

ನವದೆಹಲಿ: ಟೀಮ್ ಇಂಡಿಯಾ ಟಿ20 ವಿಶ್ವಕಪ್ನಲ್ಲಿ ಸತತ ಗೆಲುವಿನೊಂದಿಗೆ ಸೂಪರ್-8 ಹಂತವನ್ನು ತಲುಪಿದೆ. ಗ್ರೂಪ್ ಹಂತದಲ್ಲಿ ಐರ್ಲೆಂಡ್, ಪಾಕಿಸ್ತಾನ, ಅಮೆರಿಕ ತಂಡಗಳನ್ನು ಮಣಿಸಿರುವ ರೋಹಿತ್ ಸೇನೆ ಸೂಪರ್ 8 ಕದನಕ್ಕೂ ಮುನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ. ಆದರೆ, ನಿಜವಾದ ಸವಾಲು ಇದೀಗ ಎದುರಾಗಲಿದೆ.
ಭಾರತ ತಂಡವು ಅಫ್ಘಾನಿಸ್ತಾನ, ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶದಂತಹ ಅಪಾಯಕಾರಿ ತಂಡಗಳನ್ನು ಸೂಪರ್ 8 ಹಂತದಲ್ಲಿ ಎದುರಿಸಲಿದೆ. ಈ ಮೂರು ತಂಡಗಳು ವೆಸ್ಟ್ ಇಂಡೀಸ್ ಪಿಚ್‌ಗಳಲ್ಲಿ ಲೀಗ್ ಹಂತದ ಪಂದ್ಯಗಳನ್ನೂ ಆಡಿವೆ. ಇದರಿಂದಾಗಿ ಅಲ್ಲಿನ ಪಿಚ್ಗಳಿಗೆ ಒಗ್ಗಿಕೊಂಡಿವೆ. ಆದರೆ, ಭಾರತ, ಅಮೆರಿಕ ಪಿಚ್‌ಗಳಲ್ಲಿ ಗ್ರೂಪ್ ಪಂದ್ಯಗಳನ್ನು ಆಡಿದವು. ಹೀಗಾಗಿ ವಿಂಡೀಸ್ ಪಿಚ್ಗಳಿಗೆ ಒಗ್ಗಿಕೊಳ್ಳಬೇಕಾಗಿದೆ. ಹೀಗಾಗಿ ಕಠಿಣ ಅಭ್ಯಾಸ ಮಾಡಿದೆ. ಗ್ರೂಪ್ ಹಂತದಲ್ಲಿ ನಿರಾಸೆ ಮೂಡಿಸಿರುವ ಟೀಮ್ ಇಂಡಿಯಾದ ಬ್ಯಾಟಿಂಗ್ ಯೂನಿಟ್ ಇದೀಗ ಯಾವ ರೀತಿ ಪ್ರದರ್ಶನ ನೀಡಲಿದೆ ಎಂಬುದರ ಮೇಲೆ ಯಶಸ್ಸು ನಿಂತಿದೆ.
