

ಅಮೆರಿಕಾ: ಭಾರತ ಮತ್ತು ಪಾಕಿಸ್ತಾನ ನಡುವಿನ ಐಸಿಸಿ ಟಿ-20 ವಿಶ್ವಕಪ್ ಹೈವೋಲ್ಟೇಜ್ ಕದನಕ್ಕೆ ಇನ್ನೇನು ಕೆಲವೇ ಗಂಟೆಗಳು ಮಾತ್ರ ಬಾಕಿ ಉಳಿದಿದ್ದು, ರೋಚಕ ಪಂದ್ಯ ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ಬಹಳ ಕುತೂಹಲದಿಂದ ಕಾಯತೊಡಗಿದ್ದಾರೆ. ಒಂದೆಡೆ ಎರಡು ಬಲಿಷ್ಠ ತಂಡಗಳು ಭರ್ಜರಿ ಪೈಪೋಟಿ ಕೊಡಲು ಮೈದಾನದಲ್ಲಿ ಸಕಲ ತಯಾರಿಗಳನ್ನು ಮಾಡಿಕೊಂಡಿದ್ದು, ಅಖಾಡದಲ್ಲಿ ಎಂತಹ ಥ್ರಿಲ್ಲಿಂಗ್ ಪ್ರದರ್ಶನ ಕೊಡಲಿದೆ ಎಂಬುದನ್ನು ಸದ್ಯ ಕಾದುನೋಡಬೇಕಿದೆ.
ಇನ್ನು ಈ ಹೈವೋಲ್ಟೇಜ್ ಪಂದ್ಯದಲ್ಲಿ ಎಲ್ಲರ ಚಿತ್ತ ಮೂಡಿರುವುದು ಟೀಂ ಇಂಡಿಯಾದ ಬೌಲರ್ಗಳ ಮೇಲೆ. ಪಾಕ್ ಬ್ಯಾಟ್ಸ್ಮನ್ಗಳ ವಿಕೆಟ್ ತೆಗೆದು ಸಂಭ್ರಮಿಸುವ ಕ್ಷಣವನ್ನು ಭಾರತದ ಸ್ಟಾರ್ ವೇಗಿಗಳು ಎಷ್ಟರ ಮಟ್ಟಿಗೆ ಈಡೇರಿಸುತ್ತಾರೆ ಎಂಬುದೇ ದೊಡ್ಡ ಪ್ರಶ್ನೆಯಾಗಿ ಅಭಿಮಾನಿಗಳಲ್ಲಿ ಕಾಡುತ್ತಿದೆ. ಅದರಲ್ಲೂ ಮಾಜಿ ಕ್ರಿಕೆಟಿಗರ ಕಣ್ಣು ಮಾತ್ರ ಉಪನಾಯಕ, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮೇಲಿದೆ. ಕಾರಣ, ಇಂದಿನ ಪಂದ್ಯದಲ್ಲಿ ಒಂದೇ ಒಂದು ವಿಕೆಟ್ ಪಡೆದರೆ ಪಾಂಡ್ಯ ಹೊಸ ದಾಖಲೆ ನಿರ್ಮಿಸಲಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ20 ಪಂದ್ಯದಲ್ಲಿ ಹಾರ್ದಿಕ್ ಪ್ರಮುಖ ವಿಕೆಟ್ ಟೇಕರ್ ಆಗಿ ಹೊರಹೊಮ್ಮುತ್ತಿದ್ದಾರೆ. ಆಲ್‌ರೌಂಡರ್ ಆಗಿ ಕಣಕ್ಕಿಳಿಯುವ ಪಾಂಡ್ಯ ಎದುರಾಳಿ ತಂಡದ ವಿರುದ್ಧ ಆರು ಪಂದ್ಯಗಳನ್ನು ಆಡಿದ್ದು, 11 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಪ್ರಸ್ತುತ ಸ್ವಿಂಗ್ ಸ್ಪೆಷಲಿಸ್ಟ್ ಭುವನೇಶ್ವರ್ ಕುಮಾರ್ ಮತ್ತು ಉಮರ್ ಗುಲ್ ಅವರೊಂದಿಗೆ ಈ ದಾಖಲೆಯನ್ನು ಹಂಚಿಕೊಳ್ಳಲಿದ್ದಾರೆ. ಇಂದು ಪಾಕ್ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಒಂದೇ ಒಂದು ವಿಕೆಟ್ ಗಳಿಸಿದರೆ, ಈ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನವನ್ನು ಅಲಂಕರಿಸಲಿದ್ದಾರೆ.
ಟಿ20 ವಿಶ್ವಕಪ್ ಟೂರ್ನಿಯಲ್ಲಿ ಐರ್ಲೆಂಡ್ ವಿರುದ್ಧ ತಮ್ಮ ಮೊದಲ ಪಂದ್ಯವಾಡಿದ ಟೀಂ ಇಂಡಿಯಾದ ಪರ ಹಾರ್ದಿಕ್ ಪಾಂಡ್ಯ, ಮೂರು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಎಲ್ಲರ ಗಮನಸೆಳೆದಿದ್ದರು. ಇಂದಿನ ಪಂದ್ಯದಲ್ಲಿಯೂ ಪಾಂಡ್ಯ ಮೇಲೆ ಅಪಾರ ನಿರೀಕ್ಷೆ ಮೂಡಿದ್ದು, ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲೂ ಕಮಾಲ್ ಮಾಡಲಿದ್ದಾರೆ ಎಂಬ ಭರವಸೆ ವ್ಯಕ್ತವಾಗಿದೆ,(ಏಜೆನ್ಸೀಸ್).