

ಮುಂಬೈ: ಇತ್ತೀಚೆಗಷ್ಟೇ ಗುಜರಾತ್ ಟೈಟಾನ್ಸ್ ತಂಡದಿಂದ ವರ್ಗಾವಣೆಗೊಂಡಿದ್ದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಮುಂಬರುವ ಐಪಿಎಲ್ 17ನೇ ಆವೃತ್ತಿಗೆ ಮುಂಬೈ ಇಂಡಿಯನ್ಸ್ ತಂಡದ ಹೊಸ ನಾಯಕರನ್ನಾಗಿ ಶುಕ್ರವಾರ ನೇಮಿಸಲಾಗಿದೆ. ಇದರೊಂದಿಗೆ ಮುಂಬೈ ಇಂಡಿಯನ್ಸ್ ಪರ 5 ಬಾರಿ ಐಪಿಎಲ್ ಟ್ರೋಫಿ ಗೆದ್ದಿದ್ದ ರೋಹಿತ್ ಶರ್ಮ ಅವರ "ಐಪಿಎಲ್ ನಾಯಕತ್ವ ಯುಗ' ಅಂತ್ಯಗೊಂಡಂತಾಗಿದೆ. ಅಲ್ಲದೆ ಐಪಿಎಲ್ನಲ್ಲಿ ಮೊದಲ ಬಾರಿಗೆ ಟೀಮ್ ಇಂಡಿಯಾದ ಪೂರ್ಣಪ್ರಮಾಣದ ನಾಯಕನೊಬ್ಬ ಸಾಮಾನ್ಯ ಆಟಗಾರನಾಗಿ ಆಡುವಂತಾಗಿದೆ. ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಸ್ಪಷ್ಟನೆ ನೀಡಿದೆ.
ಕಳೆದ ಆವೃತ್ತಿಗಳಿಂದ ಗುಜರಾತ್ ಟೈಟಾನ್ಸ್ ತಂಡವನ್ನು ಮುನ್ನಡೆಸುತ್ತಿದ್ದ ಹಾರ್ದಿಕ್, ತಂಡವನ್ನು ಒಮ್ಮೆ ಚಾಂಪಿಯನ್, ಒಮ್ಮೆ ರನ್ನರ್ಅಪ್ ಆಗಿಸಿದ್ದರು. ಕಳೆದ ತಿಂಗಳು 15 ಕೋಟಿ ರೂ. ಸಂಭಾವನೆಯೊಂದಿಗೆ ಅಚ್ಚರಿಯ ರೀತಿಯಲ್ಲಿ ಮುಂಬೈ ತಂಡಕ್ಕೆ ಮರಳಿದ್ದರು. ಈ ಮುನ್ನ 2015ರಿಂದ 2021ರವರೆಗೆ ಮುಂಬೈ ತಂಡದ ಆಟಗಾರರಾಗಿದ್ದ ಹಾರ್ದಿಕ್ ಮೊದಲ ಬಾರಿಗೆ ಈ ತಂಡವನ್ನು ಮುನ್ನಡೆಸುವ ಅವಕಾಶ ಪಡೆದಿದ್ದಾರೆ.
ಭವಿಷ್ಯದ ಯೋಜನೆಯ ಅನ್ವಯ ಹಾರ್ದಿಕ್ ಪಾಂಡ್ಯಗೆ ನಾಯಕತ್ವ ವಹಿಸಲಾಗಿದೆ. ರೋಹಿತ್ ಶರ್ಮ ಅವರ ನಾಯಕತ್ವಕ್ಕೂ ಕೃತಜ್ಞರಾಗಿರುವೆವು. ಅವರ ನಾಯಕತ್ವದಲ್ಲಿ ತಂಡ ಅಮೋ ಯಶಸ್ಸು ಕಂಡಿದೆ. ಐಪಿಎಲ್ ಇತಿಹಾಸ ಕಂಡ ಅತ್ಯುತ್ತಮ ನಾಯಕರಲ್ಲಿ ಒಬ್ಬರಾಗಿರುವ ರೋಹಿತ್, ಮುಂದೆಯೂ ತಂಡಕ್ಕೆ ಸೂಕ್ತ ಮಾರ್ಗದರ್ಶನ ನೀಡುವ ಮತ್ತು ತಂಡದೊಂದಿಗೆ ಅನುಭವವನ್ನು ಹಂಚಿಕೊಳ್ಳುವ ನಿರೀಕ್ಷೆಯಲ್ಲಿರುವೆವು ಎಂದು ಮುಂಬೈ ತಂಡದ ಗ್ಲೋಬಲ್ ಹೆಡ್ ಮಹೇಲ ಜಯವರ್ಧನೆ ತಿಳಿಸಿದ್ದಾರೆ.
ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡದ 5ನೇ ಪೂರ್ಣಪ್ರಮಾಣದ ನಾಯಕರಾಗಿದ್ದಾರೆ. ಸಚಿನ್ ತೆಂಡುಲ್ಕರ್, ಹರ್ಭಜನ್ ಸಿಂಗ್, ರಿಕಿ ಪಾಂಟಿಂಗ್, ರೋಹಿತ್ ಶರ್ಮ ಹಿಂದಿನ ನಾಯಕರು. ಈ ನಡುವೆ ಶಾನ್ ಪೊಲ್ಲಾಕ್, ಡ್ವೇನ್ ಬ್ರಾವೊ, ಕೈರಾನ್ ಪೊಲ್ಲಾರ್ಡ್, ಸೂರ್ಯಕುಮಾರ್ ಹಂಗಾಮಿ ನಾಯಕರಾಗಿ ತಂಡವನ್ನು ಮುನ್ನಡೆಸಿದ್ದಾರೆ.