ಸೂಪರ್-8ರಲ್ಲಿ ನಿಜವಾದ ಪೈಪೋಟಿ ಇರುವುದು ಆಸ್ಟ್ರೇಲಿಯಾದ ಜೊತೆ. ಆಸಿಸ್ ತಂಡ ತುಂಬಾ ಅಪಾಯಕಾರಿ ಎಂದು ಎಲ್ಲರೂ ಭಾವಿಸುತ್ತಾರೆ. ಕಾಂಗರೂಗಳನ್ನು ಸೋಲಿಸಿದರೆ, ಭಾರತಕ್ಕೆ ಟ್ರೋಫಿ ಖಚಿತ ಎನ್ನಲಾಗುತ್ತಿದೆ. ಆದರೆ, ಈ ಮೆಗಾ ಟೂರ್ನಿಯಲ್ಲಿ ಅಫ್ಘಾನಿಸ್ತಾನ ತಂಡ ಸೂಪರ್ ಫಾರ್ಮ್‌ನಲ್ಲಿದೆ. ಕೆರಿಬಿಯನ್ ಪಿಚ್ ಗಳನ್ನು ಬಳಸಿಕೊಂಡು ತಂಡದ ಸ್ಪಿನ್ನರ್ಗಳು ಬಿರುಸಿನ ಬೌಲಿಂಗ್ ದಾಳಿ ಮಾಡುತ್ತಿದ್ದಾರೆ. ಆಫ್ಘಾನ್ ಬ್ಯಾಟ್ಸ್‌ಮನ್‌ಗಳು ಇಲ್ಲಿ ದೊಡ್ಡ ಸ್ಕೋರ್‌ಗಳನ್ನು ಬಾರಿಸುತ್ತಿದ್ದಾರೆ. ಹೀಗಾಗಿ ಆಫ್ಘಾನ್ ಕೂಡ ಟೀಮ್ ಇಂಡಿಯಾಗೆ ಬೆದರಿಕೆ ಆಗಬಹುದು ಎಂದು ಅನೇಕ ಕ್ರಿಕೆಟ್ ಪರಿಣಿತರು ಹೇಳುತ್ತಾರೆ. ಅನುಭವಿ ಸ್ಪಿನ್ನರ್ ಹರ್ಭಜನ್ ಸಿಂಗ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಫ್ಘಾನಿಸ್ತಾನವನ್ನು ಕಡಿಮೆ ಅಂದಾಜು ಮಾಡಬಾರದು. ತಂಡವನ್ನು ಲಘುವಾಗಿ ಪರಿಗಣಿಸಿದರೆ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ನಾಯಕ ರೋಹಿತ್ ಶರ್ಮಗೆ ಭಜ್ಜಿ ಎಚ್ಚರಿಕೆ ನೀಡಿದ್ದಾರೆ.
ಅಫ್ಘಾನಿಸ್ತಾನ ಉತ್ತಮ ತಂಡ. ಆ ತಂಡ ಉತ್ತಮವಾಗಿ ಆಡುತ್ತಿದೆ. ಅತಿ ಕಡಿಮೆ ಸಮಯದಲ್ಲಿ ತಂಡ ಎತ್ತರಕ್ಕೆ ಬೆಳೆದಿದೆ. ಅಫ್ಘಾನಿಸ್ತಾನ ತಂಡದಲ್ಲಿ ರಶೀದ್ ಖಾನ್, ಮೊಹಮ್ಮದ್ ನಬಿಯಂತಹ ಮ್ಯಾಚ್ ವಿನ್ನರ್‌ಗಳಿದ್ದಾರೆ. ಆ ತಂಡದ ಸ್ಪಿನ್ ದಾಳಿ ಅತ್ಯುತ್ತಮವಾಗಿದೆ. ಈ ಪಂದ್ಯಾವಳಿಯಲ್ಲಿ ಅಫ್ಘಾನಿಸ್ತಾನವು ಅಮೋಘವಾದ ಸ್ಪಿನ್ನರ್‌ಗಳನ್ನು ಹೊಂದಿದೆ. ಬ್ಯಾಟ್ಸ್‌ಮನ್‌ಗಳು ಯಾವುದೇ ದೊಡ್ಡ ತಂಡವನ್ನು ಸೋಲಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಹೀಗಾಗಿ ಅವರನ್ನು ಕಡಿಮೆ ಅಂದಾಜು ಮಾಡಬೇಡಿ, ಅವರ ಜೊತೆ ಎಚ್ಚರಿಕೆಯಿಂದಿರಿ ಎಂದು ಭಜ್ಜಿ ಟೀಮ್ ಇಂಡಿಯಾಗೆ ಸಲಹೆ ನೀಡಿದ್ದಾರೆ.
ಟೀಮ್ ಇಂಡಿಯಾ ಇಂದು ಅಫ್ಘಾನಿಸ್ತಾನ ವಿರುದ್ಧ ಸೂಪರ್ 8 ಹಂತದ ಮೊದಲ ಪಂದ್ಯವನ್ನು ಆಡಲಿದೆ. ಈ ಹಿನ್ನೆಲೆಯಲ್ಲಿ ಭಜ್ಜಿ ಈ ಹೇಳಿಕೆಯನ್ನು ನೀಡಿದ್ದಾರೆ. (ಏಜೆನ್ಸೀಸ್)