ತಿರುವನಂತಪುರಂ: ಸಾಮಾಜಿಕ ಜಾಲತಾಣವನ್ನು ಹೆಚ್ಚಾಗಿ ಬಳಸುವವರಿಗೆ ಅಮಲಾ ಶಾಜಿ ಬಗ್ಗೆ ಹೆಚ್ಚಾಗಿ ಹೇಳಬೇಕಿಲ್ಲ. ಇನ್‌ಸ್ಟಾಗ್ರಾಂ ಮತ್ತು ಫೇಸ್ಬುಕ್ ರೀಲ್ಸ್ನಲ್ಲಿ ಹಾಗೂ ಯೂಟ್ಯೂಬ್ ಶಾರ್ಟ್ನಲ್ಲಿ ಅಮಲಾ ಹಾವಳಿ ಜೋರಾಗಿಯೇ ಇರುತ್ತದೆ. ಇನ್ಸ್ಟಾಗ್ರಾಂನಲ್ಲಿ ಬರೋಬ್ಬರಿ 4 ಮಿಲಿಯನ್ಗೂ ಅಧಿಕ ಫಾಲೋವರ್ಸ್ ಹೊಂದಿರುವ ಅಮಲಾ, ಕೇವಲ ರೀಲ್ಸ್ನಿಂದ ಮಾತ್ರವಲ್ಲ ಸಿನಿಮಾ ಪ್ರಚಾರಗಳನ್ನು ಮಾಡುವ ಮೂಲಕ ಹಣ ಸಂಪಾದನೆ ಮಾಡುತ್ತಾರೆ. ಕೇರಳದ ತ್ರಿವೆಂಡ್ರಮ್ ಮೂಲದ ಅಮಲಾ ಅವರು ಅನೇಕ ಬಾರಿ ಸಿನಿಮಾ ವೇದಿಕೆಗಳಲ್ಲೂ ಕಾಣಿಸಿಕೊಂಡಿದ್ದಾರೆ. ಜಾಲತಾಣದಲ್ಲಿ ಆಕೆಯ ಖ್ಯಾತಿ ಸೆಲೆಬ್ರಿಟಿ ಪಟ್ಟವನ್ನು ತಂದುಕೊಟ್ಟಿದೆ.
ತಾಜಾ ಸಂಗತಿ ಏನೆಂದರೆ, ತಿರುವನಂತಪುರಂ ಮೂಲದ ರೀಲ್ಸ್ ಸ್ಟಾರ್ ಆದಿತ್ಯಾ ಎಸ್ ನಾಯರ್ ಎಂಬಾಕೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಳೆದ ಕೆಲವು ದಿನಗಳಿಂದ ಭಾರಿ ಸುದ್ದಿಯಾಗಿತ್ತು. 17 ವರ್ಷದ ಆದಿತ್ಯಾ ಆತ್ಮಹತ್ಯೆ ಪ್ರಕರಣದಲ್ಲಿ ಯುವ ಇನ್‌ಸ್ಟಾಗ್ರಾಂ ಸ್ಟಾರ್ನನ್ನು ಬಂಧಿಸಲಾಗಿದೆ. ಇದೇ ಸಂದರ್ಭದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಕೇರಳದ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಅಮಲಾ ಶಾಜಿ ಅವರು ಹಂಚಿಕೊಂಡ ಪೋಸ್ಟ್ ಒಂದು ಸಾಕಷ್ಟು ಗಮನ ಸೆಳೆಯುತ್ತಿದೆ.
ಜೀವನವು ನಿರಾಶೆಗಳು, ವೈಫಲ್ಯಗಳು ಮತ್ತು ಹಿನ್ನಡೆಗಳಿಂದ ತುಂಬಿದೆ. ಅವುಗಳಲ್ಲಿ ಯಾವುದೂ ನಿಮ್ಮನ್ನು ಶಾಶ್ವತವಾಗಿ ತಡೆಯಲು ಸಾಧ್ಯವಿಲ್ಲ. ಜೀವನದಲ್ಲಿ ನಿಮಗೆ ಎದುರಾಗುವ ಎಲ್ಲವನ್ನೂ ಜಯಿಸುವ ಶಕ್ತಿಯನ್ನು ನೀವು ಹೊಂದಿದ್ದೀರಿ. ಸದೃಢ ಮನಸ್ಸಿನಷ್ಟು ಶಕ್ತಿಯುತವಾದದ್ದು ಯಾವುದೂ ಇಲ್ಲ. ಯಾವುದೇ ವ್ಯಕ್ತಿ ಅಥವಾ ಸನ್ನಿವೇಶವು ನೀವು ಯಾರೆಂದು ವ್ಯಾಖ್ಯಾನಿಸಲು ಸಾಧ್ಯವಿಲ್ಲ. ನಿಮ್ಮ ಮೇಲೆ ನೀವು ನಂಬಿಕೆ ಇಡಿ. ನೀವು ಸ್ಟ್ರಾಂಗ್ ಆಗಿದ್ದೀರಿ ಎಂದು ಅಮಲಾ ತಮ್ಮ ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ.
