ಈ ವರ್ಷ MI​ ಕಪ್​ ಗೆಲ್ಲದಿದ್ರೆ ಇನ್ನುಳಿದ ತಂಡಗಳಿಗೂ ಗೆಲ್ಲಲು ಅರ್ಹತೆ ಇಲ್ಲ: 'ಬಜ್ಜಿ' ಹೇಳಿಕೆ ವೈರಲ್​

ವಿಜಯವಾಣಿ - 2025-05-02T070810.043
Published on

MI vs RR: ನಿನ್ನೆ (ಮೇ.01) ಸವಾಯಿ ಮಾನ್​ಸಿಂಗ್ ಕ್ರೀಡಾಂಗಣದಲ್ಲಿ ನಡೆದ ರಾಜಸ್ಥಾನ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್​ ನಡುವಿನ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಪಡೆ 100 ರನ್​ಗಳ ಭರ್ಜರಿ ಜಯ ಸಾಧಿಸಿತು.

ಕೇವಲ 16.1 ಓವರ್​ನೊಳಗೆ ಆಲ್​ಔಟ್ ಆದ ರಾಜಸ್ಥಾನ ರಾಯಲ್ಸ್​, ವೈಭವ್ ಸೂರ್ಯವಂಶಿ, ಯಶಸ್ವಿ ಜೈಸ್ವಾಲ್​ರಿಂದ ಅಮೋಘ ಇನ್ನಿಂಗ್ಸ್​ ಕಾಣಲು ಸಾಧ್ಯವಾಗಲಿಲ್ಲ. ಇವರೊಂದಿಗೆ ಮಧ್ಯಮ ಕ್ರಮಾಂಕ ಬ್ಯಾಟರ್​ಗಳು ಬ್ಯಾಕ್ ಟು ಬ್ಯಾಕ್ ವಿಕೆಟ್​ ಒಪ್ಪಿಸಿದ ಕಾರಣ, ಆರ್​ಆರ್ ಬಹುಬೇಗನೇ ಪಂದ್ಯವನ್ನು ಮುಂಬೈಗೆ ಬಿಟ್ಟುಕೊಟ್ಟಿತು. ಐಪಿಎಲ್​ ಇತಿಹಾಸದಲ್ಲಿ 100 ರನ್​ಗಳ ಗೆಲುವು ದಾಖಲಿಸಿದ ತಂಡ ಎಂಬ ಪಟ್ಟಿಗೆ ಸೇರಿದ ಮುಂಬೈ ಇಂಡಿಯನ್ಸ್​, ಈ ಬಾರಿಯ ಆವೃತ್ತಿಯಲ್ಲಿ ಸತತವಾಗಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ.

ಆರಂಭದಲ್ಲಿ ಅಂಕಪಟ್ಟಿಯಲ್ಲಿ ಕೆಳ ಸ್ಥಾನದಲ್ಲಿದ್ದ ಹಾರ್ದಿಕ್ ಪಡೆ ಇದೀಗ ಕಳೆದ ಏಳು ಪಂದ್ಯಗಳಿಂದ ಸತತ ಗೆಲುವು ಸಾಧಿಸುತ್ತ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. 217 ರನ್​ಗಳ ಬೃಹತ್​ ಗುರಿಯನ್ನು ನೀಡಿ, ಬರೋಬ್ಬರಿ 100 ರನ್​ನಿಂದ ಗೆದ್ದು ಬೀಗಿದ ಮುಂಬೈ ಇಂಡಿಯನ್ಸ್​ಗೆ ಕ್ರಿಕೆಟ್ ಅಭಿಮಾನಿಗಳು ಮತ್ತು ಮಾಜಿ ಕ್ರಿಕೆಟಿಗರು ಮೆಚ್ಚುಗೆಗಳ ಮಹಾಪೂರವನ್ನೇ ಹರಿಸಿದ್ದಾರೆ. ಇನ್ನು ಈ ಕುರಿತು ಮಾತನಾಡಿರುವ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್, ಖುಷಿಯ ಭರದಲ್ಲಿ ಮತ್ತೊಂದು ವಿವಾದಕ್ಕೆ ಗುರಿಯಾಗುವಂತ ಹೇಳಿಕೆ ನೀಡಿದ್ದಾರೆ.

"ಮುಂಬೈ ಇಂಡಿಯನ್ಸ್ ಈ ವರ್ಷ ಐಪಿಎಲ್ ಟ್ರೋಫಿ ಗೆಲ್ಲಲು ಅರ್ಹ ತಂಡ. ಅಕಸ್ಮಾತ್ ಮುಂಬೈ ಏನಾದರೂ ಈ ವರ್ಷ ಐಪಿಎಲ್ ಟ್ರೋಫಿ ಗೆಲ್ಲದಿದ್ದರೆ, ಇತರ ಫ್ರಾಂಚೈಸಿಗಳು ಸಹ ಟ್ರೋಫಿ ಎತ್ತುವ ಅರ್ಹತೆ ಕಳೆದುಕೊಳ್ಳುತ್ತದೆ. ಜಸ್ಪ್ರೀತ್ ಬುಮ್ರಾ ಸಖತ್ ಕಮ್​ಬ್ಯಾಕ್ ಮಾಡಿದ್ದಾರೆ. ಬುಮ್ರಾ ಜತೆಗೆ ಟ್ರೆಂಟ್​ ಬೌಲ್ಟ್, ದೀಪಕ್ ಚಹರ್, ವಿಲ್ ಜ್ಯಾಕ್ಸ್, ಹಾರ್ದಿಕ್, ಕರಣ್ ಮತ್ತು ಕಾರ್ಬಿನ್ ಬಾಷ್ ತಂಡದಲ್ಲಿ ಉತ್ತಮ ಬೌಲಿಂಗ್ ಆಯ್ಕೆಯಾಗಿದ್ದಾರೆ. ಕಪ್​ ಗೆಲ್ಲುವ ಒಂದು ಅತ್ಯುತ್ತಮ ತಂಡವನ್ನೇ ಮುಂಬೈ ಹೊಂದಿದೆ. ಆರನೇ ಬಾರಿಗೆ ಎಂಐ ಟ್ರೋಫಿ ಎತ್ತುವುದು ಖಚಿತ" ಎಂದು ಬಜ್ಜಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net