

ಮುಂಬೈ: ಐಪಿಎಲ್ 2024ರ ಆವೃತ್ತಿ ಪ್ರಾರಂಭಗೊಂಡ ಮೊದಲ ದಿನದಿಂದಲೂ ಮುಂಬೈ ಇಂಡಿಯನ್ಸ್ ತಂಡದ ಮೇಲೆ ಕ್ರಿಕೆಟ್ ಅಭಿಮಾನಿಗಳಿಗೆ ಭಾರೀ ಅಸಮಾಧಾನವಿದೆ. ಇದಕ್ಕೆ ಕಾರಣ ಹಾರ್ದಿಕ್ ಪಾಂಡ್ಯ. ಮುಂಬೈ ತಂಡದ ನಾಯಕತ್ವ ಬದಲಾದಾಗಿನಿಂದ ಈ ಸಮಸ್ಯೆ ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ. ಐದು ಬಾರಿ ತಂಡವನ್ನು ಚಾಂಪಿಯನ್ಸ್ ಆಗಿ ಮಾಡಿದ್ದ ಶರ್ಮಾರನ್ನು ಕ್ಯಾಪ್ಟನ್ಸಿಯಿಂದ ತೆಗೆದು, ಆ ಸ್ಥಾನವನ್ನು ಪಾಂಡ್ಯಗೆ ಕೊಟ್ಟಿದ್ದು ಫ್ಯಾನ್ಸ್ಗೆ ಭಾರೀ ಆಘಾತ ತಂದೊಡ್ಡಿದೆ.
ಅಂದಿನಿಂದ ಇಂದಿನವರೆಗೂ ನೆಗಟಿವ್ ಆಗಿ ಕಾಣಿಸಿಕೊಂಡಿರುವ ಹಾರ್ದಿಕ್ ಪಾಂಡ್ಯ ವಿರುದ್ಧ ಕೇಳಿಬರುತ್ತಿರುವುದು ಕೇವಲ ಅಪಸ್ವರ ಮಾತ್ರ. ಮೊದಲ ಮ್ಯಾಚ್ನಿಂದ ಆರಂಭಗೊಂಡ ವಿರೋಧ, ಖಂಡನೆ ಇಂದಿಗೂ ಕಿಂಚಿತ್ತು ಕಡಿಮೆಯಾಗಿಲ್ಲ. ಅದಕ್ಕೆ ಇತ್ತೀಚಿನ ಬೆಳವಣಿಗೆಗಳೇ ಸಾಕ್ಷಿ. ಹಿಟ್ ಮ್ಯಾನ್ ನೋಡಲು ಉತ್ಸಾಹದಿಂದ ಸ್ಟೇಡಿಯಂಗೆ ಬರುತ್ತಿದ್ದ ಕ್ರಿಕೆಟ್ ಅಭಿಮಾನಿಗಳು, ಈಗ ಹಾರ್ದಿಕ್ ಕ್ಯಾಪ್ಟನ್ಸಿ ಕಂಡು ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ.
ಹಾರ್ದಿಕ್ ಪಾಂಡ್ಯ ನಾಯಕತ್ವವನ್ನು ಒಪ್ಪದ ಅಭಿಮಾನಿಗಳು, ಸ್ಟೇಡಿಯಂಗೆ ಬರುವ ಪಾಂಡ್ಯರನ್ನು ರೋಹಿತ್...ರೋಹಿತ್ ಮತ್ತು ಬೂ.... ಎಂದು ಕೂಗುವ ಮೂಲಕ ಹಿಯಾಳಿಸುತ್ತಿದ್ದಾರೆ. ಇದರ ಜತೆಗೆ ಇಲ್ಲಿಯವರೆಗೆ ಮುಂಬೈ ಒಂದೇ ಒಂದು ಪಂದ್ಯವನ್ನು ಸಹ ಗೆದ್ದಿಲ್ಲ. ಇದೆಲ್ಲವೂ ಹಾರ್ದಿಕ್ ನಾಯಕತ್ವಕ್ಕೆ ಕುತ್ತು ತಂದೊಡ್ಡಿದೆ. ಮೊನ್ನೆ ಮುಂಬೈನ ವಾಂಖಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಪಾಂಡ್ಯ ವಿರುದ್ಧ ಕಿರುಚಾಡಿದ ಅಭಿಮಾನಿಗಳ ಆರ್ಭಟವನ್ನು ತಾಳಲಾರದೆ ಮಧ್ಯಪ್ರವೇಶಿಸಿದ ರೋಹಿತ್, ದಯಮಾಡಿ ಸುಮ್ಮನಿರುವಂತೆ ಕೈಮುಗಿದು ಮನವಿ ಮಾಡಿದರು.
ಹಾರ್ದಿಕ್ ವಿರುದ್ಧ ಅಭಿಮಾನಿಗಳ ಅತಿರೇಕದ ವರ್ತನೆಗೆ ಸಿಡಿದೆದ್ದ ಭಾರತೀಯ ಕ್ರಿಕೆಟ್ ತಂಡದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್, ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಇದ್ಯಾವುದು ನೋಡಲು ಚೆನ್ನಾಗಿ ಕಾಣುತ್ತಿಲ್ಲ. ಪಾಂಡ್ಯರನ್ನು ಒಬ್ಬಂಟಿಯಾಗಿ ಬಿಡಲಾಗಿದೆ. ಫ್ರಾಂಚೈಸಿಯ ಆಟಗಾರರು ಅವರನ್ನು ಕ್ಯಾಪ್ಟನ್ ಆಗಿ ಸ್ವೀಕರಿಸಬೇಕು. ಅಭಿಮಾನಿಗಳು ಸಹ ಇದನ್ನು ಒಪ್ಪಿಕೊಳ್ಳಬೇಕು" ಎಂದರು.