ ಇದು ಮರುಕಳಿಸುತ್ತದೆ, ಟೆಸ್ಟ್​ ಕ್ರಿಕೆಟ್ ಆಡಲು ನಿರಾಕರಿಸಿರುವ ರೌಫ್ ಬೌಲಿಂಗ್​ನಲ್ಲಿ ಯಾವುದೇ ಸುಧಾರಣೆಯ ಲಕ್ಷಣಗಳು ಕಾಣಿಸುತ್ತಿಲ್ಲ, ಇದನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಗಂಭೀರವಾಗಿ ಪರಿಗಣಿಸಬೇಕು ಎಂದರು.

ಸಹಜವಾಗಿ ಕ್ರಿಕೆಟಿಗರಲ್ಲಿ ಬ್ಯಾಟರ್​ಗಳು ರನ್​ ಮಷಿನ್​ ಆಗಿರುತ್ತಾರೆ, ದುರದೃಷ್ಟವಶಾತ್ ಇಲ್ಲಿ ಬೌಲರ್ ಎದುರಾಳಿ ತಂಡದ ರನ್ ಮೆಷಿನ್ ಆಗಿದ್ದಾರೆ, ಅದು ವಿಶೇಷವಾಗಿ ಭಾರತದ ವಿರುದ್ಧವೇ, ನಾನು ಮಾತ್ರವಲ್ಲ, ಇಡೀ ದೇಶ ಅವರನ್ನು ಟೀಕಿಸುತ್ತಿದೆ, ಟೆಸ್ಟ್​​ ಕ್ರಿಕೆಟ್ ಆಡಲು ನಿರಾಕರಿಸುವ ಆಟಗಾರ ನಮ್ಮ ತಂಡದಲ್ಲಿ ಇರಲು ನಮಗೆ ಇಷ್ಟವಿಲ್ಲ. ಕನಿಷ್ಠ ನಾಲ್ಕು ಅಥವಾ ಐದು ಪ್ರಥಮ ದರ್ಜೆ ಪಂದ್ಯಗಳನ್ನು ಆಡಿ ಎಂದು ಅಕ್ರಮ್ ಸಲಹೆ ನೀಡಿದರು.

ಭಾರತದ ವಿರುದ್ಧ ಹ್ಯಾರಿಸ್​ ರೌಫ್..

ಹ್ಯಾರಿಸ್​ ರೌಫ್ ಭಾರತದ ವಿರುದ್ಧದ ಏಳು ಟಿ20 ಪಂದ್ಯಗಳಲ್ಲಿ 25.66 ಸರಾಸರಿ ಮತ್ತು 8.66 ಎಕಾನಮಿ ರೇಟ್‌ನಲ್ಲಿ 231 ರನ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ. ಈ ಏಷ್ಯಾಕಪ್ ಫೈನಲ್‌ನಲ್ಲಿ ಭಾರತದ ವಿರುದ್ಧ ಅವರ ಪ್ರದರ್ಶನ ಅವರಿಗೆ ಧೀರ್ಘಕಾಲ ನೆನಪಿನಲ್ಲಿರಲಿದೆ. 2022 ರ ಟಿ20 ವಿಶ್ವಕಪ್‌ನಲ್ಲಿ ರೌಫ್ ತಮ್ಮ 19 ನೇ ಓವರ್‌ನಲ್ಲಿ ನಿರ್ಣಾಯಕ 15 ರನ್‌ಗಳನ್ನು ಬಿಟ್ಟುಕೊಟ್ಟು 160 ರನ್‌ಗಳ ಗುರಿ ತಲುಪಲು ಪರೋಕ್ಷ ಕಾರಣರಾದರು. ಇತ್ತೀಚಿನ ಏಷ್ಯಾ ಕಪ್ ಫೈನಲ್ ಪಂದ್ಯದ ಕೊನೆಯ ಹಂತದಲ್ಲಿ, ತಿಲಕ್ ವರ್ಮಾ ಮತ್ತು ಶಿವಂ ದುಬೆ ರೌಫ್ ಬೌಲಿಂಗ್​ನಲ್ಲಿ 17 ರನ್ ಗಳಿಸಿದರು. ಇದು ಪಂದ್ಯದ ಸಂಪೂರ್ಣ ಚಿತ್ರಣವನ್ನೇ ಬದಲಾಯಿಸಿತು. 36 ಎಸೆತಗಳಲ್ಲಿ 64 ರನ್ ಗಳಿಸಬೇಕಾದ ಭಾರತಕ್ಕೆ ಆಗ 30 ಎಸೆತಗಳಲ್ಲಿ 47 ರನ್ ಅವಶ್ಯಕತೆ ಇತ್ತು. 18 ನೇ ಓವರ್‌ನಲ್ಲಿ, ರೌಫ್ 13 ರನ್ ಬಿಟ್ಟುಕೊಡುವ ಮೂಲಕ ಅದರ ಹಿಂದಿನ ಓವರ್‌ನಲ್ಲಿ ಕೇವಲ 6 ರನ್ ಬಿಟ್ಟುಕೊಟ್ಟಿದ್ದ ಶಾಹೀನ್ ಅಫ್ರಿದಿ ಶ್ರಮವನ್ನು ವ್ಯರ್ಥ ಮಾಡಿದರು. ಅಂತಿಮವಾಗಿ ರಿಂಕು ಸಿಂಗ್ ಬೌಂಡರಿ ಬಾರಿಸುವ ಮೂಲಕ ಭಾರತದ ಒಂಬತ್ತನೇ ಏಷ್ಯಾ ಕಪ್ ಗೆಲುವಿನ ಔಪಚಾರಕತೆ ಮುಗಿಸಿದರು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net