

ವಡೋದರ: ಟೀಮ್ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ 10 ದಿನಗಳ ಹಿಂದೆಯಷ್ಟೇ ತಂದೆಯಾದ ಸಂಭ್ರಮ ಹಂಚಿಕೊಂಡಿದ್ದರು. ಪತ್ನಿ ನತಾಶಾ ಸ್ಟಾಂಕೋವಿಕ್ ಗಂಡು ಮಗುವಿಗೆ ಜನ್ಮ ನೀಡಿರುವ ವಿಷಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಜೂನ್ 30ರಂದು ಹಂಚಿಕೊಂಡಿದ್ದ ಹಾರ್ದಿಕ್ ಪಾಂಡ್ಯ ನಂತರದ ತಮ್ಮ ಪ್ರತಿ ಚಟುವಟಿಕೆಯನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮದಿಂದ ಹಂಚಿಕೊಳ್ಳುತ್ತಿದ್ದಾರೆ. ಆದರೂ, ಪುತ್ರ ಹೆಸರನ್ನು ಅವರಿನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ. ಈ ನಡುವೆ ಅವರು ತಮಗೆ ಗೊತ್ತಿಲ್ಲದಂತೆ ಮಗನ ಹೆಸರನ್ನು ಬಹಿರಂಗಗೊಳಿಸಿದ್ದಾರೆ ಎನ್ನಲಾಗುತ್ತಿದೆ.
ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಕಳೆದ ವಾರ ಆಸ್ಪತ್ರೆ ಸಿಬ್ಬಂದಿ ಜತೆಗೆ ಮಗುವಿನ ಜನನದ ಸಂಭ್ರಮವನ್ನು ಆಚರಿಸಿಕೊಂಡಿದ್ದರು. ಈ ವೇಳೆ ಕತ್ತರಿಸಲಾದ ಕೇಕ್ನಲ್ಲಿ ಅವರು ಮಗುವಿನ ಹೆಸರು ಬಹಿರಂಗಪಡಿಸಿದ್ದಾರೆ ಎನ್ನಲಾಗುತ್ತಿದೆ. ಕೇಕ್ನ ಮೇಲೆ 'ವೆಲ್ಕಂ ಪಾಂಡ್ಯ ಜೂನಿಯರ್ ಅಗಸ್ತ್ಯ' ಎಂದು ಬರೆಯಲಾಗಿತ್ತು. ಇದರಿಂದಾಗಿ ಮಗುವಿನ ಹೆಸರು 'ಅಗಸ್ತ್ಯ' ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿಶ್ಲೇಷಿಸಲಾಗುತ್ತಿದೆ.
ಕೇಕ್ ಕತ್ತರಿಸಿದ ಸಮಾರಂಭದ ಮೂಲಕ ಹಾರ್ದಿಕ್ ಪಾಂಡ್ಯ ಆಸ್ಪತ್ರೆ ಸಿಬ್ಬಂದಿಗೆ ಧನ್ಯವಾದ ಹೇಳಿದ್ದರು. 26 ವರ್ಷದ ಹಾರ್ದಿಕ್ ಪಾಂಡ್ಯ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿಯಲಿದ್ದಾರೆ.