ಯಾರು ಆದಿತ್ಯಾ ಎಸ್ ನಾಯರ್?
ಕೇರಳ ರಾಜ್ಯದ ತಿರುವನಂತಪುರಂ ಪಟ್ಟಣದ ಕುನ್ನುಪುಳ ಪ್ರದೇಶದ ಆದಿತ್ಯಾ ಎಸ್ ನಾಯರ್ (18) ಎಂಬ ಯುವತಿ ಸಾಮಾಜಿಕ ಜಾಲತಾಣಗಳ ಮೂಲಕ ಫೇಮಸ್ ಆಗಿದ್ದಳು. ಇನ್ಸ್ಟಾಗ್ರಾಂನಲ್ಲಿ ರೀಲ್ಸ್ ಮೂಲಕ ಉತ್ತಮ ಜನಪ್ರಿಯತೆ ಗಳಿಸಿದ್ದಳು. ತನ್ನ ವಿಡಿಯೋಗಳ ಮೂಲಕ ಸಾಕಷ್ಟು ಫಾಲೋವರ್ಸ್ ಹೊಂದಿದ್ದಳು. ಇದರ ನಡುವೆ ಬಿನೋಯ್ ಎಂಬ ಯುವಕ ಇನ್ಸ್ಟಾ ಮೂಲಕ ಆದಿತ್ಯಾಗೆ ಪರಿಚಯವಾದನು. ಆ ಪರಿಚಯ ಸ್ನೇಹಕ್ಕೆ ತಿರುಗಿ ಪ್ರೀತಿಗೆ ಕಾರಣವಾಯಿತು. ಆದಿತ್ಯಾ ಮತ್ತು ಬಿನೋಯ್ ಪ್ರೀತಿಯಲ್ಲಿ ಬಿದ್ದರು. ಅಲ್ಲದೆ, ಒಟ್ಟಿಗೆ ವಿಡಿಯೋ ಸಹ ಮಾಡುತ್ತಿದ್ದರು. ಹೀಗಾಗಿ ಈ ಇಬ್ಬರು ಯೂಟ್ಯೂಬ್ ಮತ್ತು ಇನ್‌ಸ್ಟಾಗ್ರಾಂ ವಿಡಿಯೋಗಳ ಮೂಲಕ ತಮ್ಮ ಫಾಲೋವರ್ಸ್‌ಗಳನ್ನು ಹೆಚ್ಚಿಸಿಕೊಂಡಿದ್ದರು. ಆದರೆ, ಇದ್ದಕ್ಕಿದ್ದಂತೆ ಇಬ್ಬರಿಗೂ ಏನಾಯಿತೋ ಏನೋ ಎರಡು ತಿಂಗಳ ಹಿಂದೆ ತಾವಿಬ್ಬರು ಬೇರೆಯಾಗುತ್ತಿರುವುದಾಗಿ ಘೋಷಿಸಿದರು. ಇದಾದ ಬಳಿಕವೇ ಆದಿತ್ಯಾಗೆ ಸಮಸ್ಯೆ ಆರಂಭವಾಯಿತು. ಟ್ರೋಲಿಗರು ಬಿನೋಯ್ ಅವರನ್ನು ಬೆಂಬಲಿಸಿ, ಆದಿತ್ಯಾ ಅವರನ್ನು ಟ್ರೋಲ್ ಮಾಡಲು ಆರಂಭಿಸಿದರು. ಕೆಟ್ಟದಾಗಿ ಕಾಮೆಂಟ್ಗಳನ್ನು ಪೋಸ್ಟ್ ಮಾಡಿ, ಮಾನಸಿಕವಾಗಿ ಹಿಂಸೆ ನೀಡಿದರು. ಮೀಮ್‌ಗಳನ್ನು ಹಾಕಿ ಟ್ರೋಲ್ ಮಾಡವ ಮಟ್ಟಕ್ಕೆ ಹೋದರು. ಟ್ರೋಲ್‌ಗಳನ್ನು ದೀರ್ಘಕಾಲ ಸಹಿಸಿಕೊಂಡ ಆದಿತ್ಯಾ ಒಳಗೊಳಗೆ ಮಾನಸಿಕವಾಗಿ ಕುಗ್ಗಿದ್ದರು. ಕೊನೆಗೆ ಆಕೆಯ ಮೇಲಿನ ಟ್ರೋಲ್‌ಗಳನ್ನು ಸಹಿಸಲಾಗದೆ ಜೂನ್ 10 ರಂದು ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಟುಂಬ ಸದಸ್ಯರು ಆದಿತ್ಯಾಳನ್ನು ಗಮನಿಸಿ ತಕ್ಷಣ ಆಸ್ಪತ್ರೆಗೆ ದಾಖಲಿಸಿದರು. ಅಂದಿನಿಂದ ಚಿಕಿತ್ಸೆ ಪಡೆಯುತ್ತಿದ್ದ ಆದಿತ್ಯ ಕಳೆದ ಭಾನುವಾರ ಕೊನೆಯುಸಿರೆಳೆದಿದ್ದಾರೆ. ಅಲ್ಲಿಯವರೆಗೆ ಟ್ರೋಲ್ ಮಾಡುತ್ತಿದ್ದ ಮೇಮರ್ಗಳು ಇದೀಗ ಸಂತಾಪ ಸೂಚಿಸಿ ಪೋಸ್ಟ್ ಹಾಕುತ್ತಿದ್ದಾರೆ.
ಅಂದಹಾಗೆ ಕೇರಳವಲ್ಲದೆ ತಮಿಳುನಾಡು ಮತ್ತು ತೆಲಂಗಾಣದಲ್ಲೂ ಅಮಲಾಗೆ ಅಭಿಮಾನಿಗಳಿದ್ದಾರೆ. ಅಮಲಾ ಇನ್‌ಸ್ಟಾಗ್ರಾಮ್‌ನಲ್ಲಿ 4.4 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಅಮಲಾ ತನ್ನ ವಾಟ್ಸಾಪ್ ಚಾನೆಲ್‌ನಲ್ಲಿ 7.7 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದಾರೆ. ಅಮಲಾ ಇತ್ತೀಚೆಗಷ್ಟೇ ಹೊಸ ಕಾರು ಪಡೆದು ಹೊಸ ಮನೆಗೆ ತೆರಳುತ್ತಿರುವ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಸಿನಿಮಾ ತಾರೆಯರು ಸೇರಿದಂತೆ ಹಲವರು ಆಕೆಗೆ ಅಭಿನಂದನೆ ಸಲ್ಲಿಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಟಿಕ್ಟಾಕ್ನಲ್ಲಿ ಹಿಟ್ ಆದ ಈ ತಾರೆ, ನಂತರ ಇನ್‌ಸ್ಟಾಗ್ರಾಮ್‌ಗೆ ತೆರಳಿದರು. ಅಮಲಾ ಅವರ ಸಹೋದರಿ ಅಮೃತಾ ಶಾಜಿ ಕೂಡ ಇನ್‌ಸ್ಟಾಗ್ರಾಂ ಸ್ಟಾರ್. ತಿರುವನಂತಪುರಂ ಮೂಲದ ಇಬ್ಬರೂ ಕಾಲೇಜು ವಿದ್ಯಾರ್ಥಿನಿಯರು.
ಇದೇ ಅಮಲಾ ಶಾಜಿ ಈ ಹಿಂದೆ ತಮಿಳು ನಿರ್ದೇಶಕನ ಬಳಿ 30 ನಿಮಿಷದ ಸಿನಿಮಾ ಪ್ರಚಾರದ ವಿಡಿಯೋಗೆ 2 ಲಕ್ಷ ರೂ. ಕೇಳಿ ಕೆಂಗಣ್ಣಿಗೆ ಗುರಿಯಾಗಿದ್ದರು. ಸಾಮಾಜಿಕ ಜಾಲತಾಣದಲ್ಲೂ ಈ ವಿಚಾರ ಬಹಳಷ್ಟು ಚರ್ಚೆಯಾಗಿತ್ತು. (ಏಜೆನ್ಸೀಸ್)
ದುಷ್ಕೃತ್ಯದಿಂದ ನೆಮ್ಮದಿ ಹಾಳು: ಯುಗಾದಿಯಂದೇ ದರ್ಶನ್ ಬಗ್ಗೆ ಸ್ವಾಮೀಜಿ ನುಡಿದಿದ್ದ ಭವಿಷ್ಯ ನಿಜವಾಯ್ತು!